Site icon Vistara News

ಮುಂಬೈ ದಾಳಿ; ಲಷ್ಕರ್ ಉಗ್ರ ಸಂಘಟನೆ ನಿಷೇಧಿಸಿದ ಇಸ್ರೇಲ್, ಭಾರತದಿಂದ ‘ಹಮಾಸ್‌’ ಬ್ಯಾನ್?

Narendra Modi And Benjamin Netanyahu

ನವದೆಹಲಿ/ಜೆರುಸಲೇಂ: ಭಾರತ ಹಾಗೂ ಇಸ್ರೇಲ್‌ ನಡುವೆ ಉತ್ತಮ ಬಾಂಧವ್ಯವಿದೆ. ಅದರಲ್ಲೂ, ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ಅವರು ಆತ್ಮೀಯ ಸ್ನೇಹಿತರಾಗಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ 2008ರ ನವೆಂಬರ್‌ 26ರಂದು ಮುಂಬೈ ಮೇಲೆ ಉಗ್ರ ದಾಳಿ (26/11 Mumbai Attack) ನಡೆಸಿದ ಲಷ್ಕರೆ ತಯ್ಬಾ (Lashkar-e-Taiba) ಉಗ್ರ ಸಂಘಟನೆಯನ್ನು ಇಸ್ರೇಲ್‌ ನಿಷೇಧಿಸಿದೆ.

ಮುಂಬೈ ಮೇಲೆ ಲಷ್ಕರೆ ತಯ್ಬಾ ಉಗ್ರರು ದಾಳಿ ನಡೆಸಿ ನವೆಂಬರ್‌ 26ಕ್ಕೆ 15 ವರ್ಷ ಆಗುತ್ತದೆ. ಇದರ ಬೆನ್ನಲ್ಲೇ ಇಸ್ರೇಲ್, ಲಷ್ಕರೆ ತಯ್ಬಾ ಉಗ್ರ ಸಂಘಟನೆಯನ್ನು ನಿಷೇಧಿಸಿದೆ. ಭಾರತವು ಈ ಕುರಿತು ಪ್ರಸ್ತಾಪವನ್ನೇ ಮಾಡದಿದ್ದರೂ ನಿಷೇಧ ಮಾಡಿ ಪ್ರಕಟಣೆ ಹೊರಡಿಸಿದೆ. “ಇಸ್ರೇಲ್‌ ನಿಷೇಧಿತ ಉಗ್ರ ಸಂಘಟನೆಗಳ ಪಟ್ಟಿಗೆ ಲಷ್ಕರೆ ತಯ್ಬಾ ಉಗ್ರ ಸಂಘಟನೆಯನ್ನೂ ಸೇರಿಸಲಾಗಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ (UNSC), ಅಮೆರಿಕದ ಗೃಹ ಇಲಾಖೆ ನಿಷೇಧಿಸಿದ ಉಗ್ರ ಸಂಘಟನೆಯನ್ನು ಇಸ್ರೇಲ್‌ ಕೂಡ ನಿಷೇಧಿಸಿದೆ. ಇನ್ನು ಲಷ್ಕರೆ ತಯ್ಬಾ ಉಗ್ರ ಸಂಘಟನೆಯು ಕಾನೂನುಬಾಹಿರ ಸಂಘಟನೆ” ಎಂದು ಇಸ್ರೇಲ್‌ ತಿಳಿಸಿದೆ.

“ಲಷ್ಕರೆ ತಯ್ಬಾ ಉಗ್ರ ಸಂಘಟನೆಯು ಕ್ರೂರ ಹಾಗೂ ಮಾರಣಾಂತಿಕವಾಗಿದೆ. ಇದು 2008ರಲ್ಲಿ ಮುಂಬೈ ಮೇಲೆ ಬಾಂಬ್‌ ದಾಳಿ ನಡೆಸಿ ನೂರಾರು ಭಾರತೀಯರ ಸಾವಿಗೆ ಕಾರಣವಾಗಿದೆ. ಈಗಲೂ ಉಗ್ರ ಸಂಘಟನೆಯು ಕೃತ್ಯಗಳಲ್ಲಿ ಸಕ್ರಿಯವಾಗಿದೆ” ಎಂದು ಇಸ್ರೇಲ್‌ ಪ್ರಕಟಣೆ ತಿಳಿಸಿದೆ. ಇನ್ನು ಇಸ್ರೇಲ್‌ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಹಮಾಸ್‌ ಉಗ್ರ ಸಂಘಟನೆಯನ್ನು ಭಾರತ ನಿಷೇಧಿಸಲಿದೆ ಎಂದು ಹೇಳಲಾಗುತ್ತಿದೆ. ಇಸ್ರೇಲ್‌ ಜತೆಗಿನ ಸ್ನೇಹದ ಸಂಕೇತವಾಗಿ ಭಾರತ ಹಮಾಸ್‌ ಉಗ್ರ ಸಂಘಟನೆಯನ್ನು ನಿಷೇಧಿಸಿದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು ವಿಶ್ವಸಂಸ್ಥೆ ನಿರ್ಣಯದಲ್ಲಿ ಹಮಾಸ್‌ ಉಗ್ರರು ಎಂಬುದಾಗಿ ಪ್ರಸ್ತಾಪ ಇಲ್ಲದ ಕಾರಣ ನಿರ್ಣಯದ ಪರವಾಗಿ ಭಾರತ ಮತದಾನ ಮಾಡಿರಲಿಲ್ಲ.

ಇದನ್ನೂ ಓದಿ: Israel Palestine War: ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ ವಿರುದ್ಧದ ನಿರ್ಣಯದ ಪರ ಭಾರತ ಮತ!

ಮುಂಬೈ ದಾಳಿ ಕರಾಳ ಅಧ್ಯಾಯ

ಮುಂಬೈನಲ್ಲಿರುವ ತಾಜ್​ ಹೋಟೆಲ್​ಗಳ ಮೇಲೆ 2008ರಲ್ಲಿ ನಡೆದ ಉಗ್ರ ದಾಳಿ ಇಂದಿಗೂ ನಮ್ಮ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿದಿದೆ. ಅದನ್ನೊಂದು ಕರಾಳ ದಿನವೆಂದೇ ಪರಿಗಣಿಸಲಾಗುತ್ತದೆ. ಅಂದು ಲಷ್ಕರೆ ತಯ್ಬಾ ಸಂಘಟನೆಯ 10 ಉಗ್ರರು ಸಮುದ್ರ ಮಾರ್ಗದ ಮೂಲಕ ಮುಂಬಯಿಗೆ ಬಂದು ಗುಂಡಿನ ದಾಳಿ ನಡೆಸಿದ್ದರು. ನವೆಂಬರ್ 26ರಿಂದ 29ರವರೆಗೆ ಭದ್ರತಾ ಪಡೆಗಳು-ಉಗ್ರರ ನಡುವಿನ ಹೋರಾಟ ನಡೆದಿತ್ತು. ಇದರಲ್ಲಿ ಆರು ಮಂದಿ ಅಮೇರಿಕದವರು ಸೇರಿ 166 ಮಂದಿ ಮೃತಪಟ್ಟಿದ್ದರು. ಹಲವು ಯೋಧರು ಕೂಡ ಹುತಾತ್ಮರಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version