Site icon Vistara News

ಇವರೇ ನಮ್ಮ ಆಧುನಿಕ ದುರ್ಗೆಯರು! ನವರಾತ್ರಿ, ದುರ್ಗಾಪೂಜೆ ಶುಭಾಶಯ ಕೋರಿದ ಇಸ್ರೇಲ್ ರಾಯಭಾರಿ

Israeli ambassador wished Navratri with photos of Israeli women soldiers

ನವದೆಹಲಿ: ಹಮಾಸ್ ಬಂಡುಕೋರರು (Hamas Attack) ಮತ್ತು ಇಸ್ರೇಲ್‌ ನಡುವೆ ಘೋರ ಕಾಳಗ ನಡೆಯುತ್ತಿರುವ ಹೊತ್ತಿನಲ್ಲಿ(Israel Palestine War), ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ನಾರ್ ಗಿಲೋನ್ (Israeli ambassador Naor Gilon) ಅವರು ನವರಾತ್ರಿ (Navaratri) ಹಾಗೂ ದುರ್ಗಾ ಪೂಜೆಯ (Durga Pooja) ಶುಭಾಶಯ ಕೋರಿದ್ದಾರೆ. ಈ ವೇಳೆ ಅವರು ಹಮಾಸ್ ಬಂಡುಕೋರರ ವಿರುದ್ಧ ಹೋರಾಡುತ್ತಿರುವ ಇಸ್ರೇಲ್ ಮಹಿಳಾ ಯೋಧರ ಫೋಟೋಗಳನ್ನು ಷೇರ್ ಮಾಡಿದ್ದಾರೆ. ಅಲ್ಲದೇ, ದುರ್ಗಾ ದೇವಿ ದುಷ್ಟರನ್ನು ಸಂಹಾರ ಮಾಡಿದಂತೆಯೇ, ನಮ್ಮ ಆಧುನಿಕ ದುರ್ಗೆಯರು ಶಕ್ತಿಶಾಲಿಗಳಾಗಿ ನಿಂತಿದ್ದಾರೆ ಮತ್ತು ಈ ಭಯೋತ್ಪಾದನೆಯ ವಿರುದ್ಧದ ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಒಳ್ಳೆಯತನವು ಯಾವಾಗಲೂ ಕೆಟ್ಟದ್ದಕ್ಕಿಂತ ಮೇಲುಗೈ ಸಾಧಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ಭಾರತದ ಎಲ್ಲ ಸ್ನೇಹಿತರಿಗೆ ನವರಾತ್ರಿ ಶುಭಾಶಯ ತಿಳಿಸಿದ್ದಾರೆ.

ಭಾರತ ಮಾತ್ರವಲ್ಲದೇ, ಶ್ರೀಲಂಕಾ ಮತ್ತು ಭೂತಾನ್‌ಗಳಿಗೂ ಇಸ್ರೇಲ್ ರಾಯಭಾರಿಯಾಗಿರುವ ನಾರ್ ಗಿಲೋನ್ ಅವರು ಈ ಹಿಂದೆ ಇಟಲಿ ಮತ್ತು ನೆದರ್ಲೆಂಡ್‌ಗಳಲ್ಲಿ ಇಸ್ರೇಲ್ ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ.

ಅಕ್ಟೋಬರ್ 7ರಂದು ಹಮಾಸ್ ಬಂಡುಕೋರರು ದಕ್ಷಿಣ ಇಸ್ರೇಲ್‌ ಮೇಲೆ 5 ಸಾವಿರ ರಾಕೆಟ್‌ಗಳ ಮೂಲಕ ಏಕಕಾಲಕ್ಕೆ ದಾಳಿ ಮಾಡುವ ಮೂಲಕ ಮಾರಣಹೋಮ ನಡೆಸಿದ್ದರು. ಈ ವೇಳೆ, 1700 ಇಸ್ರೇಲಿಗಳು ಮೃತಪಟ್ಟಿದ್ದರು. ಹಲವರನ್ನು ಒತ್ತೆಯಾಳುಗಳನ್ನಾಗಿ ಗಾಜಾ ಪಟ್ಟಿಗೆ ಕರೆದುಕೊಂಡು ಹೋಗಿದ್ದರು. ಹಮಾಸ್ ದಾಳಿಯ ಬೆನ್ನಲ್ಲೇ ಇಸ್ರೇಲ್ ಕೂಡ ಗಾಜಾ ಪಟ್ಟಿಯ ಮೇಲೆ ಪೂರ್ಣ ಪ್ರಮಾಣದಲ್ಲಿ ಯುದ್ಧವನ್ನು ಸಾರಿತು. ಅಲ್ಲದೇ ನಿರಂತರವಾಗಿ ವೈಮಾನಿಕ ದಾಳಿಯನ್ನು ನಡೆಯುತ್ತಿದೆ. ಪರಿಣಾಮ 5000ಕ್ಕೂ ಜನರು ಮೃತಪಟ್ಟಿದ್ದಾರೆ. ಯುದ್ಧವು ಈಗ 14ನೇ ದಿನಕ್ಕೆ ಕಾಲಿಟ್ಟಿದೆ.

ಗಾಜಾ ಚರ್ಚ್‌ ಉಡೀಸ್‌, 21 ಸಾವು

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಂಘರ್ಷವು (Israel Palestine War) ಎರಡೂ ದೇಶಗಳ ನಾಗರಿಕರನ್ನು ಬಲಿ ಪಡೆಯುತ್ತಿದೆ. ಅದರಲ್ಲೂ, ಮೊದಲು ರಾಕೆಟ್‌ ದಾಳಿ ಮಾಡಿದ ಹಮಾಸ್‌ ಉಗ್ರರನ್ನು ನಿರ್ನಾಮ ಮಾಡಲು ಹೊರಟಿರುವ ಇಸ್ರೇಲ್‌ ಸೇನೆಯು ಗಾಜಾ ನಗರದ (Gaza City) ಮೇಲೆ ಸಂಪೂರ್ಣವಾಗಿ ಹತೋಟಿ ಸಾಧಿಸಿದೆ. ಇದರ ಬೆನ್ನಲ್ಲೇ, ಗಾಜಾ ಮೇಲೆ ಇಸ್ರೇಲ್‌ ಸೈನಿಕರು ಬಾಂಬ್‌ ದಾಳಿ ನಡೆಸಿದ್ದು, ಒಂದು ಚರ್ಚ್‌ಅನ್ನು (Gaza Church) ಉಡಾಯಿಸಿದ್ದಾರೆ. ಇಸ್ರೇಲ್‌ ದಾಳಿಗೆ ಗಾಜಾದಲ್ಲಿ 21 ಮಂದಿ ಮೃತಪಟ್ಟಿದ್ದಾರೆ.

ಗಾಜಾ ನಗರದಲ್ಲಿರುವ ಗ್ರೀಕ್‌ ಆರ್ಥಡಾಕ್ಸ್‌ ಚರ್ಚ್‌ ಮೇಲೆ ಇಸ್ರೇಲ್‌ ರಾಕೆಟ್‌ ದಾಳಿ ನಡೆಸಿದೆ. ಇದರಿಂದಾಗಿ 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ, ಇಡೀ ಗಾಜಾ ನಗರವನ್ನು ಇಸ್ರೇಲ್‌ ಸೈನಿಕರು ಸುತ್ತುವರಿದಿದ್ದು, ಗುರುವಾರ (ಅಕ್ಟೋಬರ್‌ 19) ನಡೆದ ದಾಳಿಯಲ್ಲಿ 21ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ, ನೂರಾರು ಜನ ಗಾಯಗೊಂಡಿದ್ದಾರೆ. ಇದರಿಂದಾಗಿ, ಗಾಜಾ ನಗರದಲ್ಲಿ ದಾಳಿಯಿಂದ ಸಂತ್ರಸ್ತರಾದವರಿಗೆ ಸಂಘ-ಸಂಸ್ಥೆಗಳು, ಸರ್ಕಾರ ಯಾವುದೇ ನೆರವು ನೀಡಲು ಆಗುತ್ತಿಲ್ಲ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ: ಇಸ್ರೇಲ್ ವೈಮಾನಿಕ ದಾಳಿ; ಹಮಾಸ್ ನಾಯಕ, ಪ್ಯಾಲೆಸ್ತೀನ್ ಭದ್ರತಾ ಪಡೆ ಕಮಾಂಡರ್ ಜೆಹಾದ್ ಮೈಸೆನ್ ಸಾವು

ಮಸೀದಿ ಉರುಳಿಸಿದ ಇಸ್ರೇಲ್

ಕೆಲ ದಿನಗಳ ಹಿಂದಷ್ಟೇ ಗಾಜಾದಲ್ಲಿರುವ ಮಸೀದಿಯೊಂದನ್ನು ಇಸ್ರೇಲ್‌ ಉಡೀಸ್‌ ಮಾಡಿತ್ತು. ಅಲ್‌ ಮೊಹಮ್ಮದ್‌ ಅಮಿನ್‌ ಮಸೀದಿಯನ್ನು ನೆಲಸಮಗೊಳಿಸಿತ್ತು. ಗಾಜಾದಲ್ಲಿ 2013ರಲ್ಲಿ ಮಲೇಷ್ಯಾದ ಮುಸ್ಲಿಂ ಕೇರ್‌ ಮಲೇಷ್ಯಾ ಸೊಸೈಟಿಯು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಸೀದಿಯನ್ನು ನಿರ್ಮಿಸಿತ್ತು. “ಇಸ್ರೇಲ್‌ ಬಾಂಬ್‌ ದಾಳಿಯಲ್ಲಿ ಮಲೇಷ್ಯಾ ಜನರಿಂದ ಹಣ ಸಂಗ್ರಹಿಸಿದ ನಿರ್ಮಿಸಿದ ಮಸೀದಿಯು ಧ್ವಂಸಗೊಂಡಿದೆ. ಇದರಿಂದ ನಮಗೆ ಅತೀವ ದುಃಖವಾಗಿದೆ. ದಾಳಿಯನ್ನು ನಾವು ಖಂಡಿಸುತ್ತೇವೆ” ಎಂದು ಮುಸ್ಲಿಂ ಕೇರ್‌ ಮಲೇಷ್ಯಾ ಸೊಸೈಟಿಯ ಖಂಡಿಸಿತ್ತು.

Exit mobile version