ತಿರುವನಂತಪುರಂ: ಇಸ್ರೇಲ್ ಹಾಗೂ ಪ್ಯಾಲೆಸ್ತೀನ್‌ನ ಹಮಾಸ್ ಉಗ್ರರ ಮಧ್ಯೆ ನಡೆಯುತ್ತಿರುವ ಸಂಘರ್ಷ (Israel Palestine War) ಮುಂದುವರಿದೆ. ಕೇರಳದ ರಾಜಕೀಯ ಪಕ್ಷಗಳು ಮತ್ತು ನಾಯಕರು ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ವಿಚಾರದಲ್ಲಿ ವಿಭಿನ್ನ ನಿಲುವು ತಳೆದಿದ್ದಾರೆ. ಇದ್ಯಾವುದರ ಪರಿವೇ ಇಲ್ಲದೆ ಉತ್ತರ ಕೇರಳದ ಒಂದಷ್ಟು ಮಂದಿ ಇಸ್ರೇಲ್ ʼಪರವಾಗಿʼ ಕೆಲಸ ಮಾಡುತ್ತಿದ್ದಾರೆ. ಅದು ಹೇಗೆ ಎನ್ನುವುದರ ವಿವರ ಇಲ್ಲಿದೆ.
ಇಸ್ರೇಲ್ ಪೊಲೀಸರ ಸಮವಸ್ತ್ರ ತಯಾರಾಗುವುದು ಇಲ್ಲೇ!
ಕಣ್ಣೂರಿನಲ್ಲಿ ಸುಮಾರು 8 ವರ್ಷಗಳಿಂದ ಇಸ್ರೇಲ್ ಪೊಲೀಸರಿಗಾಗಿ ಸಮವಸ್ತ್ರ ಹೊಲಿಯಲಾಗುತ್ತಿದೆ. ನೂರಾರು ಟೈಲರ್‌ಗಳು ಇಸ್ರೇಲ್ ಪೊಲೀಸರ ಯೂನಿಫಾರ್ಮ್ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ರಾಜಕೀಯ ಸಂಘರ್ಷಕ್ಕೆ ಕುಖ್ಯಾತಿ ಪಡೆದಿರುವ ಕಣ್ಣೂರು ತನ್ನ ಅನನ್ಯ ಕೈಮಗ್ಗ ತಯಾರಿಕೆ ಮತ್ತು ಜವಳಿ ರಫ್ತಿನ ವಿಷಯದಲ್ಲೂ ಜನಪ್ರಿಯತೆ ಪಡೆದುಕೊಂಡಿದೆ. ಜಿಲ್ಲೆಯ ಮರಿಯನ್ ಅಪೆರಲ್ ಪ್ರೈವೇಟ್ ಲಿಮಿಟೆಡ್(Maryan Apparel Pvt Limited)ನ ಟೈಲರ್‌ಗಳು ಮತ್ತು ಉದ್ಯೋಗಿಗಳು ಇಸ್ರೇಲ್ ಪೊಲೀಸ್ ಪಡೆಯ ತಿಳಿ ನೀಲಿ, ಉದ್ದನೆಯ ತೋಳಿನ ಸಮವಸ್ತ್ರ ಶರ್ಟ್‌ನ ಹಿಂದಿರುವ ಶಿಲ್ಪಿಗಳು. ಡಬಲ್-ಪಾಕೆಟ್ ಹೊಂದಿರುವ ಶರ್ಟ್ ಮಾತ್ರವಲ್ಲ ಈ ಹೊಲಿಗೆ ಘಟಕವು ಟ್ರೇಡ್ ಮಾರ್ಕ್ ಲಾಂಛನಗಳನ್ನು ವಿನ್ಯಾಸಗೊಳಿಸಿ ಜೋಡಿಸುವ ಕೆಲಸವನ್ನೂ ಮಾಡುತ್ತದೆ.
ಮುಂಬೈ ಮೂಲದ ಕೇರಳದ ಉದ್ಯಮಿ ಥಾಮಸ್ ಒಲಿಕಲ್ ಈ ಉಡುಪು ತಯಾರಿಕಾ ಘಟಕದ ಮಾಲಕರಾಗಿದ್ದು, ಪ್ರಸ್ತುತ 1,500ಕ್ಕೂ ಹೆಚ್ಚು ನುರಿತ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಥಾಮಸ್ ಒಲಿಕಲ್ ಏನು ಹೇಳುತ್ತಾರೆ?
ಮೂಲತಃ ಇಡುಕ್ಕಿ ಜಿಲ್ಲೆಯ ತಿಡಯಪ್ಪುಳದ ಥಾಮಸ್ ಒಲಿಕಲ್ ಈ ಬಗ್ಗೆ ಮಾತನಾಡಿ, ʼʼಯುದ್ಧ ಆರಂಭಕ್ಕೆ ಮುನ್ನವೇ ಇಸ್ರೇಲ್ ಪೊಲೀಸರು ಕಂಪೆನಿ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ಯುದ್ಧದ ಬಳಿಕ ಹೆಚ್ಚುವರಿ ಸಮವಸ್ತ್ರ ಪೂರೈಕೆಗೆ ಆರ್ಡರ್ ಬಂದಿದೆʼʼ ಎಂದು ವಿವರಿಸಿದ್ದಾರೆ. ʼʼಹೊಸ ಉತ್ಪನ್ನಗಳಿಗಾಗಿ ಈ ವರ್ಷ ಬೇಡಿಕೆ ಸಲ್ಲಿಸಿದ್ದಾರೆ ಮತ್ತು ಡಿಸೆಂಬರ್‌ನಲ್ಲಿ ಇದನ್ನು ಪೂರೈಕೆ ಮಾಡಲಾಗುವುದುʼʼ ಎಂದು ತಿಳಿಸಿದ್ದಾರೆ.
“ಇಸ್ರೇಲ್ ಅಧಿಕಾರಿಗಳು ತಮ್ಮ ಪೊಲೀಸ್ ತರಬೇತಿಗಾಗಿ ನಿಗದಿಪಡಿಸಿದ ಕಾರ್ಗೋ ಪ್ಯಾಂಟ್ ಮತ್ತು ಶರ್ಟ್ ಒದಗಿಸುವಂತೆ ಕೋರಿದ್ದಾರೆ. ಅದರ ಉತ್ಪಾದನೆ ನಡೆಯುತ್ತಿದೆ” ಎಂದು ಥಾಮಸ್ ಹೇಳಿದ್ದಾರೆ. “ನಾವು ಎಂಟು ವರ್ಷಗಳಿಂದ ಇಸ್ರೇಲ್ ಪೊಲೀಸರಿಗೆ ವಾರ್ಷಿಕವಾಗಿ ಒಂದು ಲಕ್ಷ ಸಮವಸ್ತ್ರ ಪೂರೈಸುತ್ತಿದ್ದೇವೆ. ಇಸ್ರೇಲ್‌ನಂತಹ ಉನ್ನತ ದರ್ಜೆಯ ಪೊಲೀಸ್ ಪಡೆಗೆ ನಾವು ಸಮವಸ್ತ್ರ ಶರ್ಟ್ ಪೂರೈಸುತ್ತಿದ್ದೇವೆ ಎಂಬುದು ನಿಜವಾಗಿಯೂ ಹೆಮ್ಮೆಯ ವಿಷಯ” ಎಂದು ಥಾಮಸ್ ಅಭಿಪ್ರಾಯ ಪಟ್ಟಿದ್ದಾರೆ.
2006ರಲ್ಲಿ ಇಲ್ಲಿನ ಕಿನ್ಫ್ರಾ ಪಾರ್ಕ್‌ನಲ್ಲಿ ಪ್ರಾರಂಭವಾದ ಕಂಪನಿಯು ವಿಶ್ವದ ನಾನಾ ದೇಶಗಳ ಸೇನಾ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಭದ್ರತಾ ಅಧಿಕಾರಿಗಳು ಮತ್ತು ಆರೋಗ್ಯ ಸೇವಾ ಕಾರ್ಯಕರ್ತರ ಸಮವಸ್ತ್ರ ತಯಾರಿಸುತ್ತಿದೆ. ಇಷ್ಟು ಮಾತ್ರವಲ್ಲದೆ ಶಾಲಾ ಸಮವಸ್ತ್ರ, ಸೂಪರ್ ಮಾರ್ಕೆಟ್ ಸಿಬ್ಬಂದಿಯ ಉಡುಗೆ, ವೈದ್ಯರ ಕೋಟ್ ಮುಂತಾದವುಗಳನ್ನು ತಯಾರಿಸಿ ಪೂರೈಸುತ್ತಿದೆ.
ಸ್ಥಳೀಯರ ಪಾಲಿಗೆ ಆಶಾಕಿರಣ
ಸಾಂಪ್ರದಾಯಿಕ ಬೀಡಿ ಉದ್ಯಮದ ಕುಸಿತದಿಂದಾಗಿ ನಿರುದ್ಯೋಗಿಗಳಾದ ಸ್ಥಳೀಯ ಜನರಿಗೆ ಉದ್ಯೋಗ ಒದಗಿಸುವ ಉದ್ದೇಶದಿಂದ ಕಣ್ಣೂರಿನಲ್ಲಿ ಈ ಉಡುಪು ತಯಾರಿಕಾ ಘಟಕವನ್ನು ಸ್ಥಾಪಿಸಲಾಯಿತು. ಸಮವಸ್ತ್ರ ತಯಾರಿಕೆಯಲ್ಲಿ ಕಂಪೆನಿಯ ಜನಪ್ರಿಯತೆ ಗಮನಿಸಿ ಇಸ್ರೇಲ್ ಪೊಲೀಸರು ತಮ್ಮನ್ನು ಸಂಪರ್ಕಿಸಿದ್ದಾಗಿ ಥಾಮಸ್ ತಿಳಿಸಿದ್ದಾರೆ.
ʼʼಈ ಕುರಿತಾದ ಒಪ್ಪಂದದ ಬಗ್ಗೆ ಸಮಾಲೋಚನೆ ನಡೆಸಲು ಇಸ್ರೇಲ್ ಪೊಲೀಸರ ಪ್ರತಿನಿಧಿ ಮುಂಬೈಗೆ ಆಗಮಿಸಿದ್ದರು. ಬಳಿಕ ಅಲ್ಲಿನ ಉನ್ನತ ಅಧಿಕಾರಿಗಳು, ವಿನ್ಯಾಸಕಾರರು ಮತ್ತು ಕ್ವಾಲಿಟಿ ಕಂಟ್ರೋಲರ್‌ಗಳು ನಮ್ಮ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು 10 ದಿನಗಳ ಕಾಲ ಅವರು ಇಲ್ಲಿ ತಂಗಿದ್ದರುʼʼ ಎಂದು ಥಾಮಸ್ ವಿವರಿಸುತ್ತಾರೆ.
ಇದನ್ನೂ ಓದಿ: Israel Palestine War: ಇಸ್ರೇಲ್‌ಗೆ ರಿಷಿ ಸುನಕ್ ಭೇಟಿ; ಉಗ್ರರ ನಿರ್ನಾಮಕ್ಕೆ ಬೆಂಬಲ ಘೋಷಣೆ
ಗುಣಮಟ್ಟದಲ್ಲಿ ರಾಜಿ ಇಲ್ಲ
ʼʼಇಸ್ರೇಲ್ ಅಧಿಕಾರಿಗಳು ಗುಣಮಟ್ಟದ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಸಂಪೂರ್ಣ ಫಿಟ್ ಆಗಿದ್ದರೆ ಮತ್ತು ಉತ್ತಮ ಗುಣಮಟ್ಟದಿಂದ ಕೂಡಿದ್ದರೆ ಮಾತ್ರ ಅವರು ಉತ್ಪನ್ನಗಳನ್ನು ಖರೀದಿಸುತ್ತಾರೆ. ಗುಣಮಟ್ಟದ ವಿಚಾರದಲ್ಲಿ ಅವರು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲʼʼ ಎನ್ನುತ್ತಾರೆ ಥಾಮಸ್. ಆದಷ್ಟು ಬೇಗ ಯುದ್ಧ ಕೊನೆಗೊಂಡು ಶಾಂತಿ ನೆಲೆಸಲಿ ಎಂದು ಅವರು ಆಗ್ರಹಿಸುತ್ತಾರೆ.