ನವ ದೆಹಲಿ: ಕೊರೋನೋತ್ತರ ಕಾಲದಲ್ಲಿ ಕಂಡುಬರುತ್ತಿರುವ ಹಲವು ಆರೋಗ್ಯ ಸಮಸ್ಯೆಗಳಿಗೆ ಒಂದೋ ಕೊರೊನಾದ ಅಡ್ಡ ಪರಿಣಾಮ ಎಂದೋ ಅಥವಾ ಕೋವಿಡ್ ವ್ಯಾಕ್ಸಿನ್‌ನಿಂದ ಆಗಿರುವ ಸಮಸ್ಯೆ ಎಂದೋ ಹೇಳುವುದು ಸಾಮಾನ್ಯವಾಗಿದೆ. ಅದರಲ್ಲೂ ಮುಖ್ಯವಾಗಿ ಯುವಜನರಲ್ಲಿ ಹೆಚ್ಚುತ್ತಿರುವ ಹೃದಯ ರೋಗ ಮತ್ತಿತರ ತೊಂದರೆಗಳಿಗೆ ಲಸಿಕೆಯೇ ಕಾರಣ ಎಂದು ಅಪಾದಿಸಲಾಗುತ್ತಿದೆ. ಹಾಗಿದ್ದರೆ ಈ ಆರೋಪಗಳು ಎಷ್ಟು ನಿಜ? ಈ ಬಗ್ಗೆ ಸಂಶೋಧನೆಗಳು ನಡೆದಿವೆಯೇ?
ಕೋವಿಡ್ 19 ಎಂಆರ್‌ಎನ್‌ಎ ವ್ಯಾಕ್ಸಿನ್ ಎರಡೂ ಡೋಸ್‌ಗಳನ್ನೂ ಪಡೆದ ಬಳಿಕ 18ರಿಂದ 25 ವರ್ಷದೊಳಗಿನ ಯುವಜನರಲ್ಲಿ ಹೃದಯ ರೋಗ ಸಮಸ್ಯೆಯ ಅಪಾಯ ಹೆಚ್ಚಾಗಿದೆ ಎಂದು ಅಮೆರಿಕದ ವೈದ್ಯಕೀಯ ನಿಯಂತ್ರಕ ಸಂಸ್ಥೆ ನಡೆಸಿದ ಒಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಆದರೆ, ಇಂಥ ಪ್ರಕರಣಗಳು ಎಲ್ಲೆಲ್ಲೂ ಇದೆ ಹೇಳಲಾಗದು. ಅಪರೂಪಕ್ಕೆ ನಡೆದಿರುವುದು ನಿಜ ಎಂದು ಅದರಲ್ಲಿ ಹೇಳಲಾಗಿದೆ.
ಎಂಆರ್‌ಎನ್‌ಎ (mRNA) ಆಧರಿತ ವ್ಯಾಕ್ಸಿನ್‌ನ ಎರಡನೇ ಚುಚ್ಚುಮದ್ದನ್ನೂ ತೆಗೆದುಕೊಂಡ ಬಳಿಕ, 18ರಿಂದ 25 ವರ್ಷ ವಯಸ್ಸಿನ ಯುವಕರಲ್ಲಿ ಮಯೋಕಾರ್ಡೈಟಿಸ್ ಮತ್ತು ಪೆರಿಕಾರ್ಡೈಟಿಸ್ ಸಮಸ್ಯೆಗಳು ಗೋಚರಿಸಿವೆ ಎಂದು ಲ್ಯಾನ್ಸೆಟ್ ವೈದ್ಯಕೀಯ ನಿಯತಕಾಲಿಕದಲ್ಲಿ ಹೇಳಲಾಗಿದೆ. ಹೃದಯದ ಸ್ನಾಯುಗಳಲ್ಲಿ ಊತ ಕಂಡುಬಂದರೆ ಅದನ್ನು ಮಯೋಕಾರ್ಡೈಟಿಸ್ ಎಂದೂ, ಹೃದಯದ ಹೊರಕವಚದಲ್ಲಿ ಊತ ಕಂಡುಬಂದರೆ ಅದನ್ನು ಪೆರಿಕಾರ್ಡೈಟಿಸ್ ಎಂದೂ ಕರೆಯಲಾಗುತ್ತದೆ.
ಎಂಆರ್‌ಎನ್‌ಎ ವ್ಯಾಕ್ಸಿನ್ (ಮಾಡೆರ್ನಾ ವ್ಯಾಕ್ಸಿನ್) ಮತ್ತು ಬಿಎನ್‌ಟಿ162ಬಿ2 ವ್ಯಾಕ್ಸಿನ್ (ಫೈಜರ್ ಚುಚ್ಚುಮದ್ದು)ಗಳ ನಡುವಿನ ಫಲಿತಾಂಶದಲ್ಲಿ ತುಂಬಾ ವ್ಯತ್ಯಾಸಗಳಿವೆ ಎಂದಲ್ಲ. ಆದರೆ ಸ್ಟಲ್ಪವಾದರೂ ವ್ಯತ್ಯಾಸವಿದೆ ಎಂಬುದನ್ನು ಗಮನಿಸಬೇಕು ಎಂದು ಪ್ರಕಟವಾದ ವರದಿ ತಿಳಿಸಿದೆ. ಎರಡನೇ ಡೋಸ್ ಚುಚ್ಚುಮದ್ದಿನ ನಂತರ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಯುವಕರಲ್ಲಿ ಈ ಪ್ರಮಾಣ ಹೆಚ್ಚು ಎನ್ನಲಾಗಿದೆ
ನಿಜವೆಂದರೆ ಈ ಅಧ್ಯಯನಕ್ಕಾಗಿ ಎರಡನೇ ಡೋಸ್ ಚುಚ್ಚುಮದ್ದು ಪಡೆದ ಒಂದೂವರೆ ಕೋಟಿ ಜನರ ಆರೋಗ್ಯ ಮಾಹಿತಿ ಕಲೆಹಾಕಿ ನೋಡಲಾಗಿತ್ತು. ಇದರಲ್ಲಿ 411 ಜನರಲ್ಲಿ ಮಾತ್ರ ಇಂಥ ಸಮಸ್ಯೆಗಳು ವರದಿಯಾಗಿದ್ದವು. ಆದರೆ ಚುಚ್ಚುಮದ್ದು ತೆಗೆದುಕೊಂಡಿದ್ದರಿಂದ ಆದ ಪ್ರಯೋಜನವನ್ನು ಗಮನಿಸಿದರೆ, ಅಡ್ಡ ಪರಿಣಾಮಗಳ ಪ್ರಭಾವ ತುಂಬ ಕಡಿಮೆ. ಹಾಗಾಗಿ ಲಸಿಕೆ ತೆಗೆದುಕೊಳ್ಳುವುದಕ್ಕೆ ಹಿಂದೆ ಮುಂದೆ ನೋಡಬೇಕಾಗಿಲ್ಲ ಎಂದು ವರದಿ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ| Covid alert | ರಾಜ್ಯದಲ್ಲಿ ಕೋವಿಡ್ ದಿಢೀರ್ ಏರಿಕೆ: ಮಾಸ್ಕ್ ಕಡ್ಡಾಯ, ಹಲವು ಕಠಿಣ ಕ್ರಮ ಘೋಷಣೆ