ಭೋಪಾಲ್, ಮಧ್ಯಪ್ರದೇಶ: ತಿಂಗಳಿಗೆ 58 ಸಾವಿರ ರೂ. ಸಂಬಳ ಪಡೆಯುವ ಯುವಕನಿಗೆ ಆದಾಯ ತೆರಿಗೆ ಇಲಾಖೆಯು 113 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ಎರಡನೇ ಬಾರಿಗೆ ನೋಟಿಸ್ ನೀಡಿದೆ(IT Notice). 2011-12ರ ಹಣಕಾಸು ವರ್ಷದಲ್ಲಿ ಯುವಕನ ಖಾತೆಯಲ್ಲಿ 132 ಕೋಟಿ ರೂ. ವ್ಯವಹಾರ ನಡೆದಿದ್ದು, ಈ ಹಿನ್ನೆಲೆಯಲ್ಲಿ ಟ್ಯಾಕ್ಸ್ ಕಟ್ಟುವಂತೆ ನೋಟಿಸ್ ನೀಡಲಾಗಿದೆ. ಯುವಕ ಹಾಗೂ ಆತನ ಕುಟುಂಬವು ತೀವ್ರ ಆತಂಕಕ್ಕೆ ಸಿಲುಕಿದೆ(Viral News).
ಮಧ್ಯಪ್ರದೇಶದ ಭಿಂಡ್‌ನ 30 ವರ್ಷದ ಯುವಕ ರವಿ ಗುಪ್ತಾಗೆ ಈ ನೋಟಿಸ್ ನೀಡಲಾಗಿದೆ. 2020ರಲ್ಲಿ ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಬಗ್ಗೆ ವರದಿ ಮಾಡಿ ಗಮನ ಸೆಳೆದಿತ್ತು. ಈ ವರದಿಯ ಹಿನ್ನೆಲೆಯಲ್ಲಿ ಸ್ವತಃ ಪ್ರಧಾನಿ ಕಾರ್ಯಾಲಯವೇ ತನಿಖೆಯನ್ನು ಆರಂಭಿಸಿತ್ತು. ಗುಪ್ತಾ ಆ ಬಳಿಕ, ಇ.ಡಿ ಮತ್ತು ಸಿಬಿಐಗೂ ದೂರು ನೀಡಿದ್ದರು. ಆದರೂ ಅವರು ಈ ಕುರಿತು ತನಿಖೆಗೆ ಮುಂದಾಗಿಲ್ಲ ಎನ್ನಲಾಗುತ್ತಿದೆ.
2019ರಲ್ಲಿ ಮೊದಲ ಬಾರಿಗೆ ರವಿ ಗುಪ್ತಾ ಅವರಿಗೆ ಐಟಿ ಇಲಾಖೆಯು 3.49 ಕೋಟಿ ರೂ. ತೆರಿಗೆ ನೀಡುವಂತೆ ನೋಟಿಸ್ ನೀಡಿತ್ತು. ಆಗ ರವಿ ಗುಪ್ತಾ ಅವರು ಇಂದೋರ್‌ನಲ್ಲಿ ತಿಂಗಳಿಗೆ 7 ಸಾವಿರ ರೂ.ಗೆ ಬಿಪಿಒನಲ್ಲಿ ಕೆಲಸ ಮಾಡುತ್ತಿದ್ದರು. ಹಾಗಿದ್ದೂ, ಅವರಿಗೆ 3.49 ಕೋಟಿ ರೂ. ತೆರಿಗೆ ಪಾವತಿಸುವಂತೆ ಸೂಚಿಸಲಾಗಿತ್ತು.
ಬಳಿಕ ಈ ವಿಷಯವು ಪ್ರಧಾನಿ ಕಾರ್ಯಾಲಯದ ಗಮನಕ್ಕೂ ಬಂತು. ಅಲ್ಲದೇ, ಕುರಿತು ತನಿಖೆ ನಡೆಸುವಂತೆ ಹಣಕಾಸು ಇಲಾಖೆಗೆ ಸೂಚಿಸಲಾಗಿತ್ತು. ಬಳಿಕ ಗುಪ್ತಾ ವ್ಯವಹಾರದ ಕುರಿತು ಬ್ಯಾಂಕ್ ತನ್ನ ವರದಿಯನ್ನು ಸಲ್ಲಿಸಿತ್ತು. ಬಹುಶಃ ಇಷ್ಟಕ್ಕೆ ಐಟಿ ಇಲಾಖೆಯ ಅವಘಡ ಎಂದು ಯುವಕ ಭಾವಿಸಿದ್ದೇ ತಪ್ಪಾಯಿತು. ಯಾಕಂದರೆ, ಈಗ ಮತ್ತೆ ಗುಪ್ತಾ ಅವರಿಗೆ ಐಟಿ ನೋಟಿಸ್ ನೀಡಿದ್ದು, ನೂರು ಕೋಟಿಗೂ ಅಧಿಕ ದಂಡ ಪಾವತಿಸುವಂತೆ ಸೂಚಿಸಿದೆ. ಕಳೆದ ಐದು ವರ್ಷಗಳಿಂದ ಈ ಐಟಿ ತೆರಿಗೆ ತೊಂದರೆಯಿಂದ ತಪ್ಪಿಸಿಕೊಳ್ಳಲು ಗುಪ್ತಾ ಕೇಂದ್ರ ತನಿಖಾ ಸಂಸ್ಥೆಗಳ ಬಾಗಿಲಿಗೆ ಎಡತಾಕುತ್ತಿದ್ದಾರೆ. ಆದರೂ ಸಮಸ್ಯೆ ಬಗೆಹರಿದಿಲ್ಲ.
ಇದು ಒಂದು ಪ್ರಮುಖ ಹವಾಲಾ ಹಗರಣವಾಗಿರುವಂತಿದೆ. ಕೇಂದ್ರ ತನಿಖಾ ಸಂಸ್ಥೆಗಳು ನನ್ನ ದೂರನ್ನು ಏಕೆ ತೆಗೆದುಕೊಳ್ಳುತ್ತಿಲ್ಲ? ಈ ನೋಟಿಸ್‌ಗಳು ನನಗೆ ಮಾನಸಿಕ ಕಿರುಕುಳಕ್ಕಿಂತ ಕಡಿಮೆಯಿಲ್ಲ. ನನ್ನಂತೆ ಇನ್ನೂ ಹಲವರು ಇರಬಹುದು. ಇದು ಯಾವಾಗ ಮತ್ತು ಎಲ್ಲಿ ನಿಲ್ಲುತ್ತದೆ ಎಂದು ನನಗೆ ತಿಳಿದಿಲ್ಲ ಎಂಬ ಸಂತ್ರಸ್ತ ಗುಪ್ತಾ ಅವರು ಹೇಳಿಕೆಯನ್ನು ಉಲ್ಲೇಖಿಸಿ ಟಿಒಐ ವರದಿ ಮಾಡಿದೆ.
ಇದನ್ನೂ ಓದಿ: Black money | ಸ್ವಿಸ್ ಬ್ಯಾಂಕ್ ಖಾತೆಯಲ್ಲಿ ಅನಿಲ್ ಅಂಬಾನಿ 814 ಕೋಟಿ ರೂ, ಐಟಿ ನೋಟಿಸ್
ಇದೇ ರೀತಿಯ, ಬ್ಯಾಂಕ್ ಖಾತೆಗಳು ಮತ್ತು ಪಾನ್ ಖಾತೆಗಳು ದುರುಪಯೋಗವಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಗುಪ್ತಾ ಅವರ ಸಹೋದ್ಯೋಗಿಗಳಿಗೂ ಇದೇ ರೀತಿಯ ಬೃಹತ್ ಪ್ರಮಾಣದ ತೆರಿಗೆ ಕಟ್ಟುವಂತೆ ತೆರಿಗೆ ಇಲಾಖೆ ನೋಟಿಸ್ ನೀಡಿದೆ ಎನ್ನಲಾಗಿದೆ. ರಾಜಸ್ಥಾನ ಸೇರಿದಂತೆ ಹಲವು ಕಡೆ ಈ ರೀತಿಯ ಪ್ರಕರಣಗಳು ಕಂಡು ಬಂದಿವೆ. ಆದರೂ ಕೇಂದ್ರ ತನಿಖಾ ಸಂಸ್ಥೆಗಳು ಈ ಕುರಿತು ಕೂಲಂಕಷವಾಗಿ ತನಿಖೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿವೆ.