Site icon Vistara News

ISIS Threat: ರಾಮಮಂದಿರ ಉದ್ಘಾಟನೆ ಬೆನ್ನಲ್ಲೇ ಹಿಂದುಗಳ ಹತ್ಯೆಗೆ ಐಸಿಸ್‌ ಸ್ಕೆಚ್!

ISIS Terrorist

ISIS Magazine Voice of Khurasan threatens Hindus and Bharat

ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದ (Ram Mandir) ಉದ್ಘಾಟನೆಯಾಗಿದೆ. ಹಾಗಾಗಿ, ಪಾಕಿಸ್ತಾನವು ಟೀಕಿಸುವ ಮೂಲಕ ಉದ್ಧಟತನ ಮೆರೆದಿದೆ. ಇದರ ಬೆನ್ನಲ್ಲೇ, “ಭಾರತದ ಮೇಲೆ ದಾಳಿ ನಡೆಸಿ, ಹಿಂದುಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಲಾಗುವುದು” ಎಂದು ಐಸಿಸ್‌ ಉಗ್ರರು ಬೆದರಿಕೆ ಹಾಕಿದ್ದಾರೆ. ಐಸಿಸ್‌ ಭಯೋತ್ಪಾದಕ ಸಂಘಟನೆಯ ವಾಯ್ಸ್‌ ಆಫ್‌ ಖುರಾಸನ್‌ (Voice of Khurasan) ಮ್ಯಾಗಜಿನ್‌ನಲ್ಲಿ ಭಾರತದ ಮೇಲೆ ದಾಳಿ ಕುರಿತು ಬೆದರಿಕೆ (ISIS Threat) ಹಾಕಲಾಗಿದೆ.

ವಾಯ್ಸ್‌ ಆಫ್‌ ಖುರಾಸನ್‌ ಮ್ಯಾಗಜಿನ್‌ನ ಇ-ವರ್ಷನ್‌ಅನ್ನು ಸಾಮಾಜಿಕ ಜಾಲತಾಣಗಳು ಹಾಗೂ ಡಾರ್ಕ್‌ವೆಬ್‌ ವೇದಿಕೆಗಳ ಮೂಲಕ ಐಸಿಸ್‌ ಉಗ್ರ ಸಂಘಟನೆ ಹಂಚಿಕೊಂಡಿದೆ. “ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಕೆಡವಿ, ಅಕ್ರಮವಾಗಿ ಮಂದಿರ ನಿರ್ಮಿಸಲಾಗಿದೆ. 2002ರಲ್ಲಿ ಗುಜರಾತ್‌ ಹತ್ಯಾಕಾಂಡ ನಡೆದಿದೆ. ಇದೆಲ್ಲದಕ್ಕೂ ಸೇಡು ತೀರಿಸಿಕೊಳ್ಳಲು ಭಾರತದ ಮೇಲೆ ದಾಳಿ ಮಾಡಲಾಗುತ್ತದೆ. ಹಿಂದುಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಲಾಗುತ್ತದೆ” ಎಂದು ಮ್ಯಾಗಜಿನ್‌ ಮೂಲಕ ಬೆದರಿಕೆ ಹಾಕಲಾಗಿದೆ.

“ನಾವು ಭಾರತ ಸರ್ಕಾರಕ್ಕೆ ನೇರವಾಗಿ ಹೇಳುತ್ತಿದ್ದೇವೆ. ನಾವು ಖಡ್ಗಗಳನ್ನು ಹಿಡಿದು ಭಾರತಕ್ಕೆ ಬರುತ್ತೇವೆ. ಖಂಡಿತವಾಗಿಯೂ, ಗೋದ್ರಾ ಹತ್ಯಾಕಾಂಡ, ಬಾಬ್ರಿ ಮಸೀದಿ ಧ್ವಂಸಕ್ಕೆ ಸೇಡು ತೀರಿಸಿಕೊಳ್ಳುತ್ತೇವೆ. ಕಾಶ್ಮೀರ, ಗುಜರಾತ್‌, ಮುಜಫ್ಫರ್‌ನಗರದ ಘಟನೆಗಳಿಗೂ ಸೇಡು ತೀರಿಸಿಕೊಳ್ಳುತ್ತೇವೆ. ಪ್ರವಾದಿ ಮೊಹಮ್ಮದ್‌ ಅವರ ಆಶಯಗಳನ್ನು ಈಡೇರಿಸಲು ನಾವು ಏನು ಬೇಕಾದರೂ ಮಾಡುತ್ತೇವೆ” ಎಂದು ಉಲ್ಲೇಖಿಸಲಾಗಿದೆ. ಕಳೆದ ನವೆಂಬರ್‌ನಲ್ಲಿ ಕಾಶ್ಮೀರದಲ್ಲಿ ವಿದ್ಯಾರ್ಥಿಯೊಬ್ಬ ಪ್ರವಾದಿ ಮೊಹಮ್ಮದ್‌ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಪ್ರಕರಣಕ್ಕೂ ಸೇಡು ತೀರಿಸಿಕೊಳ್ಳಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: Threat Call: 26/11ರ ಮಾದರಿಯಲ್ಲೇ ತಾಜ್‌ ಹೋಟೆಲ್‌ ಮೇಲೆ ಬಾಂಬ್‌ ದಾಳಿ ಬೆದರಿಕೆ; ಮುಂಬೈನಲ್ಲಿ ಹೈ ಅಲರ್ಟ್

ಕೆಲ ದಿನಗಳ ಹಿಂದಷ್ಟೇ ಐಸಿಸ್‌ ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿರುವ ಹಾಗೂ ದೇಶದ ಹಲವೆಡೆ ದಾಳಿಗೆ ಸಂಚು ರೂಪಿಸಿರುವ ಆರೋಪದಲ್ಲಿ ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ ದಳದ (ATS) ಅಧಿಕಾರಿಗಳು ದಾಳಿ ಮುಂದುವರಿಸಿ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮತ್ತೊಬ್ಬ ವಿದ್ಯಾರ್ಥಿಯನ್ನು ಬಂಧಿಸಿದ್ದರು. ಇದರೊಂದಿಗೆ ಐಸಿಸ್‌ ಜತೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಅಲಿಗಢ ಮುಸ್ಲಿಂ ವಿವಿಯ 10 ವಿದ್ಯಾರ್ಥಿಗಳನ್ನು ಬಂಧಿಸಿದಂತಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version