Site icon Vistara News

Chandrayaan -3 : ಚಂದ್ರಲೋಕದಲ್ಲಿ ಶಿವಶಕ್ತಿಗೆ ಪ್ರದಕ್ಷಿಣೆ ಹಾಕುತ್ತಿರುವ ಪ್ರಜ್ಞಾನ್​ ರೋವರ್​!

chandrayaan Rover

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ಚಂದ್ರಯಾನ -3 ರ ಪ್ರಜ್ಞಾನ್ ರೋವರ್ ಕುರಿತು ಹೊಸ ಅಪ್​ಡೇಟ್​ ಕೊಟ್ಟಿದೆ. ಶನಿವಾರ ಬೆಳಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಿದ್ದ ವೇಳೆ ವಿಕ್ರಮ್​ ಲ್ಯಾಂಡರ್​ ಇಳಿದ ಟಚ್​ ಡೌನ್​ ಪಾಯಿಂಟ್​ಗೆ ಶಿವಶಕ್ತಿ ಪಾಯಿಂಟ್​ ಎಂದು ಹೆಸರಿಟ್ಟಿದ್ದರು. ಆ ಶಿವಶಕ್ತಿ ಪಾಯಿಂಟ್​ನಲ್ಲಿ ಪ್ರಜ್ಞಾನ್ ಸುತ್ತುವರಿಯುತ್ತಿದೆ ಎಂದು ಇಸ್ರೊ ಹೊಸ ವಿಡಿಯೊ ಬಿಡುಗಡೆ ಮಾಡಿದೆ.

ಎಕ್ಸ್ ( ಹಳೆಯ ಟ್ವಿಟರ್) ನಲ್ಲಿ ದೃಶ್ಯಗಳನ್ನು ಬಿಡುಗಡೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, “ಚಂದ್ರಯಾನ -3 ಮಿಷನ್: ಇಲ್ಲಿ ಹೊಸತೇನಿದೆ? ಪ್ರಜ್ಞಾನ್ ರೋವರ್ ದಕ್ಷಿಣ ಧ್ರುವದಲ್ಲಿ ಚಂದ್ರನ ರಹಸ್ಯಗಳನ್ನು ಹುಡುಕುತ್ತಾ ಶಿವ ಶಕ್ತಿ ಪಾಯಿಂಟ್ ಸುತ್ತಲೂ ಸುತ್ತುತ್ತಿದೆ ಎಂದು ಬರೆದುಕೊಂಡಿದೆ.

ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಸಾಫ್ಟ್​​ ಲ್ಯಾಂಡಿಂಗ್ ಮತ್ತು ಚಂದ್ರನ ಮೇಲೆ ರೋವರ್ ಸುತ್ತುವುದು ಸೇರಿದಂತೆ ಮಿಷನ್​ ಪ್ರಮುಖ ಮೂರು ಉದ್ದೇಶಗಳಲ್ಲಿ ಎರಡನ್ನು ಸಾಧಿಸಲಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಎಲ್ಲಾ ಪೇಲೋಡ್​​ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಆಂತರಿಕ ವೈಜ್ಞಾನಿಕ ಪ್ರಯೋಗಗಳು ನಡೆಯುತ್ತಿವೆ ಎಂಬುದಾಗಿಯೂ ಇಸ್ರೊ ಹೇಳಿದೆ. ಇದಕ್ಕೂ ಮುನ್ನ ಶುಕ್ರವಾರ, ಪ್ರಜ್ಞಾನ್ ರೋವರ್ ಚಂದ್ರನ ಮೇಲ್ಮೈ ಮೇಲೆ ಸಂಚರಿಸಿತು ಹಾಗೂ 8 ಮೀಟರ್ ದೂರವನ್ನು ಕ್ರಮಿಸಿತು ಎಂದು ಇಸ್ರೋ ತಿಳಿಸಿದೆ. ರೋವರ್​​ನ ಹಿಂಭಾಗದ ಚಕ್ರಗಳು, ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತು ಭಾರತೀಯ ಲಾಂಛನದ ಗುರುತುಗಳನ್ನು ಹೊಂದಿದ್ದು, ಚಂದ್ರನ ಮೇಲ್ಮೈಯಲ್ಲಿ ಮಸುಕಾದ ಗುರುತುಗಳನ್ನು ಬಿಟ್ಟಿವೆ.

ಪ್ರಧಾನಿ ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್​ವರ್ಕ್​ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್ (ಇಸ್ಟ್ರಾಕ್) ನಲ್ಲಿ ಇಸ್ರೋ ವಿಜ್ಞಾನಿಗಳನ್ನು ಭೇಟಿಯಾಗಿ ಅಭಿನಂದಿಸಿದರು/ ಅಲ್ಲಿ ಯಶಸ್ವಿ ಚಂದ್ರನ ಲ್ಯಾಂಡಿಂಗ್​​ನಲ್ಲಿ ಭಾಗಿಯಾಗಿರುವ ಚಂದ್ರಯಾನ್ -3 ಹೀರೋಗಳನ್ನು ಶ್ಲಾಘಿಸಿದರು.

ಇದನ್ನೂ ಓದಿ : Chandrayaan 3: ಚಂದ್ರನ ಮೇಲೆ ವಾಕಿಂಗ್‌ ಹೊರಟ ರೋವರ್‌ ಪ್ರಗ್ಯಾನ್!‌ ‘ಮೇಡ್ ಇನ್ ಇಂಡಿಯಾ, ಮೇಡ್ ಫಾರ್ ಮೂನ್’ ಎಂದ ಇಸ್ರೋ

ಚಂದ್ರಯಾನ 3 ರ ಟಚ್​ಡೌನ್​ ಪಾಯಿಂಟ್ ಅನ್ನು ‘ಶಿವ ಶಕ್ತಿ’ ಎಂದು ಕರೆಯಲಾಗುವುದು ಮತ್ತು ಚಂದ್ರಯಾನ 2 ತನ್ನ ಹೆಜ್ಜೆಗುರುತುಗಳನ್ನು ಬಿಟ್ಟ ಸ್ಥಳವನ್ನು ‘ತಿರಂಗಾ’ ಎಂದು ಕರೆಯಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದರು. ಚಂದ್ರಯಾನ -3 ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ನೆನಪಿಗಾಗಿ ಆಗಸ್ಟ್ 23 ಅನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಘೋಷಿಸುವುದಾಗಿ ಅವರು ಹೇಳಿದ್ದರು.

40 ದಿನಗಳ ಬಾಹ್ಯಾಕಾಶ ಪ್ರಯಾಣದ ನಂತರ, ಚಂದ್ರಯಾನ -3 ಲ್ಯಾಂಡರ್ ‘ವಿಕ್ರಮ್’ ಬುಧವಾರ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಿತ್ತು

ರಷ್ಯಾದ ಲ್ಯಾಂಡರ್ ಲೂನಾ -25 ಅಪಘಾತಕ್ಕೀಡಾದ ಕೆಲವು ದಿನಗಳ ನಂತರ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಒಳಗೊಂಡ ಚಂದ್ರಯಾನ್ -3 ಬಾಹ್ಯಾಕಾಶ ನೌಕೆಯ ಲ್ಯಾಂಡರ್ ಮಾಡ್ಯೂಲ್ ಸಂಜೆ 6.04 ಕ್ಕೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿ ಮೃದುವಾಗಿ ಲ್ಯಾಂಡ್ ಆಗಿತ್ತು.

2019ರ ಚಂದ್ರಯಾನ -2 ರ ಅನುಸರಣಾ ಕಾರ್ಯಾಚರಣೆ ಸೇರಿದಂತೆ ಹಲವು ಉದ್ದೇಶಗಳನ್ನು ಸಾಧಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಚಂದ್ರಯಾನ 2 ಸಮಯದಲ್ಲಿ ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್ ಮಾಡಲು ಲ್ಯಾಂಡರ್​ಗೆ ಸಾಧ್ಯವಾಗಿರಲಿಲ್ಲ. ಚಂದ್ರನ ಮೇಲ್ಮೈಯಲ್ಲಿ ರೋವರ್ ರೋವಿಂಗ್ ಸಾಮರ್ಥ್ಯಗಳನ್ನು ಪ್ರದರ್ಶಿಸುವುದು ಮತ್ತು ಆಂತರಿಕ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದೆ.

Exit mobile version