Site icon Vistara News

Jagdeep Dhankhar: 20 ವರ್ಷಗಳಿಂದ ಅವಮಾನ ಎದುರಿಸುತ್ತಿದ್ದೇನೆ; ನೋವು ತೋಡಿಕೊಂಡ ಮೋದಿ

dhankar

dhankar

ನವದೆಹಲಿ: ʼʼಸಂಸತ್‌ ಆವರಣದಲ್ಲಿ ತೃಣಮೂಲ ಸಂಸದರೊಬ್ಬರು ತಮ್ಮನ್ನು ಅನುಕರಿಸುತ್ತಿರುವ ವಿಡಿಯೊ ವೈರಲ್ ಆದ ನಂತರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನನಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆʼʼ ಎಂದು ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್‌ (Jagdeep Dhankhar) ತಿಳಿಸಿದ್ದಾರೆ. ʼʼತಾವೂ ಎರಡು ದಶಕಗಳಿಂದ ಇದೇ ರೀತಿಯ ಅವಮಾನಗಳನ್ನು ಎದುರಿಸುತ್ತಿರುವುದಾಗಿ ಮೋದಿ ತಿಳಿಸಿದ್ದಾರೆʼʼ ಎಂದು ಧನ್‌ಕರ್‌ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಧನ್‌ಕರ್‌, ʼಪ್ರಧಾನಮಂತ್ರಿ ನರೇಂದ್ರ ಮೋದಿ ನನಗೆ ಕರೆ ಮಾಡಿದ್ದರು. ಕೆಲವು ಸಂಸದರ ವರ್ತನೆ ಬಗ್ಗೆ ಅವರು ತೀವ್ರ ನೋವನ್ನು ವ್ಯಕ್ತಪಡಿಸಿದರು. ನಾನು ಇಪ್ಪತ್ತು ವರ್ಷಗಳಿಂದ ಇಂತಹ ಅವಮಾನಗಳನ್ನು ಎದುರಿಸುತ್ತಿದ್ದೇನೆ ಎಂದು ಹೇಳಿದರು. ಆದರೆ ಉಪರಾಷ್ಟ್ರಪತಿಯಂತಹ ಸಾಂವಿಧಾನಿಕ ಹುದ್ದೆಗೆ ಮತ್ತು ಅದೂ ಸಂಸತ್ತಿನಲ್ಲಿ ಇಂತಹ ಅವಮಾನ ಸಂಭವಿಸಿರುವುದು ದುರದೃಷ್ಟಕರ ಎಂದು ಅವರು ನನಗೆ ಹೇಳಿದರುʼ ಎಂದು ಧನ್‌ಕರ್‌ ವಿವರಿಸಿದ್ದಾರೆ.

ʼಕೆಲವರ ವರ್ತನೆಗಳು ನನ್ನ ಕರ್ತವ್ಯವನ್ನು ನಿರ್ವಹಿಸಲು ಮತ್ತು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ತತ್ವಗಳನ್ನು ಎತ್ತಿಹಿಡಿಯಲು ತಡೆಯಲು ಅಡ್ಡಿಯಾಗುವುದಿಲ್ಲ ಎಂದು ನಾನು ಪ್ರಧಾನಿ ಅವರಿಗೆ ಹೇಳಿದೆ. ನಾನು ಆ ಮೌಲ್ಯಗಳನ್ನು ಪ್ರತಿಪಾದಿಸಲು ಬದ್ಧನಾಗಿದ್ದೇನೆ. ಯಾವುದೇ ಅವಮಾನಗಳು ನನ್ನ ಹಾದಿಯನ್ನು ಬದಲಾಯಿಸುವುದಿಲ್ಲʼ ಎಂದು ಧನ್‌ಕರ್‌ ಬರೆದುಕೊಂಡಿದ್ದಾರೆ. ಈ ಮೂಲಕ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಸಂಸತ್ತಿನ ಮೆಟ್ಟಿಲುಗಳ ಮೇಲೆ ತಮ್ಮನ್ನು ಅನುಕರಿಸುವ ವಿಡಿಯೊಗೆ ಸೂಕ್ತ ಪ್ರತಿಕ್ರಿಯೆ ನೀಡಿದ್ದಾರೆ.

ಸೆರಾಂಪೋರ್ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ರಾಜ್ಯಸಭಾ ಅಧ್ಯಕ್ಷ ಧನ್‌ಕರ್‌ ಅವರನ್ನು ಅಣಕಿಸಿರುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೊಬೈಲ್‌ನಲ್ಲಿ ಉತ್ಸಾಹದಿಂದ ಚಿತ್ರೀಕರಿಸಿದ್ದರು. ಇತ್ತೀಚಿನ ಭದ್ರತಾ ಉಲ್ಲಂಘನೆಯ ಬಗ್ಗೆ ಗದ್ದಲದ ನಂತರ ಹಲವು ವಿಪಕ್ಷದ ಸದಸ್ಯರನ್ನು ಅಮಾನತುಗೊಳಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಸಂಸದರು ಹೊರಗೆ ಜಮಾಯಿಸಿದಾಗ ಈ ಘಟನೆ ನಡೆದಿತ್ತು.

ಕಾಂಗ್ರೆಸ್ ಸಂಸದ ಪಿ.ಚಿದಂಬರಂ ಅವರನ್ನು ಉದ್ದೇಶಿಸಿ ಧನ್‌ಕರ್‌ ಬುಧವಾರ ಸದನದಲ್ಲಿ ಮಾತನಾಡಿ, “ಮಿಸ್ಟರ್ ಚಿದಂಬರಂ, ನೀವು ತುಂಬಾ ಹಿರಿಯ ಸದಸ್ಯರು. ನಿಮ್ಮ ಪಕ್ಷದ ಹಿರಿಯ ಸಂಸದರೊಬ್ಬರು ಸ್ಪೀಕರ್‌ ಆದ ನನ್ನನ್ನು ಗೇಲಿ ಮಾಡುವ ವಿಡಿಯೊ ಮಾಡಿದರು. ನನ್ನ ಹೃದಯದಲ್ಲಿ ಏನಾಗುತ್ತಿದೆ ಎಂದು ಊಹಿಸಿ. ಇದು ವೈಯಕ್ತಿಕ ದಾಳಿ. ಇದು ಕೇವಲ ರೈತ ಸಮುದಾಯಕ್ಕೆ ಮಾಡಿದ ಅವಮಾನವಲ್ಲ; ರಾಜ್ಯಸಭಾ ಅಧ್ಯಕ್ಷ ಸ್ಥಾನಕ್ಕೆ ಮಾಡಿದ ಅವಮಾನ. ಅದೂ ಕೂಡ ಇಷ್ಟು ದಿನ ಆಡಳಿತ ನಡೆಸಿದ ರಾಜಕೀಯ ಪಕ್ಷದ ಸದಸ್ಯರಿಂದ ನಡೆದಿದೆ ಎಂಬುದು ನಂಬಲಾಗುತ್ತಿಲ್ಲ” ಎಂದು ಆಕ್ಷೇಪಿಸಿದರು.

ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಿದ ಕಾಂಗ್ರೆಸ್ ಕ್ರಮವನ್ನು ಅವರು “ನಾಚಿಕೆಗೇಡಿನ ಕೃತ್ಯ” ಎಂದು ಕರೆದಿದ್ದಾರೆ. “ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಪಕ್ಷವು ವಿಡಿಯೊವನ್ನು ಪೋಸ್ಟ್ ಮಾಡಿತ್ತು. ಇದು ನಾಚಿಕೆಗೇಡಿನ ಸಂಗತಿ. ನೀವು ಪಕ್ಷದ ಅಧಿಕೃತ ವಕ್ತಾರರನ್ನು ಬಳಸಿಕೊಂಡು ನನ್ನನ್ನು, ನನ್ನ ರೈತನ ಹಿನ್ನೆಲೆಯನ್ನು, ಜಾಟ್‌ ಹಿನ್ನೆಲೆಯನ್ನು, ರಾಜ್ಯಸಭೆ ಅಧ್ಯಕ್ಷ ಸ್ಥಾನವನ್ನು ಅವಮಾನಿಸಿದ್ದೀರಿ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Jagdeep Dhankhar: ಉಪ ರಾಷ್ಟ್ರಪತಿಗೆ ಎನ್‌ಡಿಎ ಸದಸ್ಯರ ಬೆಂಬಲ, ಒಂದು ಗಂಟೆ ನಿಂತು ವಿಶಿಷ್ಟ ಪ್ರತಿಭಟನೆ

Exit mobile version