ರೋಮ್: 50ನೇ ಆವೃತ್ತಿಯ ಜಿ 7 ಶೃಂಗಸಭೆಯಲ್ಲಿ (G 7 Summit) ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರ ಇಟಲಿಯ ಅಪುಲಿಯಾಗೆ ತೆರಳಿದ್ದಾರೆ. ಇನ್ನು, ಜಿ 7 ಸಭೆ ನಡೆಯುವ ಸ್ಥಳಕ್ಕೆ ತೆರಳಿದ ನರೇಂದ್ರ ಮೋದಿ ಅವರಿಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರು ನಮಸ್ತೆ ಎಂದು ಕೈಮುಗಿದು ಭಾರತದ ಸಂಪ್ರದಾಯದಂತೆ ಸ್ವಾಗತಿಸಿದ್ದಾರೆ. ಮೋದಿ ಹಾಗೂ ಮೆಲೋನಿ ಅವರು ಆತ್ಮೀಯ ಸ್ನೇಹಿತರಾಗಿದ್ದು, ಇಬ್ಬರೂ ಕೆಲ ನಿಮಿಷ ಆತ್ಮೀಯವಾಗಿ ಮಾತುಕತೆ ನಡೆಸಿರುವ ವಿಡಿಯೊ ವೈರಲ್ ಆಗಿದೆ.
ಭಾರತವು ಜಿ7 ರಾಷ್ಟ್ರಗಳ ಒಕ್ಕೂಟದ ಸದಸ್ಯ ರಾಷ್ಟ್ರವಾಗಿರದಿದ್ದರೂ ಜಾರ್ಜಿಯಾ ಮೆಲೋನಿ ಅವರು ನರೇಂದ್ರ ಮೋದಿ ಅವರನ್ನು ವಿಶೇಷವಾಗಿ ಆಹ್ವಾನಿಸಿದ್ದಾರೆ. ಮೋದಿ ಅವರು ಶುಕ್ರವಾರ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೇರಿ ಹಲವು ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಇನ್ನೂ ಹಲವು ನಾಯಕರೊಂದಿಗೆ ಮೋದಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
#WATCH | Italy: Prime Minister of Italy Giorgia Meloni receives Prime Minister Narendra Modi as India participates as an 'Outreach nation' in G7 Summit pic.twitter.com/Sqna3AEu9X
— ANI (@ANI) June 14, 2024
ಮೋದಿ+ಮೆಲೋನಿ= ಮೆಲೋಡಿ ಎಂದೇ ಟ್ರೋಲ್
ನರೇಂದ್ರ ಮೋದಿ ಹಾಗೂ ಜಾರ್ಜಿಯಾ ಮೆಲೋನಿ ಅವರ ಫೋಟೊ ಹಾಗೂ ವಿಡಿಯೊಗಳು ದೇಶದಲ್ಲಿ ಜಾಸ್ತಿ ಟ್ರೋಲ್ ಆಗುತ್ತಿರುತ್ತವೆ. ಅದರಲ್ಲೂ, ಮೋದಿ ಹಾಗೂ ಮೆಲೋನಿ ಎಂಬ ಪದಗಳನ್ನು ಸೇರಿಸಿ ಮೆಲೋಡಿ ಎಂದೇ ಕರೆಯುತ್ತಾರೆ. ಈಗ ಮೋದಿ ಅವರು ಇಟಲಿಗೆ ಹೋಗಿದ್ದು, ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಮೆಲೋಡಿ ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ.
Good friends at COP28.#Melodi pic.twitter.com/g0W6R0RJJo
— Giorgia Meloni (@GiorgiaMeloni) December 1, 2023
2023ರ ಡಿಸೆಂಬರ್ 2ರಂದು ಯುಎಇ ದೇಶದ ರಾಜಧಾನಿ ದುಬೈನಲ್ಲಿ ನಡೆದ 28ನೇ ಕಾನ್ಫರೆನ್ಸ್ ಆಫ್ ದಿ ಪಾರ್ಟೀಸ್ (COP28) ಶೃಂಗಸಭೆಯಲ್ಲಿ ನರೇಂದ್ರ ಮೋದಿ ಹಾಗೂ ಜಾರ್ಜಿಯಾ ಮೆಲೋನಿ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಇದೇ ವೇಳೆ ಜಾರ್ಜಿಯಾ ಮೆಲೋನಿ ಅವರು ನರೇಂದ್ರ ಮೋದಿ ಅವರ ಜತೆ ಸೆಲ್ಫಿ ತೆಗೆಸಿಕೊಂಡಿದ್ದರು. “ಸಿಒಪಿ28 ಸಭೆಯಲ್ಲಿ ಆತ್ಮೀಯ ಸ್ನೇಹಿತರು” ಎಂದು ಒಕ್ಕಣೆ ಬರೆದಿದ್ದರು. ಅಷ್ಟೇ ಅಲ್ಲ, ಮೆಲೋನಿ+ಮೋದಿ= ಮೆಲೋಡಿ ಎಂಬ ಅರ್ಥ ಬರುವ ಕಾರಣ ಮೆಲೋಡಿ ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದರು. ಈ ಫೋಟೊ ಭಾರಿ ವೈರಲ್ ಆಗಿದ್ದು, ಸಾವಿರಾರು ಜನ ಪ್ರತಿಕ್ರಿಯಿಸಿದ್ದರು.
ಮೋದಿಯನ್ನು ಹಾಡಿ ಹೊಗಳಿದ್ದ ಮೆಲೋನಿ
ಜಾರ್ಜಿಯಾ ಮೆಲೋನಿ ಅವರು ಇದಕ್ಕೂ ಮೊದಲು ನರೇಂದ್ರ ಮೋದಿ ಅವರನ್ನು ಹೊಗಳಿದ್ದರು. ರೈಸಿನಾ ಶೃಂಗಸಭೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿದ್ದ ಜಾರ್ಜಿಯಾ ಮೆಲೋನಿ, “ನರೇಂದ್ರ ಮೋದಿ ಅವರು ವಿಶ್ವದ ನಾಯಕರಲ್ಲಿಯೇ ಹೆಚ್ಚು ಪ್ರೀತಿಗೆ ಪಾತ್ರರಾಗಿದ್ದಾರೆ. ಅವರು ಧೀಮಂತ ನಾಯಕರು ಎಂಬುದು ಸಾಬೀತಾಗಿದೆ. ಇದಕ್ಕಾಗಿ ಮೋದಿ ಅವರಿಗೆ ಅಭಿನಂದನೆಗಳು” ಎಂದಿದ್ದರು. “ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಹಾಗೂ ಇಟಲಿ ಸಂಬಂಧ ಮತ್ತಷ್ಟು ವೃದ್ಧಿಯಾಗುತ್ತಿದೆ. ಉಭಯ ದೇಶಗಳ ಸಂಬಂಧವನ್ನು ವ್ಯೂಹಾತ್ಮಕ ಸಂಬಂಧವಾಗಿ ಮಾರ್ಪಡಿಸಲು ನಾವು ಉತ್ಸುಕರಾಗಿದ್ದೇವೆ. ಇದರಿಂದ ಎರಡೂ ದೇಶಗಳ ಸಂಬಂಧ ಇನ್ನಷ್ಟು ವೃದ್ಧಿಯಾಗಲಿದೆ” ಎಂದು ತಿಳಿಸಿದ್ದರು.
ಇದನ್ನೂ ಓದಿ: Narendra Modi: ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿಯ ಅಪುಲಿಯಾಗೆ ತಲುಪಿದ ಪ್ರಧಾನಿ ಮೋದಿ