Site icon Vistara News

Jallianwala Bagh:‌ ನೆತ್ತರಿನಲ್ಲಿ ಬರೆದ ಇತಿಹಾಸದ ಆ ದಿನ

Jallianwala Bagh

: ಮಯೂರಲಕ್ಷ್ಮೀ

ಪಂಜಾಬಿನ ಅಮೃತಸರದ ಜಲಿಯಾನ್‌ವಾಲಾ ಬಾಗ್ ಎಂಬ ಸ್ಥಳದಲ್ಲಿ ದಿನಾಂಕ 13, 1919ರಂದು ಬೈಸಾಖೀ ಹಬ್ಬದ ಸಂಭ್ರಮಾಚರಣೆಗೆ ಸಭೆ ಸೇರಿದ್ದ ಜನರಿಗೆ ಅತ್ಯಂತ ಆಘಾತಕರ ಸಮಯ ಎದುರಾಗುವುದೆಂಬ ಪರಿವೆಯೂ ಇರಲಿಲ್ಲ.

ಭಾರತಕ್ಕೆ ಆಗಮಿಸಿದ ಬ್ರಿಟಿಷರು ಆರಂಭದ ನೂರು ವರ್ಷಗಳಲ್ಲಿ ಭಾರತೀಯರನ್ನು ಗುಲಾಮರನ್ನಾಗಿಸಿಕೊಂಡು ಅವರ ಮೇಲೆ ಬೆದರಿಕೆ, ಹೊಡೆತ, ಪ್ರಹಾರಗಳಿಂದಲೂ ಮತ್ತು ಭೀಕರ ಚಿತ್ರಹಿಂಸಾತ್ಮಕ ಅತ್ಯಾಚಾರಗಳಿಂದಲೂ ಲೂಟಿಗಳಿಂದಲೂ ತಮಗೆದುರಾಡದೆ ನಡೆಯುವಂತೆ ಮಾಡಿದ್ದು ಒಂದಾದರೆ ನಂತರದ ದಿನಗಳಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಹಳೆಯ ತೀವ್ರತೆ ಹೆಚ್ಚತೊಡಗಿದಾಗ ಈ ರೀತಿಯ ಪ್ರವೃತ್ತಿ ಅಸಾಧ್ಯವೆನಿಸಿದಾಗ ಹೊಸದೊಂದು ತಂತ್ರವನ್ನೇ ರೂಪಿಸಿದರು.

ಅದುವೇ ಬ್ರಿಟಿಷ್ ಕಾನೂನು. ಇದಕ್ಕೆ ಪೂರಕವಾಗಿ ಮನಬಂದಂತೆ ಭಾರತೀಯರನ್ನು ನಿಯಂತ್ರಿಸಲು ರೌಲೆಟ್ ಆ್ಯಕ್ಟ್ 1919 ಜಾರಿಗೆ ತರಲಾಗಿತ್ತು. ಭಾರತೀಯರಿಂದ ಇದಕ್ಕೆ ತೀವ್ರತರ ವಿರೋಧ ವ್ಯಕ್ತವಾಗಿ ನಂತರ ಪ್ರತಿಭಟನೆಗಳ ರೂಪವನ್ನೂ ತಳೆಯತೊಡಗಿತು. ಪಂಜಾಬಿನಲ್ಲಿ ಎದುರಾದ ವ್ಯಾಪಕ ಪ್ರತಿಭಟನೆಯ ಫಲವಾಗಿ ಬಂಧಿತರಾಗಿದ್ದ ಸತ್ಯಾಗ್ರಹ ಚಳುವಳಿಯ ಸತ್ಯ ಪಾಲ್ ಮತ್ತು ಸೈಫುದ್ದೀನ್ ಖಿಚ್ಲೇವ್‌ರನ್ನು ಬಿಡುಗಡೆ ಮಾಡಬೇಕೆಂಬ ಆಗ್ರಹದಿಂದ ಮತ್ತು ಈ ಎಲ್ಲಾ ಘಟನೆಗಳೂ ಸ್ವಾತಂತ್ರ್ಯ ಸಂಗ್ರಾಮದ ತೀವ್ರತೆಯನ್ನು ಹೆಚ್ಚಿಸಿದ್ದು ಯಾವುದೇ ಭೇದ ಭಾವವಿಲ್ಲದೆ ಎಲ್ಲರೂ ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಆಲೋಚನೆಗಳನ್ನೂ ಮಾಡತೊಡಗಿದರು. ಇಂತಹ ಕಾನೂನನ್ನು ವಿರೋಧಿಸಲು ಅಮೃತಸರದ ಜಲಿಯನ್‌ವಾಲಾ ಬಾಗ್‌ನಲ್ಲಿ ಶಾಂತ ರೀತಿಯಲ್ಲಿ ಒಂದು ಸಭೆ ಸೇರಿತ್ತು.

ಸಂಜೆ 4.30ರ ಸಮಯದಲ್ಲಿ ಆರಂಭವಾದ ಸಭೆಯಲ್ಲಿ 20,000ದಷ್ಟು ಜನರು ಯಾವುದೇ ಗೊಂದಲವಿಲ್ಲದೆ ಮುಂದಿನ ಕಾರ್ಯಚಟುವಟಿಕೆಗಳನ್ನು ಕುರಿತು ಆಲೋಚಿಸುತ್ತಿದ್ದರು. ಇಂತಹದೊಂದು ಸಭೆ ನಡೆಯುತ್ತಿದ್ದ ಸೂಚನೆ ಪಡೆದು ಅಲ್ಲಿ ಆಗಮಿಸಿದ ಬ್ರಿಗೇಡಿಯರ್ ರೆಜಿನಾಲ್ಡ್ ಮೈಕೆಲ್-ಓ-ಡಯರ್ ಯಾವುದೇ ಮುನ್ಸೂಚನೆಯನ್ನೂ ನೀಡದೆ ತನ್ನೊಂದಿಗಿದ್ದ 65 ಗೂರ್ಖಾ ಮತ್ತು 25 ಬಲೂಚಿ ಸೈನಿಕರಿಗೆ ಅಲ್ಲಿದ್ದ ಎಲ್ಲರ ಮೇಲೂ ಒಂದೇ ಸಮನೆ ಸತತವಾಗಿ ಗುಂಡಿನ ಮಳೆ ಸುರಿಸುವಂತೆ ಆಜ್ಞೆ ನೀಡಿದ.

ಮಕ್ಕಳು, ಮಹಿಳೆಯರು ಪುರುಷರೆಂಬ ಬೇಧವಿಲ್ಲದೆ ಆ ಧಾಳಿಯಲ್ಲಿ ಸಾವಿರ ಸಂಖ್ಯೆಯಲ್ಲಿ ಸಾವು ನೋವುಗಳಾಯ್ತು. ಆ ಸ್ಥಳದಲ್ಲಿದ್ದ ಎಲ್ಲಾ ಪ್ರವೇಶ ದ್ವಾರಗಳನ್ನೂ ಯಾರೂ ಹೊರ ಹೋಗದಂತೆ ಭದ್ರಪಡಿಸಲಾಗಿತ್ತು. ತಪ್ಪಿಸಿಕೊಳ್ಳಲಾಗದೆ ಅಲ್ಲಿದ್ದ ಗೋಡೆಯ ಬದಿಯ ಬಾವಿಯೊಂದರಲ್ಲಿ ಅನೇಕರು ಧುಮುಕಿದರು. ಸುಮಾರು 120ರಷ್ಟು ಶವಗಳನ್ನು ಘಟನೆಯ ನಂತರದ ದಿನಗಳಲ್ಲಿ ಬಾವಿಯಿಂದ ಹೊರತೆಗೆಯಲಾಯ್ತು. ಕಾಲ್ತುಳಿತಕ್ಕೊಳಗಾಗಿ ಬಿದ್ದ ಜಾಗದಿಂದ ಏಳಲೂ ಆಗದೆ ಅನೇಕರು ಪ್ರಾಣ ಕಳೆದುಕೊಂಡರು.

ಘಟನೆ ನಡೆದ ಮೂರು ತಿಂಗಳ ಬಳಿಕ ಸರಕಾರವು ಈ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಿತಾದರೂ ಆ ವರದಿಯು ರಾಷ್ಟೀಯ ಕಾಂಗ್ರೆಸ್ ವರದಿಗಿಂತ ವಿಭಿನ್ನವಾಗಿತ್ತು. ಬ್ರಿಟಿಷ್ ಸರಕಾರ ಸಂಭವಿಸಿದ ಸಾವುಗಳ ಸಂಖ್ಯೆ 379 ಎಂದು ವರದಿ ನೀಡಿದ್ದರೆ ಕಾಂಗ್ರೆಸ್ ಸುಮಾರು 1000 ಜನರ ಬಲಿಯಾಯಿತೆಂದಿತು. ಬ್ರಿಟಿಷ್ ಸರಕಾರ ಘಟನೆಯನ್ನು ಕುರಿತು ವಿವರಗಳನ್ನು ನೀಡದಿದ್ದರೂ ಭಾರತದಿಂದಾಚೆ ಎಲ್ಲೆಡೆ ಇದನ್ನು ಕುರಿತು ತೀವ್ರ ವಿರೋಧ ವ್ಯಕ್ತವಾಯ್ತು.

ವಿನ್‌ಸ್ಟನ್ ಚರ್ಚಿಲ್ ಅವರೊಂದಿಗೆ ಹೌಸ್ ಆಫ್ ಕಾಮನ್ಸ್‌ನಲ್ಲಿ 247 ಸಂಸದರು ದುರಹಂಕಾರೀ ಡಯರ್‌ನ ರಾಕ್ಷಸೀ ಕೃತ್ಯವನ್ನು ವಿರೋಧಿಸಿದರು. ಅಂತಹ ನರಬಲಿಯನ್ನು ಖಂಡಿಸಿ ರವೀಂದ್ರನಾಥ್ ಟ್ಯಾಗೋರರು ತಮಗೆ ದೊರೆತಿದ್ದ ನೈಟ್‌ಹುಡ್ ಪದವಿಯನ್ನು ತಿರಸ್ಕರಿಸುವುದರೊಂದಿಗೆ ತಮ್ಮ ರಾಷ್ಟ್ರಭಕ್ತಿಯನ್ನು ಮೆರೆದರು.

ಹೆಚ್ಚಿನ ತನಿಖೆಗಾಗಿ ಹಂಟರ್ ಕಮಿಷನ್ ನಿಯಮ ಮಾಡಲಾಗಿ ಡಯರ್ ತಾನು ಮಾಡಿದ ಕೃತ್ಯ ಆಕಸ್ಮಿಕವಲ್ಲ, ಪಂಜಾಬಿನಲ್ಲಿದ್ದ ಕ್ರಾಂತಿಕಾರೀ ಭಾರತೀಯರಲ್ಲಿ ಭೀತಿಯುಂಟಾಗಿಸುವುದರ ಮೂಲಕ ಭಾರತೀಯರಿಗೆ ತಕ್ಕ ಪಾಠವನ್ನು ಕಲಿಸುವ ಉದ್ದೇಶವಿತ್ತೆಂದು ಒಪ್ಪಿಕೊಂಡ. ತನಿಖೆಯ ಫಲಶೃತಿಯಾಗಿ ನಂತರದ ದಿನಗಳಲ್ಲಿ ಎಲ್ಲರಿಂದ ಎದುರಿಸಿದ ಪ್ರತಿಭಟನೆಯಿಂದ ಡಯರ್ ಮಾನಸಿಕವಾಗಿ ಆಘಾತಗೊಂಡ.

ಇತಿಹಾಸದ ಈ ದುರಂತವನ್ನು ಸ್ವಾಭಿಮಾನೀ ಭಾರತೀಯರು ಮರೆಯಲಿಲ್ಲ. ಚಿಕ್ಕ ವಯಸ್ಸಿನಲ್ಲಿ ನಡೆದ ದುರಂತಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ನವಯುವಕ ಉಧಾಮ್ ಸಿಂಗ್ ಮನದಲ್ಲಿ ಸೇಡಿನ ಕಿಡಿ ಹೊತ್ತಿತ್ತು. ಸೇಡಿನ ಕಿಡಿ ಬೆಂಕಿಯಾಯ್ತು. ಅವನ ರೂಪದಲ್ಲಿ ಡಯರ್‌ನ ಅಂತ್ಯ ಕಾದಿತ್ತು.

ಮಾರ್ಚ್ 13, 1940ರಂದು ಲಂಡನ್ನಿನ ಕಾಕ್ಸ್ಟನ್ ಹಾಲ್‌ನಲ್ಲಿ ನಡೆಯುತ್ತಿದ್ದ ʼಈಸ್ಟ್ ಇಂಡಿಯಾ ಅಸೋಸಿಯೇಷನ್’ ಮತ್ತು ʼಸೆಂಟ್ರಲ್ ಏಷಿಯನ್ ಸೊಸೈಟಿ’ಯ ಸಮ್ಮೇಳಕ್ಕೆ ಭಾರತದಿಂದ ಹೋಗಿ ವೇಷ ಮತ್ತು ಹೆಸರು ಬದಲಿಸಿ ತಲುಪಿದ್ದ ಉಧಾಮ್ ಸಿಂಗ್ ಸಮ್ಮೇಳನ ಮುಗಿದ ನಂತರ ಅಲ್ಲಿದ್ದ ಡಯರ್‌ನನ್ನು ತನ್ನಲ್ಲಿದ್ದ ರಿವಾಲ್ವರ್‌ನಿಂದ ಎರಡು ಬಾರಿ ಗುಂಡು ಹಾರಿಸುವುದರ ಮೂಲಕ ಸ್ಥಳದಲ್ಲೇ ಕೊಂದ ನಂತರ ತಪ್ಪಿಸಿಕೊಳ್ಳಲು ಪ್ರಯತ್ನಿಸದೆ ಸ್ಥಳದಲ್ಲೇ ಬಂಧಿತನಾದ. ನಂತರ ನಡೆದ ಸರಣಿ ವಿಚಾರಣೆಗಳಲ್ಲಿ ತನ್ನ ಕೃತ್ಯವನ್ನು ಸಮರ್ಥಿಸಿದ ಉಧಾಮ್ ಸಿಂಗ್ ಕೋರ್ಟಿನಲ್ಲಿ ತನ್ನ ಹೆಸರು ‘ರಾಮ್ ಮಹಮ್ಮದ್ ಸಿಂಗ್ ಆಜಾದ್’ ಎಂದೇ ಹೇಳುವುದರ ಮೂಲಕ ತನ್ನ ದೇಶಭಕ್ತಿಯನ್ನು ಮೆರೆದ.

ಇದನ್ನೂ ಓದಿ: Chandra Shekhar Azad: ಸ್ಮರಣೆ: ಅಪ್ರತಿಮ ಬಲಿದಾನಿ ಚಂದ್ರಶೇಖರ್‌ ಆಜಾದ್

ಅಂದಿನ ಕಾಂಗ್ರೆಸ್‌ನ ನೇತಾರರಾಗಿದ್ದ ಜವಾಹರ್‌ಲಾಲ್ ನೆಹರು ಉಧಾಮ್ ಸಿಂಗ್‌ನಿಂದಾದ ಡಯರ್‌ನ ಹತ್ಯೆಯನ್ನು ವಿರೋಧಿಸಿದರು. 31 ಜುಲೈ 1940ರಂದು ಪೆಂಟಾನ್‌ವಿಲ್ಲೆ ಕಾರಾಗೃಹದಲ್ಲಿ ಶಹೀದ್ ಉಧಾಮ್ ಸಿಂಗ್‌ನನ್ನು ಗಲ್ಲಿಗೇರಿಸಲಾಯ್ತು. ಬ್ರಿಟಿಷರ ದಾಸ್ಯದಿಂದ ಮುಕ್ತವಾಗುವ ಕನಸು ಕಂಡಿದ್ದ ಭಾರತೀಯರು ಉಧಾಮನ ಬಲಿದಾನವನ್ನು ನೆನೆದು ಅವನ ಸಾವಿಗೆ ಕಣ್ಣೀರುಗರೆದರು.

ಅಮೃತಸರದ ಜಲಿಯಾನ್‌ವಾಲಾ ಬಾಗ್‌ನಲ್ಲಿ ಅಪಾರ ಸಂಖ್ಯೆಯಲ್ಲಿ ಸಾವು ನೋವಿಗೀಡಾದ ಅಮಾಯಕರ ಕುರುಹಾಗಿ ಸ್ಮಾರಕವನ್ನು ನಿರ್ಮಿಸಲಾಯಿತು. ಅಲ್ಲಿನ ಕಟ್ಟಡಗಳಲ್ಲಿ ಗೋಡೆ ಗೋಡೆಗಳಲ್ಲಿ ನಡೆದ ಗುಂಡಿನ ದಾಳಿಯ ಗುರುತುಗಳಿನ್ನೂ ಹಾಗೆಯೇ ಇದೆ. ಅಲ್ಲಿನ ಬಾವಿಯ ಒಳಗಿಂದ ಹೊರಬರಲಾಗದೆ ತಲ್ಲಣಿಸಿದ್ದ ಜೀವಗಳ ಸಂತಾಪದ ಕುರುಹುಗಳನ್ನೂ ಹಾಗೆಯೇ ಇವೆ. ಉಧಾಮ್ ಸಿಂಗ್‌ನ ರಾಷ್ಟ್ರಭಕ್ತಿ, ಅಪ್ರತಿಮ ಧೈರ್ಯ ಸಾಹಸಗಳನ್ನು ಇತಿಹಾಸ ಮರೆತಿಲ್ಲ.

ಇತಿಹಾಸದಲ್ಲಿ ನಡೆದ ತಪ್ಪುಗಳಿಂದ ಕಲಿಯಲೇಬೇಕು. ಅಧಿಕಾರದ ದುರುಪಯೋಗ ಪಡೆದು ದುರಹಂಕಾರದಿಂದ ವರ್ತಿಸಿದ ಡಯರ್‌ನನ್ನು ಇತಿಹಾಸವೆಂದೂ ಕ್ಷಮಿಸುವುದಿಲ್ಲ. ಅಮೇರಿಕಾದ ಇತಿಹಾಸಕಾರ ಮತ್ತು ಬರಹಗಾರನಾಗಿದ್ದ ವಿಲ್ ಡ್ಯುರಾಂಟ್‌ನ ಮಾತುಗಳು: “ಅಧಿಕಾರವು ಭ್ರಷ್ಟರನ್ನಾಗಿಸುವದಕ್ಕಿಂತಲೂ ಹೆಚ್ಚಾಗಿ ವಿವೇಚನೆಯನ್ನು ಕಳೆದುಕೊಂಡು ನೀಚ ಕೃತ್ಯಗಳಲ್ಲಿ ತೊಡಗಿಸಿ ಒತ್ತಡ ತರುವುದರೊಂದಿಗೆ ಉನ್ಮತ್ತಗೊಳಿಸುತ್ತದೆ”.

ಇದನ್ನೂ ಓದಿ: Balidan Diwas: ಸ್ಮರಣೆ: ಇಂದು ಬಲಿದಾನ ದಿನ, ಇತಿಹಾಸದ ಕೆಂಪು ಅಧ್ಯಾಯ

Exit mobile version