Site icon Vistara News

NEET Result 2023: ಕಲ್ಲು ಹೊಡೆಯುತ್ತಿದ್ದ ಕಾಶ್ಮೀರದಲ್ಲಿ ಅಂಕಕ್ಕೆ ಗುರಿ ಇಟ್ಟ 3 ಮುಸ್ಲಿಂ ಸಹೋದರಿಯರು; ನೀಟ್‌ ಪಾಸ್

Muslim Sisters Cleared NEET In Jammu Kashmir

Jammu Kashmir Muslim Sisters Successfully Cleared NEET UG In 1st Attempt, Here is their story

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಅದೊಂದು ಕಾಲವಿತ್ತು. ಸಯ್ಯದ್‌ ಅಲಿ ಶಾ ಗೀಲಾನಿಯಂತಹ ಪ್ರತ್ಯೇಕವಾದಿ ಕ್ರಿಮಿಗಳು ಭಾರತದ ವಿರುದ್ಧವೇ ಘೋಷಣೆ ಕೂಗುತ್ತಿದ್ದರು. ಗೋ ಇಂಡಿಯಾ ಗೋ ಬ್ಯಾಕ್‌ ಎನ್ನುತ್ತಿದ್ದರು. ಸೇನೆಯ ಮೇಲೆಯೇ ಕಲ್ಲು ತೂರಾಟ ನಡೆಸುತ್ತಿದ್ದರು. ಆದರೆ, ಜಮ್ಮು-ಕಾಶ್ಮೀರದಲ್ಲಿ ಈಗ ಪರಿಸ್ಥಿತಿ ಬದಲಾಗಿದೆ. ಉಗ್ರರ ಉಪಟಳದ ಮಧ್ಯೆಯೂ ಪ್ರತ್ಯೇಕವಾದಿಗಳನ್ನು ಹೆಡೆಮುರಿ ಕಟ್ಟಲಾಗಿದೆ. ಶಾಂತಿಸ್ಥಾಪನೆಯತ್ತ ಕಣಿವೆ ಮುಖ ಮಾಡುತ್ತಿದೆ. ಇದರ ಜತೆಗೆ ಜನರ ಮನಸ್ಥಿತಿಯೂ ಬದಲಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಮೂವರು ಮುಸ್ಲಿಂ ಸಹೋದರಿಯರು ಮೊದಲ ಪ್ರಯತ್ನದಲ್ಲಿಯೇ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET Result 2023) ತೇರ್ಗಡೆ ಹೊಂದಿದ್ದಾರೆ.

ಹೌದು, ಶ್ರೀನಗರದ ನೌಶೇರಾ ನಿವಾಸಿಗಳಾದ ತುಬಾ ಬಶೀರ್‌, ರುತ್ಬಾ ಬಶೀರ್‌ ಹಾಗೂ ಉರ್ಬಿಶ್‌ ಸಹೋದರಿಯರು ಮೊದಲ ಪ್ರಯತ್ನದಲ್ಲಿಯೇ ನೀಟ್‌ ಪಾಸಾಗಿದ್ದಾರೆ. ಇವರೀಗ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹರಾಗಿದ್ದು, ಮೂವರೂ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಿದ್ದಾರೆ. ಇವರು ಕಸಿನ್‌ ಸಿಸ್ಟರ್‌ಗಳಾಗಿದ್ದು, ಮಧ್ಯಮ ವರ್ಗದ ಕೌಟುಂಬಿಕ ಹಿನ್ನೆಲೆ ಹೊಂದಿದ್ದಾರೆ.

ಇವರೇ ನೋಡಿ ನೀಟ್‌ ಸಾಧಕರು

ಶ್ರೀನಗರದ ಇಸ್ಲಾಮಿಯಾ ಹೈಯರ್‌ ಸೆಕೆಂಡರಿ ಸ್ಕೂಲ್‌ನಲ್ಲಿ ಓದಿರುವ ಇವರು, ಗಲಭೆ, ಗಲಾಟೆ, ಉಗ್ರರ ದಾಳಿಯ ಮಧ್ಯೆಯೂ ಶಿಕ್ಷಣ ಮುಂದುವರಿಸಿದ್ದಾರೆ. ಇವರಿಗೆ ಪೋಷಕರ ಸಹಕಾರವೂ ಸಿಕ್ಕ ಕಾರಣ, ಕೋಚಿಂಗ್‌ ನೆರವಿನೊಂದಿಗೆ ನೀಟ್‌ ಪಾಸಾಗಿ ಮಹತ್ವದ ಮುನ್ನಡೆ ಸಾಧಿಸಿದ್ದಾರೆ.

“ನನಗೆ ತುಂಬ ಸಂತೋಷವಾಗುತ್ತಿದೆ. ನಮ್ಮ ಕುಟುಂಬದಲ್ಲಿ ಯಾರೂ ವೈದ್ಯರಿಲ್ಲ. ನಾನೇ ವೈದ್ಯೆಯಾಗುವ ನಿರ್ಧಾರ ತೆಗೆದುಕೊಂಡೆ. ನನ್ನ ಕುಟುಂಬಸ್ಥರು ಕೂಡ ಮೊದಲಿನಿಂದಲೂ ಉತ್ತಮ ಸಹಕಾರ ನೀಡಿದರು. ನಾವು ಸಹೋದರಿಯರು ಸತತವಾಗಿ ಅಧ್ಯಯನದ ಮೂಲಕ ಉತ್ತೀರ್ಣರಾಗಿದ್ದೇವೆ. ನಾವು ವೈದ್ಯರಾಗಬೇಕು ಎಂಬ ಛಲದಿಂದ ಓದಿದೆವು. ಕೋಚಿಂಗ್‌ ಕೂಡ ಪಡೆದು, ಈಗ ಮೊದಲ ಯತ್ನದಲ್ಲಿಯೇ ಉತ್ತೀರ್ಣರಾಗಿದ್ದೇವೆ” ಎಂದು ಎಎನ್‌ಐ ಸುದ್ದಿಸಂಸ್ಥೆ ಜತೆ ಮಾತನಾಡುವಾಗ ಉರ್ಬಿಶ್‌ ಹೇಳಿದ್ದಾರೆ.

ಇದನ್ನೂ ಓದಿ: NEET Result 2023: 4 ವರ್ಷದಿಂದ ಗಂಗಾರತಿ ಮಾಡುತ್ತಿದ್ದವನಿಗೆ ಒಲಿದ ಜ್ಞಾನಗಂಗೆ; ನೀಟ್‌ನಲ್ಲಿ ಸಿಕ್ಕಿತು ರ‍್ಯಾಂಕ್

“ನಾವು 11ನೇ ತರಗತಿಯಿಂದಲೇ ನೀಟ್‌ಗೆ ತಯಾರಿ ಆರಂಭಿಸಿದೆವು. ಮೂವರೂ ಸಹೊದರಿಯರು ಕುಳಿತು, ಚರ್ಚಿಸಿ, ಗೊಂದಲಗಳಿದ್ದರೆ ಬಗೆಹರಿಸಿಕೊಂಡು ಓದಿದೆವು. ನಮ್ಮ ಪೋಷಕರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದರು. ಹಾಗಾಗಿ, ಮೂವರೂ ತೇರ್ಗಡೆ ಹೊಂದಿದ್ದೇವೆ. ಮೂವರಿಗೂ ವೈದ್ಯರಾಗುವ ಕನಸಿದೆ” ಎನ್ನುತ್ತಾರೆ ರುತ್ಬಾ. ಒಟ್ಟಿನಲ್ಲಿ, ನಕಾರಾತ್ಮಕ ಅಂಶಗಳಿಗೆ ಸುದ್ದಿಯಾಗುತ್ತಿದ್ದ ಕಾಶ್ಮೀರದಲ್ಲಿ ಭರವಸೆಯ ಹೂವುಗಳು ಅರಳುತ್ತಿರುವುದು ಸಂತಸದ ವಿಚಾರವಾಗಿದೆ.

ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version