Site icon Vistara News

ಇಸ್ರೇಲ್‌ ಪ್ರಧಾನಿಯನ್ನು ಗುಂಡಿಟ್ಟು ಕೊಲ್ಲಬೇಕು ಎಂದ ಕಾಂಗ್ರೆಸ್‌ ಸಂಸದ; ಸಿಟ್ಟಿಗೆ ಕಾರಣ ಇಲ್ಲಿದೆ

Benjamin Netanyahu And Rajmohan Unnithan

Israel PM Benjamin Netanyahu Should Be Shot And Killed, Says Congress MP Rajmohan Unnithan

ತಿರುವನಂತಪುರಂ: ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ಸಮರವು (Israel Palestine War) ದಿನೇದಿನೆ ಕಾವೇರುತ್ತಿದೆ. ಅದರಲ್ಲೂ, ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು ದಾಳಿ ನಡೆಸಿದ ಬಳಿಕ ತೀವ್ರವಾಗಿ ಪ್ರತಿದಾಳಿ ನಡೆಸುತ್ತಿರುವ ಇಸ್ರೇಲ್‌ ಸೇನೆಯು ಹಮಾಸ್‌ ಉಗ್ರರ ಅಡಗುತಾಣವಾದ ಗಾಜಾ ನಗರದ (Gaza City) ಮೇಲೆ ಸಂಪೂರ್ಣವಾಗಿ ಹಿಡಿತ ಸಾಧಿಸಿದ್ದಾರೆ. ಹಮಾಸ್‌ ಉಗ್ರರನ್ನು ಹತ್ಯೆ ಮಾಡುತ್ತಿದ್ದಾರೆ. ಅಲ್ಲದೆ, ಹಮಾಸ್‌ ಉಗ್ರರನ್ನು ನಿರ್ನಾಮ ಮಾಡದ ಹೊರತು ನಾವು ದಾಳಿ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್‌ ಘೋಷಿಸಿದೆ. ಇದರ ಬೆನ್ನಲ್ಲೇ, “ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರನ್ನು ಗುಂಡಿಕ್ಕಿ ಕೊಲ್ಲಬೇಕು” ಎಂದು ಕಾಂಗ್ರೆಸ್‌ ಸಂಸದ ರಾಜಮೋಹನ್‌ ಉನ್ನಿತ್ತಾನ್‌ (Rajmohan Unnithan) ಹೇಳಿದ್ದಾರೆ. ಇದು ಈಗ ಚರ್ಚೆಗೆ ಗ್ರಾಸವಾಗಿದೆ.

“ಜಿನೀವಾ ಒಪ್ಪಂದದ ನಿಯಮಗಳನ್ನು ಮುರಿದವರಿಗೆ ಏನು ಮಾಡಬೇಕು ಎಂದು ನೀವು ಕೇಳಬಹುದು. ಎರಡನೇ ಮಹಾಯುದ್ಧದ ವೇಳೆ ಯುದ್ಧದ ಅಪರಾಧಿಗಳಾದ ನಾಜಿಗಳ ವಿಚಾರಣೆ ಮಾಡಿದ ಮಾದರಿ (Nuremberg Trials Model) ಅನುಸರಿಸಬೇಕು. ಯುದ್ಧಾಪರಾಧಿಯಾದ ಬೆಂಜಮಿನ್‌ ನೆತನ್ಯಾಹು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಬೇಕು. ಅವರನ್ನು ವಿಚಾರಣೆಯನ್ನೂ ಮಾಡದೆ ಹತ್ಯೆ ಮಾಡಬೇಕು. ಪ್ಯಾಲೆಸ್ತೀನ್‌ನಲ್ಲಿ ಜನರ ಹತ್ಯೆಗೆ ಕಾರಣವಾದ ಬೆಂಜಮಿನ್‌ ನೆತನ್ಯಾಹು ಹತ್ಯೆಗೀಡಾಗಲು ಅರ್ಹ” ಎಂದು ಸಮಾರಂಭವೊಂದರಲ್ಲಿ ಹೇಳಿದ್ದಾರೆ.

ಉನ್ನಿತ್ತಾನ್‌ ಹೇಳಿಕೆ ಖಂಡಿಸಿದ ಬಿಜೆಪಿ

ಕಾಂಗ್ರೆಸ್‌ ಸಂಸದ ರಾಜಮೋಹನ್‌ ಉನ್ನಿತ್ತಾನ್‌ ಅವರ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ. “ಒಬ್ಬ ಸಂಸತ್‌ ಸದಸ್ಯರಾಗಿ ರಾಜಮೋಹನ್‌ ಉನ್ನಿತ್ತಾನ್‌ ಅವರಿಗೆ ಯಾವ ರೀತಿ ಮಾತನಾಡಬೇಕು ಎಂಬುದು ಗೊತ್ತಿಲ್ಲ. ಪಕ್ಷದ ಸಂಸದ ನೀಡಿರುವ ಇಂತಹ ಹೇಳಿಕೆಯ ಕುರಿತು ಕಾಂಗ್ರೆಸ್‌ ನಾಯಕರ ಅಭಿಪ್ರಾಯ ಏನೆಂಬುದು ಗೊತ್ತಿಲ್ಲ. ಅಂತಾರಾಷ್ಟ್ರೀಯ ಬೆಳವಣಿಗೆಗಳ ಕುರಿತು ಜವಾಬ್ದಾರಿಯುತವಾಗಿ ವರ್ತಿಸುವುದು ಒಬ್ಬ ಸಂಸತ್‌ ಸದಸ್ಯನ ಕೆಲಸ. ಇಂತಹ ಹೇಳಿಕೆಗಳು ಭಾರತದ ಸಂಸತ್‌ ಹಾಗೂ ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ” ಎಂದು ಕೇಂದ್ರ ಸಚಿವ ವಿ. ಮುರಳೀಧರನ್‌ ಹೇಳಿದ್ದಾರೆ. ಇವರ ಹೇಳಿಕೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲೂ ಪರ ವಿರೋಧ ಚರ್ಚೆಯಾಗುತ್ತಿದೆ.

ಇದನ್ನೂ ಓದಿ: Israel Palestine War: ‌ಇಸ್ರೇಲ್‌ ಸೈನಿಕರು ಅತ್ಯಾಚಾರಿಗಳು ಎಂದ ಶಿಕ್ಷಕನ ಬಂಧನ!

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರದಲ್ಲಿ ಮೃತಪಟ್ಟವರ ಸಂಖ್ಯೆ 12 ಸಾವಿರ ದಾಟಿದೆ. ಅದರಲ್ಲೂ, ಹಮಾಸ್‌ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 11 ಸಾವಿರಕ್ಕೂ ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಇನ್ನೂ 3 ಸಾವಿರಕ್ಕೂ ಅಧಿಕ ಜನ ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂಬುದಾಗಿ ಮಾಹಿತಿ ನೀಡಿದೆ. ಇನ್ನು ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version