Site icon Vistara News

Ram Mandir: ಆಸ್ಟ್ರೇಲಿಯಾದ ಪರ್ತ್‌ನಲ್ಲಿ ನಿರ್ಮಾಣವಾಗಲಿದೆ ಜಗತ್ತಿನ ಅತಿ ಎತ್ತರದ ರಾಮ ಮಂದಿರ!

ISVACU will build tallest Ram Mandir in Perth, Australia

ನವದೆಹಲಿ: ಅಂತಾರಾಷ್ಟ್ರೀಯ ವೈದಿಕ ಮತ್ತು ಸಾಂಸ್ಕೃತಿಕ ಸಂಘ(ISVACU)ವು ಆಸ್ಟ್ರೇಲಿಯಾದ (Australia) ಪರ್ತ್‌ ನಗರದಲ್ಲಿ (Perth) ವಿಶ್ವದ ಅತಿ ಎತ್ತರದ ರಾಮ ಮಂದಿರವನ್ನು (Tallest Ram Mandir) ನಿರ್ಮಾಣ ಮಾಡಲಿದೆ. ಇದು ಕೇವಲ ಮಂದಿರ ಮಾತ್ರವೇ ಆಗಿರದೇ, ಇದು ಯೋಗ ಮತ್ತು ಧ್ಯಾನ ಕೇಂದ್ರ, ಸಾಂಸ್ಕೃತಿಕ ಕೇಂದ್ರ, ಅತಿಥಿ ಗೃಹ, ವೇದಗಳ ಕಲಿಕಾ ಕೇಂದ್ರ, ಬಹುಕ್ರಿಯಾತ್ಮಕ ಸಮುದಾಯ ಭವನ, ಪರ್ಮಾರ್ತ್ ರಸೋಯಿ (ಸಮುದಾಯ ಕಿಚನ್), ಆರ್ಟ್ ಗ್ಯಾಲರಿ ಮತ್ತು ಪ್ರಾಚೀನ ಪುಸ್ತಕಗಳು, ಲಿಪಿಗಳು, ರಾಮಾಯಣ ಮತ್ತು ಇತರ ಪ್ರಕಟಣೆಗಳ ಗ್ರಂಥಾಲಯವನ್ನು ಒಳಗೊಂಡಿರುತ್ತದೆ.

ಈ ಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬಹುದು, ಹಬ್ಬಗಳನ್ನು ಆಚರಿಸಬಹುದು ಮತ್ತು ಸಮಗ್ರ ಯೋಗಕ್ಷೇಮ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಇಷ್ಟು ಮಾತ್ರವಲ್ಲದೇ ISVACU ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ವಿದ್ಯಾರ್ಥಿವೇತನವನ್ನು ನೀಡಲಿದೆ ಮತ್ತು ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಸರ್ಕಾರ ಮತ್ತು ನಾಗರಿಕ ಸಮಾಜವನ್ನು ಬೆಂಬಲಿಸುತ್ತದೆ. ಉದ್ದೇಶಿತ ರಾಮ ಮಂದಿರವು ಆಸ್ಟ್ರೇಲಿಯಾ ಮತ್ತು ಜಗತ್ತಿನ ಹೆಮ್ಮೆಯಾಗಲಿದೆ ಎಂದು ISVACU ಹೇಳಿದೆ. ಸಂಘವು ಎಲ್ಲ ಮಾಹಿತಿಯನ್ನು ತನ್ನ ಅಧಿಕೃತ ಜಾಲತಾಣದಲ್ಲಿ ಹಂಚಿಕೊಂಡಿದೆ.

ಗರ್ಭ ಗುಡಿ ಪ್ರವೇಶಿಸಿದ ರಾಮ ಲಲ್ಲಾ

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ (Ram Mandir) ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪನೆಗೆ ನಾಲ್ಕೇ ದಿನಗಳು ಬಾಕಿ ಇವೆ. ಅದರಲ್ಲೂ ಮಂಗಳವಾರದಿಂದ (ಜನವರಿ 16) ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿವೆ. ಇದರ ಬೆನ್ನಲ್ಲೇ, ಕನ್ನಡಿಗ ಅರುಣ್‌ ಯೋಗಿರಾಜ್‌ (Arun Yogiraj) ಕೆತ್ತಿದ ರಾಮಲಲ್ಲಾನ ಮೂರ್ತಿಯನ್ನು ಬುಧವಾರ ಸಂಜೆ (ಜನವರಿ 17) ರಾಮಮಂದಿರದ ಆವರಣದೊಳಗೆ ತಂದು, ಗುರುವಾರ ಬೆಳಗ್ಗೆ (ಜನವರಿ 18) ಗರ್ಭಗೃಹದಲ್ಲಿ ಇರಿಸಲಾಗಿದೆ.

ಗುರುವಾರದ ವಿಧಿವಿಧಾನಗಳು ಹೀಗಿವೆ…
51 ಇಂಚಿನ ರಾಮಲಲ್ಲಾ ಮೂರ್ತಿಯನ್ನು ಗರ್ಭಗುಡಿಯಲ್ಲಿ ಇರಿಸಲಾಗಿದೆ. ಗುರುವಾರ ಗಣೇಶಾಂಬಿಕಾ ಪೂಜೆಯ ಬಳಿಕ ಆಯುಷ್‌ಮಂತ್ರ ಪಠಿಸಲಾಗುತ್ತದೆ. ಮಂಟಪ ಪ್ರವೇಶದ ನಂತರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ರಾಮಲಲ್ಲಾನ ಮೂರ್ತಿಯನ್ನು ಜಲಾಧಿವಾಸ (ನೀರಿನಿಂದ ಮೂರ್ತಿಯನ್ನು ತೊಳೆಯುವುದು), ಗಂಧಾಧಿವಾಸ (ಅಭಿಷೇಕ) ಮಾಡಲಾಗುತ್ತದೆ. ಗುರುವಾರ ಸಂಜೆ ರಾಮಲಲ್ಲಾ ಮೂರ್ತಿಗೆ ಆರತಿ ಮಾಡಲಾಗುತ್ತದೆ. ಆರತಿಗೂ ಮೊದಲು ರಾಮಲಲ್ಲಾ ಮೂರ್ತಿಯನ್ನು ಹಾಲು, ತುಪ್ಪ, ಗೋಮೂತ್ರ, ಗೋವಿನ ಸಗಣಿ ಹಾಗೂ ಮೊಸರಿನಿಂದ ಪಂಚಗವ್ಯ ಅಭಿಷೇಕ ಮಾಡಲಾಗುತ್ತದೆ.

ಈ ಸುದ್ದಿಯನ್ನೂ ಓದಿ: Rama Mandir : ರಾಮ ಮಂದಿರ ಆಯಿತು, ಇನ್ನು ಹಿಂದೂ ರಾಷ್ಟ್ರ; RSS ಸಹಕಾರ್ಯವಾಹ ನಾ ತಿಪ್ಪೇಸ್ವಾಮಿ

Exit mobile version