ನವ ದೆಹಲಿ: ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ಐಸಿಸ್ ಭಾರತದಲ್ಲಿ ತೀವ್ರ ಕಾರ್ಯಾಚರಣೆ ನಡೆಸುತ್ತಿದೆ ಎಂಬುದಕ್ಕೆ ಇನ್ನೊಂದು ಪುರಾವೆ ಸಿಕ್ಕಿದೆ. ವಾರಾಣಸಿ ಹಾಗೂ ದೆಹಲಿಯಲ್ಲಿ ರೈಡ್ ನಡೆಸಿದ ಸಂದರ್ಭದಲ್ಲಿ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಸದಸ್ಯರು ಐಸಿಸ್‌ನ ತೀವ್ರವಾದಿಯೊಬ್ಬನನ್ನು ಹಿಡಿದಿದ್ದಾರೆ.
ಬಸಿತ್ ಕಲಾಮ್ ಸಿದ್ದಿಕಿ (24) ಹೆಸರಿನ ಈತ ಐಸಿಸ್‌ನ ʼವಾಯಿಸ್ ಆಫ್ ಹಿಂದ್ʼ ಘಟಕದ ಕಾರ್ಯಕರ್ತ ಎಂಬುದು ತಿಳಿದುಬಂದಿದೆ. ಸರ್ಕಾರದ ವಿರುದ್ಧ ಷಡ್ಯಂತ್ರ ರಚಿಸಿ ಉಗ್ರಗಾಮಿ ಕಾರ್ಯಾಚರಣೆಗಳ ಮೂಲಕ ಅದನ್ನು ಸಾಧಿಸುವುದು, ಮುಸ್ಲಿಂ ಯುವಕರ ಬ್ರೈನ್‌ವಾಶ್ ಮಾಡಿ ಅವರನ್ನು ತೀವ್ರವಾದಿಗಳನ್ನಾಗಿ ಪರಿವರ್ತಿಸುವುದು ಈತನ ಕಾರ್ಯವೈಖರಿಯಾಗಿತ್ತು.
ಟೆಲಿಗ್ರಾಮ್‌ನಲ್ಲಿ ಹಲವು ತೀವ್ರವಾದಿ ಸಂಘಟನೆಗಳನ್ನು ಒಟ್ಟುಗೂಡಿಸಿ ಉಗ್ರ ಕಾರ್ಯಾಚರಣೆ ನೀಡಿದ ಆರೋಪದಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದಾನೆ. ಐಸಿಸ್‌ನ ಅಂತಾರಾಷ್ಟ್ರೀಯ ಸಂಘಟನೆಯ ಮುಖಂಡರೊಂದಿಗೆ ಈತ ಸಂಪರ್ಕದಲ್ಲಿದ್ದು, ಅದರ ಮುಖವಾಣಿಯಾದ ʼವಾಯಿಸ್ ಆಫ್ ಖುರಾಸಾನ್ʼಗೆ ಕಂಟೆಂಟ್ ಸೃಷ್ಟಿಸುವ, ಬರೆಯುವ, ಪ್ರಚಾರ ಮಾಡುವ ಕಾರ್ಯದಲ್ಲೂ ತೊಡಗಿಕೊಂಡಿದ್ದ.
ಆಫ್ಘಾನಿಸ್ತಾನದಿಂದ ಈತನಿಗೆ ಉಗ್ರ ಚಟುವಟಿಕೆಯ ನಿರ್ದೇಶನ ದೊರೆಯುತ್ತಿತ್ತು. ಭಾರತದಲ್ಲಿ ಈತ ಸುಧಾರಿತ ಸ್ಫೋಟಕ ಸಾಧನಗಳನ್ನು ತಯಾರಿಸಲು ಯುವಕರಿಗೆ ತರಬೇತಿ ನೀಡುತ್ತಿದ್ದ. ʼಬ್ಲ್ಯಾಕ್ ಪೌಡರ್ʼ ಹೆಸರಿನ ಸುಧಾರಿತ ಸ್ಫೋಟಕ ಸಾಮಗ್ರಿಯನ್ನು ಈತ ತಯಾರಿಸಿದ್ದು, ವಾಹನಗಳಲ್ಲಿ ಅಳವಡಿಸಿ ಸ್ಫೋಟಕ್ಕೆ ಮುಂದಾಗಿದ್ದ ಎಂಬುದು ಕೂಡ ಬಯಲಾಗಿದೆ.
ಬಾಂಬ್ ಸ್ಫೋಟಗಳ ಮೂಲಕ ನಾಗರಿಕರಲ್ಲಿ ಭೀತಿ ಮೂಡಿಸುವುದು, ಸರ್ಕಾರಿ ಸಂಸ್ಥೆಗಳಲ್ಲಿ ದಾಳಿ ನಡೆಸಿ ಕಂಗೆಡಿಸುವುದು ಈತನ ಗುರಿಯಾಗಿತ್ತು. ಈ ಕುರಿತು ಆತನಿಂದ ವಶಪಡಿಸಿಕೊಂಡ ಲ್ಯಾಪ್‌ಟಾಪ್, ಪೆನ್‌ಡ್ರೈವ್, ಮೊಬೈಲ್ ಇತ್ಯಾದಿಗಳಲ್ಲಿ ಸಾಕ್ಷ್ಯ ಲಭ್ಯವಾಗಿವೆ.
ಇದನ್ನೂ ಓದಿ | Shivamogga terror | ಶಿವಮೊಗ್ಗದಲ್ಲೂ ಬಾಂಬ್ ಸ್ಫೋಟಕ್ಕೆ ಸಂಚು ನಡೆಸಿದ್ದ ಐಸಿಸ್ ಉಗ್ರ ಮತೀನ್
ಐಸಿಸ್ ಹಲವಾರು ಸಾಮಾಜಿಕ ಜಾಲತಾಣಗಳನ್ನು ಉಗ್ರ ತರಬೇತಿಗಾಗಿ ಬಳಸಿಕೊಳ್ಳುತ್ತಿರುವುದು ಕಂಡುಬಂದಿದ್ದು, ಈ ಬಗ್ಗೆ ಸೈಬರ್ ಅಪರಾಧ ದಳದ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ. ದಕ್ಷಿಣ ಭಾರತದ ತೆಲಂಗಾಣ, ಕೇರಳ, ತಮಿಳುನಾಡು, ಕರ್ನಾಟಕಗಳಲ್ಲಿ ಐಸಿಸ್‌ನ ತರಬೇತಿ ಮಾದರಿಗಳು ಎನ್‌ಐಎ ಅಧಿಕಾರಿಗಳಿಗೆ ಲಭ್ಯವಾಗಿದ್ದವು. 100ಕ್ಕೂ ಹೆಚ್ಚು ಇಸ್ಲಾಮಿಕ್ ಉಗ್ರರನ್ನು ಬಂಧಿಸಲಾಗಿತ್ತು. ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ರಾಜಸ್ಥಾನ, ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ಜಮ್ಮು ಕಾಶ್ಮೀರಗಳಲ್ಲಿ ಐಸಿಸ್ ಅತ್ಯಂತ ಸಕ್ರಿಯವಾಗಿದೆ ಎಂದು ಎನ್‌ಐಎ ತಿಳಿಸಿದೆ.
ಇದನ್ನೂ ಓದಿ | Shivamogga terror | ಎಂಥಾ ಅಪ್ಪನಿಗೆ ಎಂಥಾ ಮಗ: ಐಸಿಸ್ ಉಗ್ರ ಮತೀನ್‌ನ ತಂದೆ 26 ವರ್ಷ ಸೇನೆಯಲ್ಲಿದ್ದರು!