ಹೊಸದಿಲ್ಲಿ: ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ (Italy PM Giorgia Meloni) ಇನ್ನೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಸ್ಲಾಮ್ಗೆ (Islam) ಯುರೋಪ್ನಲ್ಲಿ ಜಾಗವಿಲ್ಲ ಎಂದು ಅವರು ಹೇಳಿರುವುದು ಇದೀಗ ವೈರಲ್ ಆಗುತ್ತಿದೆ.
ಇಸ್ಲಾಮಿಕ್ ಸಂಸ್ಕೃತಿ ಮತ್ತು ಯುರೋಪಿಯನ್ ನಾಗರಿಕತೆಯ ಮೌಲ್ಯಗಳ ನಡುವೆ ಹೊಂದಾಣಿಕೆಯ ಸಮಸ್ಯೆ ಇದೆ ಎಂದು ಅವರು ಬ್ರದರ್ಸ್ ಆಫ್ ಇಟಲಿ ಪಕ್ಷ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಮೆಲೋನಿ ಈ ಬಲಪಂಥೀಯ, ಸಂಪ್ರದಾಯವಾದಿ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಕಾರ್ಯಕ್ರಮದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ (UK PM Rishi Sunak) ಮತ್ತು ಬಿಲಿಯನೇರ್ ಎಲಾನ್ ಮಸ್ಕ್ (Elon Musk) ಭಾಗವಹಿಸಿದ್ದರು.
ಇಸ್ಲಾಮಿಕ್ ಸಂಸ್ಕೃತಿಯ ಕೆಲವು ವ್ಯಾಖ್ಯಾನಗಳು ಮತ್ತು ನಮ್ಮ ನಾಗರಿಕತೆಯ ಹಕ್ಕುಗಳು ಹಾಗೂ ಮೌಲ್ಯಗಳ ನಡುವೆ ಹೊಂದಾಣಿಕೆಯ ಸಮಸ್ಯೆ ಇದೆ. ಇಟಲಿಯಲ್ಲಿನ ಹೆಚ್ಚಿನ ಇಸ್ಲಾಮಿಕ್ ಸಾಂಸ್ಕೃತಿಕ ಕೇಂದ್ರಗಳು ಸೌದಿ ಅರೇಬಿಯಾದಿಂದ ಹಣಕಾಸು ಪಡೆಯುತ್ತವೆ ಎಂಬುದು ನನಗೆ ಗೊತ್ತಿದೆ ಎಂದ ಅವರು, ಧರ್ಮದ ಕುರಿತ ಟೀಕೆ ಹಾಗೂ ಸಲಿಂಗಕಾಮಗಳ ಕುರಿತು ಸೌದಿ ಅರೇಬಿಯಾದ ಕಠಿಣ ಷರಿಯಾ ಕಾನೂನನ್ನು ಟೀಕಿಸಿದರು. ಸಾಮಾನ್ಯವಾಗಿ ಇಸ್ಲಾಮಿಕ್ ಕಾನೂನು ಎಂದು ಕರೆಯಲ್ಪಡುವ ಷರಿಯಾ ಕಾನೂನು, ಇಸ್ಲಾಂ ಧರ್ಮದ ಮೂಲಭೂತ ಧಾರ್ಮಿಕ ಪಠ್ಯಗಳಾದ ಕುರಾನ್ ಮತ್ತು ಹದೀಸ್ನಲ್ಲಿರುವ ನಿಬಂಧನೆಗಳ ಪ್ರಕಾರ ಶಿಕ್ಷೆಗಳನ್ನು ವಿಧಿಸತ್ತದೆ.
“ಷರಿಯಾದ ಪ್ರಕಾರ ವಿವಾಹೇತರ ಸಂಬಂಧ, ಧರ್ಮಭ್ರಷ್ಟತೆ ಮತ್ತು ಸಲಿಂಗಕಾಮಕ್ಕೆ ಮರಣದಂಡನೆ ವಿಧಿಸಲಾಗುತ್ತದೆ. ಈ ವಿಚಾರವನ್ನು ಇಂದು ನಾವು ವಿಮರ್ಶಿಸಬೇಕು. ಅಂದರೆ ಇಸ್ಲಾಂ ಧರ್ಮವನ್ನು ಜನರಲೈಸ್ ಮಾಡುವುದು ಎಂದರ್ಥವಲ್ಲ. ಈ ಮೂಲಕ ಯುರೋಪ್ನ ನಾಗರಿಕತೆಯ ಮೌಲ್ಯಗಳಿಗೂ ಇಸ್ಲಾಮ್ನ ಮೌಲ್ಯಗಳಿಗೂ ಬಹುದೂರವಿದೆ ಎಂಬುದನ್ನು ನಾವು ತಿಳಿಯಬೇಕು” ಎಂದು ಅವರು ಹೇಳಿದರು.
ಇತ್ತೀಚೆಗೆ ಯುಕೆ ಪ್ರಧಾನಿ ರಿಷಿ ಸುನಕ್ ರೋಮ್ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಇಟಲಿ ಪ್ರಧಾನಿ ಮೆಲೋನಿಯ ವಲಸೆ ನೀತಿಯನ್ನು ಬೆಂಬಲಿಸಿದ್ದರು. ನಿರಾಶ್ರಿತರನ್ನು ರುವಾಂಡಾಕ್ಕೆ ಕಳುಹಿಸುವ ಸುನಕ್ ಅವರ ವಿವಾದಾತ್ಮಕ ಯೋಜನೆಗೆ ಕಾನೂನು ತಡೆ ಎದುರಾಗಿದೆ. ಹಾಗೂ ಅಮಾನವೀಯ ವರ್ತನೆಯ ಆರೋಪ ಎದುರಿಸಿದೆ. ಮತ್ತೊಂದೆಡೆ ಮೆಲೋನಿ, ಮೆಡಿಟರೇನಿಯನ್ ಸಮುದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ರಕ್ಷನಾ ಹಡಗುಗಳ ಚಟುವಟಿಕೆಗಳನ್ನು ಕಡಿತಗೊಳಿಸುವ ಪ್ರಯತ್ನಗಳಿಗೆ ಟೀಕೆ ಎದುರಿಸಿದ್ದಾರೆ.
“ನಾವು ಈ ಸಮಸ್ಯೆಯನ್ನು ನಿಭಾಯಿಸದಿದ್ದರೆ, ವಲಸೆ ಸಂಖ್ಯೆ ಬೆಳೆಯುತ್ತದೆ. ನಮ್ಮ ಸಹಾಯದ ಅಗತ್ಯವಿರುವವರಿಗೆ ಸಹಾಯ ಮಾಡುವ ನಮ್ಮ ಸಾಮರ್ಥ್ಯವನ್ನು ಇದು ಕುಂಠಿತಗೊಳಿಸುತ್ತದೆ. ಆ ಪ್ರತಿಬಂಧಕವನ್ನು ಮೀರುವುದು, ವಿಭಿನ್ನವಾಗಿ ಕೆಲಸ ಮಾಡುವುದು ಸಾಧ್ಯವಾಗಬೇಕು. ನಾನು ಮತ್ತು ಜಾರ್ಜಿಯಾ ಹಾಗೆ ಮಾಡಲು ಸಿದ್ಧರಿದ್ದೇವೆ” ಎಂದು ಸುನಕ್ ಹೇಳಿದ್ದಾರೆ. ಉಭಯ ನಾಯಕರೂ ಆಲ್ಬೇನಿಯನ್ ಪ್ರಧಾನಿ ಎಡಿ ರಾಮ ಅವರನ್ನು ಭೇಟಿಯಾಗಿ ವಲಸೆಯ ಬಗ್ಗೆ ಚರ್ಚಿಸಿದ್ದಾರೆ.
ಇದನ್ನೂ ಓದಿ: ಮೆಲೋನಿ+ಮೋದಿ=ಮೆಲೋಡಿ; ಇಟಲಿ ಪ್ರಧಾನಿ ಸೆಲ್ಫಿ ‘ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್’!