ನವದೆಹಲಿ: ಕಾಲಮಿತಿಯೊಳಗೇ ದೇಶಾದ್ಯಂತ ದ್ವೇಷ ಭಾಷಣವನ್ನು ಹತ್ತಿಕ್ಕಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಈ ವಿಷಯದಲ್ಲಿ ಸರ್ಕಾರವು ಶಕ್ತಿಹೀನವಾಗಿದೆ(State is Impotent) ಎಂದು ಸುಪ್ರೀಂ ಕೋರ್ಟ್ (Supreme Court) ನ್ಯಾಯಮೂರ್ತಿ ಕೆ ಎಂ ಜೋಸೆಫ್ ಅಭಿಪ್ರಾಯಪಟ್ಟಿದ್ದಾರೆ. ರ್ಯಾಲಿಗಳಲ್ಲಿ ದ್ವೇಷದ ಭಾಷಣಗಳ ವಿರುದ್ಧ ಕ್ರಮಕೈಗೊಳ್ಳಲು ವಿಫಲವಾದ ಆರೋಪದ ಮೇಲೆ ಮಹಾರಾಷ್ಟ್ರದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಜಸ್ಟೀಸ್ ಜೋಸಫ್ ಅವರು, ಈ ವಿಷಯದಲ್ಲಿ ಮೌನವಾಗಿರುವುದಾದರೆ ನಮಗೆ ಸರ್ಕಾರವೇಕೆ ಬೇಕು ಎಂದು ಪ್ರಶ್ನಿಸಿದರು.
ಭಾತೃತ್ವ ಮತ್ತು ಸಹಿಷ್ಣುತೆಯ ಮಹತ್ವದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಜಸ್ಟೀಸ್ ಜೋಸೆಫ್,
ಪ್ರತಿದಿನ ನೀವು ನ್ಯಾಯಾಲಯದಲ್ಲಿ ಕುಳಿತುಕೊಳ್ಳುತ್ತೀರಿ ಮತ್ತು ಸುತ್ತಮುತ್ತಲಿನ ಪ್ರತಿಯೊಬ್ಬರೂ ನಿಮ್ಮ ಬಗ್ಗೆ ಕೆಟ್ಟದ್ದನ್ನು ಹೇಳುತ್ತಾರೆಂದು ಭಾವಿಸೋಣ, ಮನುಷ್ಯನಿಗೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಘನತೆ. ನಿತ್ಯವೂ ಅದನ್ನು ಹಾಳುಮಾಡುತ್ತಿದ್ದರೆ, ಪಾಕಿಸ್ತಾನಕ್ಕೆ ಹೋಗು ಎಂಬಂತೆ ಕೆಲವು ಹೇಳಿಕೆಗಳನ್ನು ನೀಡಲಾಗುತ್ತಿದೆ. ಈ ವ್ಯಕ್ತಿಗಳು ನಿಜವಾಗಿಯೂ ಈ ದೇಶವನ್ನು ಆರಿಸಿಕೊಂಡರು. ಅವರು ನಮ್ಮ ಸಹೋದರ ಮತ್ತು ಸಹೋದರಿಯರಂತೆ. ಒಂದೊಮ್ಮೆ ನಾವು ಸೂಪರ್ ಪವರ್ ಆಗಲು ಬಯಸಿದರೆ, ಮೊದಲು ದೇಶದಲ್ಲಿ ಕಾನೂನು ಅನುಷ್ಠಾನ ನಡೆಯಬೇಕು ಎಂದು ಅವರು ಹೇಳಿದರು.
ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮಹ್ತಾ ಅವರು, ಅರ್ಜಿದಾರರು ಈ ಪ್ರಕರಣದಲ್ಲಿ ಸೆಲೆಕ್ಟಿವ್ ಆಗಿ ನಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿದರು. ಅರ್ಜಿದಾರರಾಗಿರುವ ವ್ಯಕ್ತಿ ತನ್ನ ಸ್ವಂತ ರಾಜ್ಯದ (ಕೇರಳ) ನ್ಯಾಯಾಲಯದ ಮುಂದೆ ನಿದರ್ಶನಗಳನ್ನು ಕೋರುತ್ತಿಲ್ಲ ಎಂದು ಹೇಳಿದರು. ಮಹಾರಾಷ್ಟ್ರದಲ್ಲಿ ಮಾತ್ರ ದ್ವೇಷ ಭಾಷಣಗಳ ಪ್ರಕರಣಗಳನ್ನು ಪರಿಗಣಿಸಬಾರದು. ಆದರೆ ಕೇರಳ ಮತ್ತು ತಮಿಳುನಾಡಿನಂತಹ ರಾಜ್ಯಗಳಲ್ಲಿ ಇದೇ ರೀತಿಯ ನಿದರ್ಶನಗಳನ್ನು ನೋಡಬೇಕು ಎಂಬ ಸಂಗತಿಯನ್ನು ಕೋರ್ಟ್ ಗಮನಕ್ಕೆ ತರಲಾಯಿತು.
ಇದನ್ನೂ ಓದಿ: Supreme Court: ದ್ವೇಷ ಭಾಷಣದ ಆರೋಪ, ಹಿಂದೂ ಜನ್ ಆಕ್ರೋಶ್ ಸಭೆ ಚಿತ್ರೀಕರಿಸಲು ಕೋರ್ಟ್ ಸೂಚನೆ
ಕೇರಳದಲ್ಲಿ ಹಿಂದೂಗಳ ವಿರುದ್ಧ ದ್ವೇಷ ಭಾಷಣಗಳನ್ನು ಮಾಡಲಾಗುತ್ತಿದೆ ಎಂದು ಸಂಗತಿಯನ್ನು ಹೈಲೈಟ್ ಮಾಡಿದ ತುಷಾರ್ ಮಹ್ತಾ ಅವರು, ನ್ಯಾಯಾಲಯವು ಈ ಬಗ್ಗೆ ಯಾಕೆ ಸ್ವಯಂ ಆಗಿ ಪ್ರಕರಣವನ್ನು ಕೈಗೆತ್ತಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು. ಫೆಬ್ರವರಿ 5 ರಂದು ಮುಂಬೈನಲ್ಲಿ ಹಿಂದೂ ಜನ ಆಕ್ರೋಶ್ ಸಭಾ ಆಯೋಜಿಸಿದ್ದ ಕಾರ್ಯಕ್ರಮವನ್ನು ವಿಡಿಯೋಗ್ರಾಫ್ ಮಾಡಿ ವರದಿ ಸಲ್ಲಿಸುವಂತೆ ಫೆಬ್ರವರಿ ಮೊದಲ ವಾರದಲ್ಲಿ ಸುಪ್ರೀಂ ಕೋರ್ಟ್ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.