Site icon Vistara News

Chandrayaan 3: ಚಂದಿರನಿಗೆ ಮತ್ತಷ್ಟು ಹತ್ತಿರ ಚಂದ್ರಯಾನ-3 ನೌಕೆ! ಕಕ್ಷೆ ಇಳಿಸುವ ಪ್ರಕ್ರಿಯೆ ಸಕ್ಸೆಸ್

Chandrayaan-3

ನವದೆಹಲಿ: ಚಂದ್ರಯಾನ-3 (Chandrayaan 3) ನೌಕೆಯು ಈಗ ಚಂದಿರನಿಗೆ (Moon) ಮತ್ತಷ್ಟು ಹತ್ತಿರವಾಗಿದೆ. ನೌಕೆಯ ಮೂರನೇ ಚಂದಿರನ ಕಕ್ಷೆಗೆ ಇಳಿಸುವ ಪ್ರಕ್ರಿಯೆಯನ್ನು ಇಸ್ರೋ ಪೂರೈಸಿದೆ. ಇದರೊಂದಿಗೆ ಚಂದಿರನಿಗೆ ನೌಕೆ ಇನ್ನಷ್ಟು ಹತ್ತಿರವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಚಂದ್ರಯಾನ-3 ನೌಕೆಯ ಕಕ್ಷೆಯನ್ನು 174 km x 1437 ಕಿ.ಮೀ.ಗೆ ಇಳಿಸಲಾಗಿದೆ ಎಂದು ಹೇಳಿದೆ(lunar-bound maneuvering).

ನೌಕೆಯ ಕಕ್ಷೆಯನ್ನು ಇಳಿಸುವ ಮುಂದಿನ ಪ್ರಕ್ರಿಯೆ ಆಗಸ್ಟ್ 14ರಂದು ನಡೆಯಲಿದೆ ಎಂದು ಇಸ್ರೋ ಹೇಳಿದೆ. ಈ ಹಿಂದೆ ನಡೆದ ಚಂದ್ರಯಾನ-3 ನೌಕೆಯ ಕಕ್ಷೆ ಇಳಿಸುವ ಪ್ರಕ್ರಿಯೆ ಕೂಡ ಯಶಸ್ವಿಯಾಗಿತ್ತು. ಇಸ್ರೋ ಪ್ರಕಾರ, ಈ ಪ್ರಕ್ರಿಯೆ ಭಾನುವಾರ ನಡೆದಿತ್ತು. ಚಂದ್ರಯಾನ-3 ನೌಕೆಯಲ್ಲಿರುವ ಮುನ್ನೂಕುವ (ಪ್ರಪಲ್ಷನ್) ವ್ಯವಸ್ಥೆಯನ್ನು ಬಳಸಿಕೊಂಡು ಈ ಕಕ್ಷೆ ಇಳಿಸುವ ಪ್ರಕ್ರಿಯೆಯನ್ನು ನೆರವೇರಿಸಲಾಗುತ್ತದೆ. 2019ರಲ್ಲಿ ಚಂದ್ರಯಾನ-2 ವೈಫಲ್ಯ ಕಂಡ ಬೆನ್ನಲ್ಲೇ ಚಂದ್ರಯಾನ-3 ಕೈಗೊಳ್ಳುವುದಾಗಿ ಇಸ್ರೋ ಹೇಳಿತ್ತು. ಅದರಂತೆ, ಕಳೆದ ಜುಲೈ ತಿಂಗಳ 14ರಂದು ಇಸ್ರೋ ಚಂದ್ರಯಾನ-3 ಮಿಷನ್‌ಗೆ ಚಾಲನೆ ನೀಡಿತ್ತು. ಚಂದ್ರಯಾನ-3 ನೌಕೆಯನ್ನು ಹೊತ್ತ ಎಲ್‌ವಿಎಂ 3 ರಾಕೆಟ್ ಯಶಸ್ವಿಯಾಗಿ ನಭಕ್ಕೆ ಹಾರಿತ್ತು. ನಿರ್ದಿಷ್ಟ ಕಕ್ಷೆಯಲ್ಲಿ ನೌಕೆಯನ್ನು ಇಳಿಸುವಲ್ಲಿ ಯಶಸ್ವಿಯಾಗಿತ್ತು.

ಇಸ್ರೋ ಟ್ವೀಟ್

ಸಾಫ್ಟ್‌ ಲ್ಯಾಂಡಿಂಗ್ ವೇಳೆ ಎಂಜಿನ್‌ ಫೇಲಾದರೆ ಗತಿ ಏನು? ಇಸ್ರೋ ಪ್ಲಾನ್‌ ಹೇಗಿದೆ?

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಹತ್ವಕಾಂಕ್ಷಿ ಮಿಷನ್‌ ಚಂದ್ರಯಾನ-3 ಈಗ ಮಹತ್ವದ ಹಂತಕ್ಕೆ ತಲುಪಿದೆ. ಆಗಸ್ಟ್ 23ರಂದು ಚಂದ್ರನ (Moon) ದಕ್ಷಿಣ ಧ್ರುವದಲ್ಲಿ (South Pool) ಭಾರತದ ಚಂದ್ರಯಾನ-3 (Chandrayaan 3) ನೌಕೆ ಸಾಫ್ಟ್‌ ಇಳಿಯಲಿದೆ. ಇದಕ್ಕಾಗಿ ದಿನಗಣನೆ ಆರಂಭವಾಗಿದ್ದು, ಎಲ್ಲರ ಗಮನವೀಗ ಸಾಫ್ಟ್‌ ಲ್ಯಾಂಡಿಂಗ್‌ ಮೇಲಿದೆ. ಇದರ ಬೆನ್ನಲ್ಲೇ, ಕೊನೆ ಕ್ಷಣದಲ್ಲಿ ಏರುಪೇರಾದರೆ, ಎಂಜಿನ್‌ ಫೇಲಾದರೆ ಏನಾಗುತ್ತದೆ ಎಂಬುದರ ಕುರಿತು ಇಸ್ರೋ ಅಧ್ಯಕ್ಷ ಎಸ್.‌ ಸೋಮನಾಥ್‌ ಮಹತ್ವದ ಮಾಹಿತಿ ನೀಡಿದ್ದಾರೆ.

“ಚಂದ್ರಯಾನ ನೌಕೆಯು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ. ನೌಕೆಯನ್ನು ಇಸ್ರೋ ತುಂಬ ಜಾಗ್ರತೆ ವಹಿಸಿ ಗಮನಿಸುತ್ತಿದೆ. ಸದ್ಯದ ಮಟ್ಟಿಗೆ ಯಾವುದೇ ಅಡ್ಡಿ-ಆತಂಕವಿಲ್ಲ. ಆದರೆ, ಕೊನೆಯ ಕ್ಷಣದಲ್ಲಿ ಎಂಜಿನ್‌ ಹಾಗೂ ಸೆನ್ಸಾರ್‌ ವಿಫಲವಾದರೂ ಚಿಂತೆ ಇಲ್ಲ. ಎಂಜಿನ್‌, ಸೆನ್ಸಾರ್‌ ಫೇಲಾದರೂ ವಿಕ್ರಮ್‌ ಲ್ಯಾಂಡರ್‌ ಸಾಫ್ಟ್‌ ಲ್ಯಾಂಡಿಂಗ್‌ ಆಗಲಿದೆ. ಅಷ್ಟರಮಟ್ಟಿಗೆ ಸಮರ್ಥವಾಗಿ ವಿನ್ಯಾಸಗೊಳಿಸಲಾಗಿದೆ” ಎಂದು ತಿಳಿಸಿದ್ದಾರೆ. ಚಂದ್ರಯಾನ-2 ಮಿಷನ್‌ ಸಾಫ್ಟ್‌ ಲ್ಯಾಂಡಿಂಗ್‌ ವೇಳೆ ವಿಫಲವಾದ ಕಾರಣ ಎಸ್.ಸೋಮನಾಥ್‌ ಅವರ ಹೇಳಿಕೆಯು ಮಹತ್ವ ಪಡೆದಿದೆ.

ರಷ್ಯಾದ ಲೂನಾ 25 ಪ್ರತಿಸ್ಫರ್ಧಿ

ಇದರ ಮಧ್ಯೆಯೇ, ಭಾರತದ ಚಂದ್ರಯಾನ-3 ಅಥವಾ ರಷ್ಯಾದಾ ಲೂನಾ 25 ನೌಕೆ ಪೈಕಿ ಯಾವುದು ಮೊದಲು ಚಂದ್ರನ ಅಂಗಳಕ್ಕೆ ಕಾಲಿಡಲಿದೆ ಎಂಬ ಕುತೂಹಲ ಮೂಡಿದೆ. ಲೂನ್ 25 ನೌಕೆಯು ಚಂದ್ರನಲ್ಲಿ ತೆರಳಲು 5 ದಿನಗಳನ್ನು ತೆಗೆದುಕೊಳ್ಳಲಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ದಕ್ಷಿಣ ಧ್ರುವದ ಸಂಭಾವ್ಯ ಮೂರು ಸ್ಥಳಗಳಲ್ಲಿ ಲ್ಯಾಂಡಿಂಗ್ ಆಗುವ ಮೂದಲು ಲೂನಾ 25 ಐದರಿಂದ 7 ದಿನಗಳ ಕಾಲ ಚಂದ್ರನ ಕಕ್ಷೆಯಲ್ಲಿ ಇರಲಿದೆ ಎಂದು ರಷ್ಯಾದಾ ಬಾಹ್ಯಾಕಾಶ ಸಂಸ್ಥೆ ಹೇಳಿದೆ.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಚಂದ್ರಯಾನ 3, ಮನುಕುಲದ ಇನ್ನೊಂದು ಮಹಾ ಜಿಗಿತ

ಮೂರನೇ ಮಾನವರ ರಹಿತ ಚಂದ್ರಯಾನ-3 ಪ್ರಾಜೆಕ್ಟ್

ಚಂದ್ರಯಾನ -3 ಭಾರತದ ಮೂರನೇ ಮಾನವರಹಿತ ಚಂದ್ರಯಾನ ಮಿಷನ್ ಆಗಿದೆ. ಇಲ್ಲಿಯವರೆಗೆ ಒಟ್ಟು ದೂರದ ಮೂರನೇ ಎರಡು ಭಾಗವನ್ನು ಕ್ರಮಿಸಿದ್ದು ಶನಿವಾರ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ. ‘ನಾನು ಚಂದ್ರನ ಗುರುತ್ವಾಕರ್ಷಣೆಯನ್ನು ಅನುಭವಿಸುತ್ತಿದ್ದೇನೆ’ ಎಂಬುದಾಗಿ ಚಂದ್ರಯಾನ -3 ಅನ್ನು ಚಂದ್ರನ ಹತ್ತಿರಕ್ಕೆ ತಂದ ಸಂದರ್ಭವನ್ನು ಇಸ್ರೋ ಬಣ್ಣಿಸಿತ್ತು. ಜುಲೈ 14 ರಂದು ಉಡಾವಣೆಯಾದ ಮೂರು ವಾರಗಳಲ್ಲಿ ಭೂಮಿಯ ಗುರುತ್ವಾಕರ್ಷಣೆಯ ವಿರುದ್ಧ ಅದನ್ನು ಎತ್ತುವ ಪ್ರಯತ್ನದಲ್ಲಿ ನೌಕೆ ಐದುಕ್ಕೂ ಹೆಚ್ಚು ಚಲನೆಗಳನ್ನು ಪಡೆದುಕೊಂಡಿದೆ.

ವಿಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version