Site icon Vistara News

ISIS terror | ರಷ್ಯದಲ್ಲಿ ಸಿಕ್ಕಿಬಿದ್ದ ಐಸಿಸ್‌ ಉಗ್ರನಿಗೆ ಆನ್‌ಲೈನ್‌ನಲ್ಲೇ ತರಬೇತಿ, ನೂಪುರ್‌ ಶರ್ಮಾ ಕೊಲ್ಲಲು ಸ್ಕೆಚ್‌

isis

ನವ ದೆಹಲಿ: ರಷ್ಯಾದಲ್ಲಿ ಸೆರೆಯಾದ ಐಸಿಸ್‌ ಆತ್ಮಹತ್ಯಾ ಉಗ್ರನ ಹೆಸರು ಅಜಮೋವ್‌ ಹಾಗೂ ಈತ ಪ್ರವಾದಿ ಕುರಿತು ವಿವಾದಿತ ಹೇಳಿಕೆ ನೀಡಿದ್ದ ಬಿಜೆಪಿ ನಾಯಕಿ ನೂಪುರ್‌ ಶರ್ಮಾ ಅವರನ್ನು ಕೊಲ್ಲುವ ಏಕೈಕ ಉದ್ದೇಶದಿಂದ ಹೊರಟಿದ್ದ ಎಂಬುದು ಖಚಿತವಾಗಿದೆ.

ರಷ್ಯಾದಲ್ಲಿ ಸೋಮವಾರ ಈ ಐಸಿಸ್‌ ಉಗ್ರನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆಯಲ್ಲಿ, ಆತ ಟರ್ಕಿಯಿಂದ ಹೊರಟು ರಷ್ಯಾ ಮೂಲಕ ಭಾರತಕ್ಕೆ ಪ್ರಯಾಣಿಸುತ್ತಿದ್ದುದು ಪತ್ತೆಯಾಯಿತು. ಭಾರತದ ವೀಸಾ ಪಡೆಯಲು ಈ ರಷ್ಯಾಗೆ ಆಗಮಿಸಿದ್ದ.

ಈತನ ಹೆಸರು ಅಜಮೋವ್.‌ 1992ರಲ್ಲಿ ಜನಿಸಿದ ಈತ ಟರ್ಕಿಯ ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ಸಂಪರ್ಕಕ್ಕೆ ಬಂದಿದ್ದು, ಜಿಹಾದಿ ತರಬೇತಿ ಪಡೆದಿದ್ದಾನೆ. ಬಿಜೆಪಿ ನಾಯಕಿ ನೂಪುರ್‌ ಶರ್ಮಾ ಪ್ರವಾದಿಯವರನ್ನು ನಿಂದಿಸಿದ್ದಾರೆ ಎಂದು ಗಟ್ಟಿಯಾಗಿ ನಂಬಿದ್ದ ಈತ ಅದಕ್ಕೆ ಸೇಡು ತೀರಿಸಲು ನಿರ್ಧರಿಸಿದ್ದ. ವಿಚಿತ್ರವೆಂದರೆ, ಈತ ಐಸಿಸ್‌ ಉಗ್ರರಲ್ಲಿ ಯಾರನ್ನೂ ಮುಖತಃ ಭೇಟಿಯಾಗಿಲ್ಲ. ಆನ್‌ಲೈನ್‌ ಮೂಲಕವೇ ಈತನ ಮೆದುಳನ್ನು ಬ್ರೇನ್‌ವಾಶ್‌ ಮಾಡಲಾಗಿತ್ತು ಹಾಗೂ ದಾಳಿಗೆ ಸೂಕ್ತ ತರಬೇತಿಯನ್ನೂ ಆನ್‌ಲೈನ್‌ನಲ್ಲೇ ಪಡೆದಿದ್ದ.

ಜುಲೈ 27ರಂದೇ ಈ ಕುರಿತು ಭಾರತದ ಗುಪ್ತಚರ ಮೂಲಗಳು ಈ ವರ್ತಮಾನವನ್ನು ಪಡೆದಿದ್ದವು. ಕಿರ್ಗಿಸ್ತಾನ ಹಾಗೂ ಉಜ್ಬೆಕಿಸ್ತಾನಗಳ ಇಬ್ಬರು ಉಗ್ರರು ಭಾರತದಲ್ಲಿ ಬಾಂಬ್‌ ನಡೆಸಲು ಸಿದ್ಧರಾಗಿ ಆಗಮಿಸುತ್ತಿದ್ದಾರೆ ಎಂದು ತಿಳಿಸಲಾಗಿತ್ತು. ಇವರು ರಷ್ಯಾ ಮೂಲಕ ವೀಸಾ ಒಡೆಯಲು ಯತ್ನಿಸಬಹುದು ಎನ್ನಲಾಗಿತ್ತು. ಈ ಮಾಹಿತಿಯನ್ನು ರಷ್ಯನ್‌ ಫೆಡರಲ್‌ ಸೆಕ್ಯುರಿಟಿ ಸರ್ವಿಸ್‌ (ಎಫ್‌ಎಸ್‌ಬಿ) ಜತೆಗೆ ಹಂಚಿಕೊಳ್ಳಲಾಗಿದ್ದು, ಅದು ಕ್ರಮ ತೆಗೆದುಕೊಂಡಿದೆ.

ಭಾರತೀಯ ತನಿಖಾ ಸಂಸ್ಥೆಗಳು ಈ ಮಾಹಿತಿ ಪಡೆದ ಕೂಡಲೇ ಚುರುಕಾಗಿದ್ದವು. ಭಾರತದಲ್ಲಿ ಐಎಸ್‌ ಅಡಗುದಾಣಗಳ ಮೇಲೆ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)‌ ತನಿಖಾ ದಾಳಿಗಳನ್ನು ಸಂಘಟಿಸಿತ್ತು. 35ಕ್ಕೂ ಹೆಚ್ಚಿ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

ಇದನ್ನೂ ಓದಿ: ISIS Terror | ರಷ್ಯಾದಲ್ಲಿ ಸಿಕ್ಕಿಬಿದ್ದ ಉಗ್ರ: ಪ್ರವಾದಿ ಅವಹೇಳನಕ್ಕೆ ಪ್ರತೀಕಾರ ತೀರಿಸಲು ಮುಂದಾಗಿದ್ದನೇ?

Exit mobile version