Site icon Vistara News

Jallikattu Festival: ತಮಿಳುನಾಡಿನಲ್ಲಿ ಐಪಿಎಲ್‌ ಮಾದರಿಯಲ್ಲಿ ಜಲ್ಲಿಕಟ್ಟು ಸ್ಪರ್ಧೆ!

Jallikattu competition like IPL in Tamil Nadu!

ಚೆನ್ನೈ: ತಮಿಳುನಾಡಿನ (Tamil Nadu) ಸಾಂಪ್ರದಾಯಿಕ ಗೂಳಿ ಪಳಗಿಸುವ ಜಲ್ಲಿಕಟ್ಟು ಉತ್ಸವವನ್ನು (Jallikattu Festival) ಮತ್ತಷ್ಟು ಜನಪ್ರಿಯಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಜನಪ್ರಿಯ ಇಂಡಿಯನ್ ಪ್ರಿಮಿಯರ್ ಲೀಗ್(IPL) ರೀತಿಯಲ್ಲೇ ಜಲ್ಲಿಕಟ್ಟು ಪಂದ್ಯಗಳನ್ನು ಆಯೋಜಿಸಲಿದೆ. ಮದುರೈನ ಅಲಂಗನಲ್ಲೂರಿನಲ್ಲಿ ಹೊಸದಾಗಿ ನಿರ್ಮಿಸಲಾದ ಸ್ಟೇಡಿಯಮ್‌ನಲ್ಲಿ ಈ ಹೊಸ ಮಾದರಿಯ ಜಲ್ಲಿಕಟ್ಟು ಸ್ಪರ್ಧೆಗಳು ನಡೆಯಲಿವೆ.

ಈ ಕ್ರೀಡಾಂಗಣವನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಬುದವಾರ ಉದ್ಘಾಟಿಸಲಿದ್ದಾರೆ. ಐಪಿಎಲ್ ತರಹದ ಲೀಗ್ ಪಂದ್ಯಗಳನ್ನು ಆಡಿಸುವ ಉಪಕ್ರಮವು ಸಾಂಪ್ರದಾಯಿಕ ಹಬ್ಬಕ್ಕೆ “ಉತ್ತೇಜನ” ನೀಡುವ ಗುರಿಯನ್ನು ಹೊಂದಿದೆ ಮತ್ತು ಭಾರತದ ಪ್ರವಾಸೋದ್ಯಮ ನಕ್ಷೆಯಲ್ಲಿ ಪ್ರಮುಖ ಸ್ಥಾನವನ್ನು ಕಲ್ಪಿಸಿಕೊಡಲಿದೆ.

ಹೊಸ ಜಲ್ಲಿಕಟ್ಟು ಕ್ರೀಡಾಂಗಣವು 66.8 ಎಕರೆಗಳಲ್ಲಿ ಹರಡಿದ್ದು, 5,000 ಆಸನ ಸಾಮರ್ಥ್ಯ ಮತ್ತು ಜಲ್ಲಿಕಟ್ಟು ಗೂಳಿಗಳನ್ನು ಮತ್ತು ಕ್ರೀಡೆಯ ಮಹತ್ವವನ್ನು ಪ್ರದರ್ಶಿಸುವ ಮೀಸಲಾದ ವಸ್ತುಸಂಗ್ರಹಾಲಯವನ್ನು ಹೊಂದಿದೆ. ಗೂಳಿ ಪಳಗಿಸುವವರಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸಲು ಆಸ್ಪತ್ರೆ, ಪಶವೈದ್ಯ ಕೇಂದ್ರ ಸೇರಿದಂತೆ ತುರ್ತು ನೆರವಿಗೆ ಧಾವಿಸುವ ಸಾಧನಗಳನ್ನು ಈ ಹೊಸ ಸ್ಟೇಡಿಯಮ್ ಹೊಂದಿದೆ.

ಶೌರ್ಯ ಪ್ರದರ್ಶನದ ಪುರಾತನ ಕ್ರೀಡೆಯು ಕುಖ್ಯಾತ ಇತಿಹಾಸವನ್ನೂ ಹೊಂದಿದೆ. ಗೂಳಿಗಳ ಬಾಲದಿಂದ ಎಳೆದು ಮತ್ತು ಅವುಗಳ ಕಣ್ಣಿಗೆ ಸುಣ್ಣದ ರಸವನ್ನು ಹಿಂಡುವ ಜೊತೆಗೆ ಪ್ರೇಕ್ಷಕರು ಸೇರಿದಂತೆ ನೂರಾರು ಜನರನ್ನು ಗಾಯಗೊಳಿಸುವುದು, ಅಂಗವಿಕಲಗೊಳಿಸುವುದು ಮತ್ತು ಕೊಲ್ಲುವುದು ಸೇರಿ ನಾನಾ ರೀತಿಯ ಕ್ರೌರ್ಯ ಎಸಗುವುದನ್ನು ಕಾಣಬಹುದು.

ಈಗ ಅಸ್ತಿತ್ವದಲ್ಲಿರುವ ಜಲ್ಲಿಕಟ್ಟು ಕೇಂದ್ರಗಳಲ್ಲೂ ಸ್ಪರ್ಧೆಗಳು ಮುಂದುವರಿಯಲಿವೆ. ಹೊಸ ಮಾದರಿಯ ಲೀಗ್ ಸ್ಪರ್ಧೆಗಳನ್ನು ಮದುರೈ ಆಡಳಿತವು ನಡೆಸಲಿದೆ. ಉದಯನಿಧಿ ನೇತೃತ್ವದ ಕ್ರೀಡಾ ಇಲಾಖೆಯು ಈ ಕ್ರೀಡೆಯನ್ನು ಉಸ್ತುವಾರಿ ವಹಿಸಿಕೊಳ್ಳುತ್ತಿದೆ.

ಚಿನ್ನದ ನಾಣ್ಯಗಳು, ಮೋಟಾರ್ ಬೈಕುಗಳು, ಕಾರು ಸೇರಿದಂತೆ ಆಕರ್ಷಕ ಬಹುಮಾನಗಳನ್ನು ಒದಗಿಸುವ ಕಾರ್ಪೊರೇಟ್ ನಿಧಿಯೊಂದಿಗೆ ವಾಣಿಜ್ಯೀಕರಣಗೊಳಿಸಲಾಗಿದೆ. ಈ ಹೊಸ ಯೋಜನೆಯ ಮೂಲಕ ಪ್ರಾಚೀನಾ ಕಾಲದ ಈ ಕ್ರೀಡೆಯು ಹೊಸದಾಗಿ ಮನ್ನಣೆಯನ್ನು ಪಡೆದುಕೊಳ್ಳಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಜಲ್ಲಿಕಟ್ಟು ಗೂಳಿಗೆ ಆಹಾರವಾಗಿ ಹುಂಜವನ್ನು ಬಲವಂತವಾಗಿ ತಿನ್ನಿಸುತ್ತಿರುವ ವಿಡಿಯೋವೊಂದು ಕಳೆದವಾರ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಯುಟ್ಯೂಬರ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ವಿಡಿಯೋದಲ್ಲಿ ಜಲ್ಲಿಕಟ್ಟು ಗೂಳಿಯು ಅನಿವಾರ್ಯವಾಗಿ ಹುಂಜವನ್ನು ತಿನ್ನುತ್ತಿರುವ ದೃಶ್ಯಗಳಿದ್ದವು.

ಮೂವರು ಗೂಳಿಯನ್ನು ಹಿಡಿದಿದ್ದು, ಮತ್ತೊಬ್ಬ ವ್ಯಕ್ತಿ ಮೊದಲು ಹಸಿ ಮಾಂಸವನ್ನು ತಿನ್ನಿಸಿ ನಂತರ ಕೋಳಿಯನ್ನು ಗೂಳಿಯ ಬಾಯಿಗೆ ನೂಕುತ್ತಿರುವ ವಿಡಿಯೋವನ್ನು ಯೂಟ್ಯೂಬರ್ ರಘು ಎಂಬಾತ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ. 2.48 ನಿಮಿಷದ ಈ ವಿಡಿಯೋ ವೈರಲ್ ಆಗಿತ್ತು. ಅಲ್ಲದೇ, ಭಾರೀ ಆಕ್ರೋಶ ಕೂಡ ವ್ಯಕ್ತವಾಗಿತ್ತು.

ಈ ಸುದ್ದಿಯನ್ನೂ ಓದಿ: Jallikattu: ರಾಜ್ಯ ಗಡಿಯಲ್ಲಿ ಜಲ್ಲಿಕಟ್ಟು ವೇಳೆ ಹೋರಿ ತಿವಿದು ಒಬ್ಬನ ಸಾವು

Exit mobile version