Site icon Vistara News

Gehlot VS Pilot | ಗೆಹ್ಲೋಟ್‌ ಸೋನಿಯಾ ಜತೆ, ಪೈಲಟ್‌ ರಾಹುಲ್‌ ಜತೆ, ಏನಿದರ ಮರ್ಮ?

Gehlot VS Pilot

ನವದೆಹಲಿ: ಕಾಂಗ್ರೆಸ್‌ ನಾಯಕತ್ವದಲ್ಲಿ ಉಂಟಾಗಿರುವ ಬಿಕ್ಕಟ್ಟು ಶಮನಕ್ಕಾಗಿಯೇ ನೂತನ ಅಧ್ಯಕ್ಷರ ಆಯ್ಕೆಗೆ ಅಕ್ಟೋಬರ್‌ ೧೭ರಂದು ಚುನಾವಣೆ ನಡೆಯಲಿದೆ. ಆದರೆ, ಅಧ್ಯಕ್ಷರ ಆಯ್ಕೆಗೂ ಮುನ್ನವೇ ಪಕ್ಷದಲ್ಲಿ ಬಿಕ್ಕಟ್ಟು ಎದುರಾಗಿದೆ. ಕಾಂಗ್ರೆಸ್‌ ಅಧ್ಯಕ್ಷನಾಗುತ್ತೇನೆ ಎಂದು ಗಟ್ಟಿಯಾಗಿಯೂ ಹೇಳಲಾಗದೆ, ರಾಜಸ್ಥಾನ ಮುಖ್ಯಮಂತ್ರಿ ಗಾದಿಯನ್ನೂ ತೊರೆಯಲಾಗದೆ ಒದ್ದಾಡುತ್ತಿರುವ ಅಶೋಕ್‌ ಗೆಹ್ಲೋಟ್‌ ಅವರು ಬುಧವಾರ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ. ಮತ್ತೊಂದೆಡೆ, ಪಕ್ಷದಲ್ಲಿಯೇ ಇರುವ ಇವರ ರಾಜಕೀಯ ಎದುರಾಳಿ ಸಚಿನ್‌ ಪೈಲಟ್‌ ಅವರು ಕೇರಳದಲ್ಲಿ ರಾಹುಲ್‌ ಗಾಂಧಿ ಜತೆಗಿದ್ದಾರೆ. ಹಾಗಾಗಿ, ಅಧ್ಯಕ್ಷರ ಆಯ್ಕೆಗೂ ಮುನ್ನವೇ ಗೆಹ್ಲೋಟ್‌ ಹಾಗೂ ಪೈಲಟ್‌ (Gehlot VS Pilot) ಮಧ್ಯೆ ಮುಸುಕಿನ ಗುದ್ದಾಟ ಶುರುವಾಗಿದೆ.

ಮಂಗಳವಾರ ತಡರಾತ್ರಿ ಎಲ್ಲ ಶಾಸಕರ ಜತೆ ಸಭೆ ನಡೆಸಿರುವ ಅಶೋಕ್‌ ಗೆಹ್ಲೋಟ್‌, “ನಾನು ರಾಜಸ್ಥಾನ ಬಿಟ್ಟು ದೂರ ಹೋಗುವುದಿಲ್ಲ” ಎಂಬ ಭರವಸೆ ನೀಡಿದ್ದಾರೆ. ಪಕ್ಷದ ಅಧ್ಯಕ್ಷನಾದರೂ ನಾನೇ ಮುಖ್ಯಮಂತ್ರಿ ಎಂಬ ಸಂದೇಶ ಇದರ ಹಿಂದಿದೆ. ಮತ್ತೊಂದೆಡೆ, ಇದಕ್ಕೂ ಮುನ್ನ ಬಂಡಾಯ ಎದ್ದು, ನಾಯಕರ ಭರವಸೆ ಬಳಿಕ ಸುಮ್ಮನಾಗಿರುವ ಸಚಿನ್‌ ಪೈಲಟ್‌ ಅವರಿಗೆ ಈಗ ರಾಜಸ್ಥಾನದ ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿದೆ. ಹೀಗೆ ಇಬ್ಬರೂ ಮಹತ್ವಾಕಾಂಕ್ಷಿಗಳ ಮುಸುಕಿನ ಗುದ್ದಾಟವು ಪಕ್ಷಕ್ಕೆ ಕಗ್ಗಂಟಾಗಿದೆ.

ಸೋನಿಯಾ ಜತೆ ಸಭೆ

ಸೋನಿಯಾ ಗಾಂಧಿ ಅವರಿಗೆ ಶಶಿ ತರೂರ್‌ ಅವರಿಗಿಂತ ಸಚಿನ್‌ ಪೈಲಟ್‌ ಅವರೇ ಪಕ್ಷದ ಅಧ್ಯಕ್ಷರಾಗಬೇಕು ಎಂಬ ಇಂಗಿತ ಇದ್ದಂತಿದೆ. ಸೋಮವಾರ ಪೈಲಟ್‌ ಅವರು ನಾಮಪತ್ರ ಸಲ್ಲಿಸುವ ಸಾಧ್ಯತೆಯೂ ಇದೆ. ಹಾಗಾಗಿಯೇ, ಬುಧವಾರ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲು ಗೆಹ್ಲೋಟ್‌ ತೀರ್ಮಾನಿಸಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ಗದ್ದುಗೆಯನ್ನು ಉಳಿಸಿಕೊಂಡೂ, ಪಕ್ಷದ ಅಧ್ಯಕ್ಷರಾಗಬೇಕು ಎಂಬುದು ಗೆಹ್ಲೋಟ್‌ ಬಯಕೆಯಾಗಿದೆ. ಆದರೆ, ಇದಕ್ಕೆ ಸೋನಿಯಾ ಗಾಂಧಿ ಅವರು ಒಪ್ಪುತ್ತಾರಾ ಎಂಬುದೇ ಪ್ರಶ್ನೆಯಾಗಿದೆ.

ರಾಹುಲ್‌ ಜತೆಗೂ ಸಭೆ

ಕೇರಳದಲ್ಲಿ ರಾಹುಲ್‌ ಗಾಂಧಿ ಅವರು ಭಾರತ್‌ ಜೋಡೊ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಇವರ ಜತೆಗೇ ಸಚಿನ್‌ ಪೈಲಟ್‌ ಅವರೂ ಹೆಜ್ಜೆ ಹಾಕುತ್ತಿದ್ದಾರೆ. ಆದರೆ, ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ಬಳಿಕ ಗೆಹ್ಲೋಟ್‌ ಅವರು ಕೇರಳಕ್ಕೆ ಹಾರಲಿದ್ದಾರೆ. ಇದೇ ವೇಳೆ ಪೈಲಟ್‌ ಅವರು ರಾಜಸ್ಥಾನಕ್ಕೆ ಹಿಂದಿರುಗಲಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಅಧ್ಯಕ್ಷರ ಆಯ್ಕೆಗೂ ಮುನ್ನವೇ ಸೋನಿಯಾ ಹಾಗೂ ರಾಹುಲ್‌ಗೆ ಬಿಕ್ಕಟ್ಟು ಶಮನವೇ ಕಾಯಕವಾದಂತಾಗಿದೆ. ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆಯುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ | AshoK Gehlot | ಕಾಂಗ್ರೆಸ್‌ ಚುನಾವಣೆ ಸಿದ್ಧತೆ ಮಧ್ಯೆಯೇ ಶಾಸಕರ ಸಭೆ ನಡೆಸಿ ಅಶೋಕ್‌ ಗೆಹ್ಲೋಟ್‌ ಶಕ್ತಿ ಪ್ರದರ್ಶನ

Exit mobile version