Site icon Vistara News

Narendra Modi: ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ, ಚುನಾವಣೆ; ಮೋದಿ ಮಹತ್ವದ ಘೋಷಣೆ!

Narendra Modi

Jammu Kashmir assembly polls soon, statehood to be restored; Says PM Narendra Modi In Udhampur

ಶ್ರೀನಗರ: ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರಕ್ಕೆ (Jammu Kashmir) ರಾಜ್ಯ ಸ್ಥಾನಮಾನ (Statehood) ನೀಡಬೇಕು, ವಿಧಾನಸಭೆ ಚುನಾವಣೆ ನಡೆಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಪ್ರತಿಪಕ್ಷಗಳು ಕೂಡ ಇದನ್ನೇ ಆಗ್ರಹಿಸುತ್ತಿವೆ. ಅಲ್ಲಿನ ಜನರೂ ಇದನ್ನೇ ಬಯಸುತ್ತಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಹತ್ವದ ಘೋಷಣೆ ಮಾಡಿದ್ದಾರೆ. “ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಹಾಗೂ ರಾಜ್ಯ ಸ್ಥಾನಮಾನ ನೀಡುವ ದಿನಗಳು ದೂರವಿಲ್ಲ” ಎಂಬುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಉಧಮ್‌ಪುರದಲ್ಲಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಅವರ ಪರವಾಗಿ ಮೋದಿ ಪ್ರಚಾರ ಕೈಗೊಂಡರು. ಇದೇ ವೇಳೆ ಬೃಹತ್‌ ರ‍್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು. “ಕಣಿವೆಯಲ್ಲಿ ಶೀಘ್ರದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿದೆ. ರಾಜ್ಯ ಸ್ಥಾನಮಾನವನ್ನೂ ಮತ್ತೆ ನೀಡಲಾಗುತ್ತದೆ. ದಯಮಾಡಿ ನನ್ನನ್ನು ನಂಬಿ, ಕಣಿವೆಯಲ್ಲಿರುವ 60 ವರ್ಷಗಳ ಸಮಸ್ಯೆಗಳಿಗೆ ಇತಿಶ್ರೀ ಹಾಡುತ್ತೇನೆ” ಎಂದರು.

“ಜಮ್ಮು-ಕಾಶ್ಮೀರದಲ್ಲಿ ದಶಕಗಳ ಬಳಿಕ ಉಗ್ರರ ದಾಳಿ, ಕಲ್ಲು ತೂರಾಟದ ಭೀತಿಯೇ ಇಲ್ಲದೆ ಲೋಕಸಭೆ ಚುನಾವಣೆ ನಡೆಯುತ್ತಿದೆ. ದಶಕಗಳ ಸಮಸ್ಯೆಗಳನ್ನು ಕೊನೆಗಾಣಿಸುತ್ತಿದ್ದೇವೆ. ಸುದೀರ್ಘ ಸಮಸ್ಯೆಗಳಿಂದ ಕಣಿವೆಯನ್ನು ಮುಕ್ತಗೊಳಿಸುವುದೇ ನಮ್ಮ ಉದ್ದೇಶವಾಗಿದೆ. ಪ್ರತಿಪಕ್ಷಗಳು 370ನೇ ವಿಧಿಯನ್ನು ಮತ್ತೆ ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳುತ್ತಿವೆ. ಆದರೆ, ನಾನು ಸವಾಲು ಹಾಕುತ್ತೇನೆ. ಅದರಲ್ಲೂ, ಕಾಂಗ್ರೆಸ್‌ಗೆ ಚಾಲೆಂಜ್‌ ಮಾಡುತ್ತಿದ್ದೇನೆ. ಕಣಿವೆಯಲ್ಲಿ 370ನೇ ವಿಧಿ ಮತ್ತೆ ಜಾರಿಗೆ ತರಲಿ ನೋಡೋಣ” ಎಂದು ಸವಾಲೆಸೆದರು.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ 2019ರಲ್ಲಿ ರದ್ದುಗೊಳಿಸಿ, ಕೇಂದ್ರಾಡಳಿತ ಪ್ರದೇಶ ಎಂಬುದಾಗಿ ಘೋಷಿಸಿದೆ. ಜಮ್ಮು-ಕಾಶ್ಮೀರದಿಂದ ಲೇಹ್‌ಅನ್ನೂ ವಿಂಗಡಿಸಿ, ಅದನ್ನು ಕೂಡ ಕೇಂದ್ರಾಡಳಿತ ಪ್ರದೇಶ ಎಂಬುದಾಗಿ ಘೋಷಿಸಿದೆ. ಇದಾದ ಬಳಿಕ ವಿಧಾನಸಭೆ ಚುನಾವಣೆ ನಡೆಯಬೇಕು, ರಾಜ್ಯ ಸ್ಥಾನಮಾನ ನೀಡಬೇಕು ಎಂಬುದು ಎರಡೂ ಕೇಂದ್ರಾಡಳಿತ ಪ್ರದೇಶಗಳ ಒಕ್ಕೊರಲಿನ ಒತ್ತಾಯವಾಗಿದೆ. ಈಗ ಚುನಾವಣೆ ಹಾಗೂ ರಾಜ್ಯ ಸ್ಥಾನಮಾನ ಕುರಿತು ಮೋದಿ ಮಹತ್ವದ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಮೋದಿ ಏಟಿಗೆ ತಬ್ಬಿಬ್ಬು; ಪ್ರವಾಸಿಗರ ಸೆಳೆಯಲು ಭಾರತದಲ್ಲಿ ರೋಡ್‌ಶೋಗೆ ಮಾಲ್ಡೀವ್ಸ್‌ ನಿರ್ಧಾರ!

Exit mobile version