ಭಟ್ಕಳ: ಪ್ಯಾಲೆಸ್ತೀನ್ ಮೂಲದ ಹಮಾಸ್ ಭಯೋತ್ಪಾದಕ ಸಂಘಟನೆ ಇಸ್ರೇಲ್ ಮೇಲೆ ನಡೆಸಿರುವ ಭಯಾನಕ ರಾಕೆಟ್ ಹಾಗೂ ಕ್ಷಿಪಣಿಗಳ ದಾಳಿಯಲ್ಲಿ ಸಾಕಷ್ಟು ಮಂದಿ ಸಾವುನೋವು ಅನುಭವಿಸಿದ್ದಾರೆ. ಸದ್ಯ ಇಸ್ರೇಲ್‌ನಲ್ಲಿರುವ ಭಟ್ಕಳದ 40 ಮಂದಿ ಸಂಪರ್ಕಕ್ಕೆ ದೊರೆತಿದ್ದು, ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
ಇಸ್ರೇಲ್‌ನಲ್ಲಿರುವ ಭಾರತೀಯರ ರಕ್ಷಣೆಗೆ ಭಾರತೀಯ ರಾಯಭಾರಿ ಕಚೇರಿ ಕ್ರಮಗಳನ್ನು ತೆಗೆದುಕೊಂಡಿದೆ. ಭಟ್ಕಳದ 40ಕ್ಕೂ ಅಧಿಕ ಜನ ಇಸ್ರೇಲ್‌ನಲ್ಲಿ ಉದ್ಯೋಗಿಗಳಾಗಿದ್ದಾರೆ. ಇವರು ವಿಡಿಯೋ ಕಾಲ್ ಮೂಲಕ ತಮ್ಮ ಕುಟುಂಬಸ್ಥರನ್ನು ಸಂಪರ್ಕಿಸಿದ್ದು, ತಮ್ಮ ಸುರಕ್ಷತೆಯನ್ನು ಖಚಿಪಡಿಸಿದ್ದಾರೆ.
ಭಟ್ಕಳದ ಮುಂಡಳ್ಳಿಯ ಭಾಗದ 12 ಮಂದಿ ಹಾಗೂ ಮುರುಡೇಶ್ವರ ಬಸ್ತಿ ಚರ್ಚ್ ಕ್ರಾಸ್ ಬಳಿಯ 29 ಮಂದಿ ಇಸ್ರೇಲ್‌ನಲ್ಲಿ ಉದ್ಯೋಗ ನಿಮಿತ್ತ ನೆಲೆಸಿದ್ದಾರೆ. ಇವರೆಲ್ಲರ ಹೆಸರುಗಳು ಲಭ್ಯವಾಗಿವೆ. ಮುರುಡೇಶ್ವರದ ಚರ್ಚ್ ಕ್ರಾಸ್ ಬಳಿಯ ನಿವಾಸಿ, ಇಸ್ರೇಲ್‌ನಲ್ಲಿ ನೆಲೆಸಿರುವ ಸುನೀಲ ಎಫ್. ಗೋಮ್ಸ್ ಮತ್ತು ಡಾಲ್ಪಿ ಗೋಮ್ಸ್ ನಿವಾಸಕ್ಕೆ ವಿಸ್ತಾರ ವಾಹಿನಿ ತೆರಳಿದ್ದು, ಇವರ ತಾಯಿ ಹೆಲೆನ್ ಗೋಮ್ಸ್ ಹಾಗೂ ಸಹೋದರಿ ಜತೆಗೆ ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ ಅವರ ಸುರಕ್ಷತೆಯ ವಿವರ ಪಡೆದಿದೆ.
ʼʼಘಟನೆ ನಡೆದ ದಿನದಿಂದ ನಾವು ಜೀವಭಯದಲ್ಲಿಯೇ ಬದುಕಿದ್ದೆವು. ಘಟನೆ ನಡೆದ ಜಾಗದ ಸಮೀಪದಲ್ಲಿಯೇ ನಾವು ಕೆಲಸಕ್ಕಾಗಿ ನೆಲೆಸಿದ್ದ ಪ್ರದೇಶವಿದ್ದು ಯಾವ ಸಂಧರ್ಭದಲ್ಲಿ ಪರಿಸ್ಥಿತಿ ಏನಾಗಲಿದೆ ಎಂಬ ಭಯ ನಮ್ಮಲ್ಲಿದೆ. ಆದರೆ ಭಾರತೀಯ ರಾಯಭಾರಿ ಕಚೇರಿಯಿಂದ ಭಾರತೀಯರನ್ನು ಸಂಪರ್ಕಿಸುವ ಕಾರ್ಯ ಆರಂಭವಾಗಿದೆ ಎಂಬ ಮಾಹಿತಿಯ ಮೇಲೆ ಕಚೇರಿಯ ನಮ್ಮಿಬ್ಬರು ಸಹ ಸಿಬ್ಬಂದಿಗಳು ಸಂಪರ್ಕಿಸಿ ನಮ್ಮ ಸುರಕ್ಷತೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಅನವಶ್ಯಕವಾಗಿ ಯಾರೂ ಹೊರಗೆ ಓಡಾಟ ಮಾಡಬಾರದು ಎಂಬ ಕಠಿಣ ಆದೇಶವಿದ್ದು, ಅವಶ್ಯಕತೆಯಿದ್ದಲ್ಲಿ ಮಾತ್ರ ಓಡಾಡಲು ಅನುಮತಿ ನೀಡಿದ್ದಾರೆ. ಕೆಲವೊಂದು ಪ್ರದೇಶದಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿಡಲಾಗಿದ್ದು, ಆಹಾರ ಹಾಗೂ ಇನ್ನಿತರ ವಸ್ತುಗಳ ಖರೀದಿಗೆ ತೆರಳಬಹುದಾಗಿದೆ. ಸಮಸ್ಯೆಯಿದ್ದಲ್ಲಿ ರಾಯಭಾರಿ ಕಚೇರಿಗೆ ಮಾಹಿತಿ ತಿಳಿಸಿದಲ್ಲಿ ನಿಮ್ಮನ್ನು ಸಂಪರ್ಕಿಸಲಿದ್ದೇವೆ ಎಂದಿದ್ದಾರೆ. ಎಚ್ಚರಿಕೆಯ ಸೈರನ್ ಹಾಗೂ ಜನರು ಸುರಕ್ಷಿತ ಪ್ರದೇಶದಲ್ಲಿ ಇರುವಂತೆ ಮುಂಜಾಗ್ರತಾ ವ್ಯವಸ್ಥೆ ಮಾಡಲಾಗಿದೆ. ಜನ ಸರಕಾರದ ಆದೇಶದಂತೆ ಪಾಲನೆ ಮಾಡಬೇಕಿದೆ. ಭಾರತೀಯ ರಾಯಭಾರಿ ಕಚೇರಿಯು ನಮ್ಮ ನಿರಂತರ ಸಂಪರ್ಕದಲ್ಲಿದ್ದು ಅವರಿಗೆ ನಾವೆಲ್ಲರೂ ಚಿರಋಣಿಯಾಗಿದ್ದೇವೆ. ಸದ್ಯ ಕನ್ನಡಿಗರೆಲ್ಲರೂ ಒಂದು ವಾಟ್ಸ್ಯಾಪ್ ಗ್ರೂಪ್ ಮಾಡಿದ್ದು ನಾವೆಲ್ಲರು ನಿರಂತರ ಸಂಪರ್ಕದಲ್ಲಿದ್ದೇವೆʼʼ ಎಂದು ಸುನೀಲ ಗೋಮ್ಸ್ ಮತ್ತು ಡಾಲ್ಪಿ ಗೋಮ್ಸ್ ತಿಳಿಸಿದ್ದಾರೆ.
ʼʼಇಸ್ರೇಲ್‌ನಲ್ಲಿ ನಡೆದ ರಾಕೆಟ್ ದಾಳಿಯ ಬಗ್ಗೆ ತಿಳಿದು ಒಂದು ಕ್ಷಣ ನಮ್ಮ ಮಕ್ಕಳ ಪರಿಸ್ಥಿತಿಯ ಬಗ್ಗೆ ಭಯ ಉಂಟಾಯಿತು. ತಕ್ಷಣ ಅವರನ್ನು ವಿಡಿಯೋ ಕಾಲ್ ಮೂಲಕ ಅವರನ್ನು ಸಂಪರ್ಕಿಸಿದಾಗ ನಾವಿಬ್ಬರು ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ ಬಳಿಕ ನಮಗೆ ಸಮಾಧಾನವಾಯಿತು. ಇಲ್ಲಿಯ ತನಕ ನಾವು ನಿರಂತರ ಅವರಿಗೆ ವಿಡಿಯೋ ಕಾಲ್ ಮಾಡಿ ಅವರ ಪರಿಸ್ಥಿತಿ ಬಗ್ಗೆ ಕೇಳುತ್ತಿದ್ದೇವೆ. ಸ್ಥಳಿಯ ಪೊಲೀಸರು ಸಹ ನಮ್ಮನ್ನು ಹಾಗೂ ಕುಟುಂಬದವರನ್ನು ನಿತ್ಯವೂ ಸಂಪರ್ಕಿಸುತ್ತಿದ್ದು, ಭಾರತೀಯ ರಾಯಭಾರಿ ಕಚೇರಿಗೆ ನಾವೆಲ್ಲರು ಧನ್ಯವಾದ ತಿಳಿಸಿದ್ದೇವೆʼʼ ಎಂದು ಅವರ ಕುಟುಂಬಸ್ಥರು ಹೇಳಿದ್ದಾರೆ.
ಇದನ್ನೂ ಓದಿ: Israel Palestine War: ಗಾಜಾ ಪಟ್ಟಿ ಸೀಜ್; ಆಹಾರ, ಇಂಧನ ಪೂರೈಕೆ ಕಟ್ ಮಾಡಿದ ಇಸ್ರೇಲ್! ಮೃತರ ಸಂಖ್ಯೆ 1300ಕ್ಕೆ ಏರಿಕೆ