ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ (Article 370) ವಿಧಿ ರದ್ದುಗೊಳಿಸಿದ ಬಳಿಕ ಕಣಿವೆಯಲ್ಲಿ ಪರಿಸ್ಥಿತಿ ಬದಲಾಗುತ್ತಿದೆ. ಪ್ರತ್ಯೇಕವಾದದ ಹುಸಿಬೊಬ್ಬೆ ಬದಲಾಗಿ, ಪ್ರತ್ಯೇಕವಾದಿಗಳು ಮೂಲೆಗುಂಪಾಗಿ, ಕಾಶ್ಮೀರದ ಗತವೈಭವ ಮರಳುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಕಳೆದ 75 ವರ್ಷಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಭಾನುವಾರ (ನವೆಂಬರ್ 12) ಜಮ್ಮು-ಕಾಶ್ಮೀರದಲ್ಲಿರುವ ಶಾರದಾ ದೇವಿ ದೇವಾಲಯದಲ್ಲಿ (Sharda Devi Temple) ದೀಪಾವಳಿ ಹಬ್ಬವನ್ನು (Deepavali 2023) ಸಡಗರದಿಂದ ಆಚರಿಸಲಾಗಿದೆ.
ಹೌದು, ಉಗ್ರರ ಉಪಟಳ ಹಾಗೂ ಮೂಲಭೂತವಾದಿಗಳ ಉದ್ಧಟತನದಿಂದಾಗಿ 1948ರಿಂದ ಶಾರದಾ ದೇವಿ ದೇವಾಲಯದಲ್ಲಿ ದೀಪಾವಳಿ ಹಬ್ಬದ ಸಂಭ್ರಮವೇ ಕಮರಿ ಹೋಗಿತ್ತು. ಆದರೆ, ಭಾನುವಾರ ಶಾರದಾ ದೇವಿ ಮಂದಿರದಲ್ಲಿ ದೀಪ ಬೆಳಗಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ದೀಪಾವಳಿ ಆಚರಣೆ ಮಾಡಲಾಗಿದೆ. “1948ರ ಬಳಿಕ ಇದೇ ಮೊದಲ ಬಾರಿಗೆ ಶಾರದಾ ದೇವಿ ಮಂದಿರದಲ್ಲಿ ದೀಪಾವಳಿ ಆಚರಣೆ ಮಾಡಲಾಗಿದೆ” ಎಂದು ಸೇವ್ ಶಾರದಾ ಕಮಿಟಿ (Save Sharda Committee) ಮುಖ್ಯಸ್ಥ ರವೀಂದರ್ ಪಂಡಿತ್ ಮಾಹಿತಿ ನೀಡಿದ್ದಾರೆ. ಭಾರತ-ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಬಳಿ ಶಾರದಾ ದೇವಿ ದೇವಾಲಯ ಇದೆ.
BREAKING 🚨
— Bhārat Untold (@Bharatuntoldtw) November 12, 2023
Teetwal hamlet in Jammu and Kashmir's Kupwara district illuminated with earthen lamps on Sunday as Diwali was marked at the Mata Sharda Devi temple for the first time in 75 years.
Prayers were conducted at the reconstructed temple located in the Line of Control… pic.twitter.com/hgBDtDO0Z5
ಕಾಶ್ಮೀರದಾದ್ಯಂತ ದೀಪಾವಳಿ
ಜಮ್ಮು-ಕಾಶ್ಮೀರದಾದ್ಯಂತ ಭಾನುವಾರ ಸಡಗರ-ಸಂಭ್ರಮದಿಂದ ದೀಪಾವಳಿಯನ್ನು ಆಚರಿಸಲಾಗಿದೆ. ಶ್ರೀನಗರದ ಲಾಲ್‌ಚೌಕ್ ಸೇರಿ ಜಮ್ಮು-ಕಾಶ್ಮೀರದ ಎಲ್ಲೆಡೆ ಹಿಂದುಗಳು ದೀಪಾವಳಿ ಆಚರಿಸಿದ್ದಾರೆ. ಮನೆಗಳಲ್ಲಿ ದೀಪ ಬೆಳಗಿ, ರಸ್ತೆಗಳಲ್ಲಿ ಪಟಾಕಿ ಸಿಡಿಸಿ ದೀಪಾವಳಿಯನ್ನು ಆಚರಿಸಿದ್ದಾರೆ. ಇನ್ನು ಗಡಿಗಳಲ್ಲಿ ಯೋಧರು ಕೂಡ ದೀಪಾವಳಿಯನ್ನು ಆಚರಿಸಿದ್ದಾರೆ. ಒಟ್ಟಿನಲ್ಲಿ ಕಲ್ಲು ತೂರಾಡುತ್ತಿದ್ದ, ಪ್ರತ್ಯೇಕವಾದದ ಘೋಷಣೆ ಮೊಳಗುತ್ತಿದ್ದ, ಭಾರತ ವಿರೋಧಿ ಘೋಷಣೆಗಳು ಕೇಳಿಸುತ್ತಿದ್ದ ಜಮ್ಮು-ಕಾಶ್ಮೀರದಲ್ಲಿ ದೀಪಾವಳಿ ಆಚರಿಸುವಂತಹ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ: PM Narendra Modi: ಅಯೋಧ್ಯೆಯ ದೀಪೋತ್ಸವ ಅದ್ಭುತ, ದೈವಿಕ! ಪ್ರಧಾನಿ ಮೋದಿ ಬಣ್ಣನೆ
ಮತ್ತೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷದಂತೆ ಈ ಬಾರಿಯೂ ಗಡಿಯಲ್ಲಿ ಯೋಧರ ಜತೆ ದೀಪಾವಳಿ ಆಚರಿಸಿದ್ದಾರೆ. ಹಿಮಾಚಲ ಪ್ರದೇಶದ ಲೆಪ್ಚಾ ಗಡಿಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಮೋದಿ, ಸೈನಿಕರಿಗೆ ಸಿಹಿ ತಿನ್ನಿಸಿದರು. ಇದೇ ವೇಳೆ ಮಾತನಾಡಿದ ಮೋದಿ, “ನೀವು (ಯೋಧರು) ಎಲ್ಲಿ ಇರುತ್ತೀರೋ, ಅಲ್ಲಿಯೇ ನನ್ನ ಹಬ್ಬ” ಎಂದು ಹೇಳಿದರು. ಹಾಗೆಯೆ, ಸಾಲು ಸಾಲು ಪೋಸ್ಟ್ ಮಾಡಿದ ಮೋದಿ, ದೇಶದ ರಕ್ಷಣೆಗೆ ಯೋಧರ ಕೊಡುಗೆಯನ್ನು ಸ್ಮರಿಸಿದರು.