ಟೋಕಿಯೊ: ಹೊಸ ವರ್ಷದ ದಿನವೇ ದುರಂತ ಸಂಭವಿಸಿದ್ದು ಜಪಾನ್‌ನಲ್ಲಿ ಪ್ರಬಲ ಭೂಕಂಪ(Japan Earthquake)ವಾಗಿದೆ. ಈ ಮಧ್ಯೆ ಕಳೆದ ವಾರ ಜಪಾನ್‌ಗೆ ತೆರಳಿದ್ದ ಟಾಲಿವುಡ್ ಸೂಪರ್ ಸ್ಟಾರ್ ಜೂ. ಎನ್‌ಟಿಆರ್ (Junior NTR) ಇದೀಗ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದು, ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಗಾಗಿ ಜೂ.ಎನ್‌ಟಿಆರ್ ಕುಟುಂಬ ಸದಸ್ಯರ ಜತೆಗೆ ಕಳೆದ ವಾರ ಜಪಾನ್‌ಗೆ ತೆರಳಿದ್ದರು. ಪತ್ನಿ ಲಕ್ಷ್ಮೀ ಪ್ರಣತಿ ಮತ್ತು ಮಕ್ಕಳಾದ ಅಭಯ್ ಮತ್ತು ಭಾರ್ಗವ್‌ನೊಂದಿಗೆ ಜಪಾನ್‌ನಲ್ಲಿ ರಜಾ ದಿನಗಳನ್ನು ಕಳೆದಿದ್ದರು. ಇದೀಗ ಮರಳಿ ಬಂದಿರುವ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
Back home today from Japan and deeply shocked by the earthquakes hitting. Spent the entire last week there, and my heart goes out to everyone affected.
— Jr NTR (@tarak9999) January 1, 2024
Grateful for the resilience of the people and hoping for a swift recovery. Stay strong, Japan 🇯🇵
ಮಾಹಿತಿ ಹಂಚಿಕೊಂಡ ನಟ
ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಜೂ. ಎನ್‌ಟಿಆರ್ ಸುರಕ್ಷಿತವಾಗಿ ಭಾರತಕ್ಕೆ ಮರಳಿರುವ ವಿಚಾರವನ್ನು ತಿಳಿಸಿದ್ದಾರೆ. ʼಇಂದು ಜಪಾನ್‌ನಿಂದ ಮನೆಗೆ ಮರಳಿ ಬಂದಿದ್ದೇನೆ. ಅಲ್ಲಿ ಸಂಭವಿಸಿದ ಭೂಕಂಪದ ಸುದ್ದಿ ಕೇಳಿ ಆಘಾತವಾಯಿತು. ಕಳೆದ ವಾರ ಪೂರ್ತಿ ಅಲ್ಲಿಯೇ ಕಳೆದಿದ್ದೆವು. ಸಂಕಷ್ಟದಲ್ಲಿ ಸಿಲುಕಿರುವವರ ಜತೆ ನನ್ನ ಮನಸ್ಸು ಇರುತ್ತದೆ. ಶೀಘ್ರದಲ್ಲಿಯೇ ಪರಿಸ್ಥಿತಿ ಸುಧಾರಿಸಲಿದೆ ಎಂಬ ಭರವಸೆ ಇದೆ. ಸ್ಟೇ ಸ್ಟ್ರಾಂಗ್ ಜಪಾನ್ʼ ಎಂದು ಅವರು ಬರೆದುಕೊಂಡಿದ್ದಾರೆ. ಜನವರಿ 1ರಂದು ಜೂ.ಎನ್‌ಟಿಆರ್ ಕುಟುಂಬ ಸಮೇತ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ಜೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಅಭಿನಯದ, ಎಸ್.ಎಸ್.ರಾಜಮೌಳಿ ನಿರ್ದೇಶನದ ʼಆರ್‌ಆರ್‌ಆರ್ʼ (RRR) ಚಿತ್ರ 2022ರಲ್ಲಿ ಜಪಾನ್‌ನಲ್ಲಿ ಬಿಡುಗಡೆಯಾಗಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಪಾನ್‌ನಲ್ಲಿ ಇದು ಸುಮಾರು 24.13 ಕೋಟಿ ರೂ. ಗಳಿಸಿತ್ತು. ಸದ್ಯ ಜೂ.ಎನ್‌ಟಿಆರ್ ʼದೇವರʼ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಬಹು ನಿರೀಕ್ಷಿತ ಚಿತ್ರದ ಗ್ಲಿಂಪ್ಸ್ ಜ. 8ರಂದು ಹೊರಬರಲಿದೆ.
ಮೃತರ ಸಂಖ್ಯೆ 24ಕ್ಕೆ ಏರಿಕೆ
ಜನವರಿ 1ರಂದು ಜಪಾನ್‌ನ ಹೊನ್ಶುವಿನ ಮುಖ್ಯ ದ್ವೀಪದಲ್ಲಿರುವ ಇಶಿಕಾವಾ ಪ್ರಾಂತ್ಯದಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿತು. ಇದು ಒಂದು ಮೀಟರ್‌ಗಿಂತಲೂ ಹೆಚ್ಚು ಎತ್ತರದ ಸುನಾಮಿ ಅಲೆಗಳನ್ನು ಪ್ರಚೋದಿಸಿತು. ಪರಿಣಾಮವಾಗಿ ಹಲವು ಕಟ್ಟಡಗಳು ಉರುಳಿದವು. ಪ್ರಮುಖ ಬಂದರಿನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿತು. ಹಲವಾರು ರಸ್ತೆಗಳು ಧ್ವಂಸಗೊಂಡವು. ಸದ್ಯ ದುರಂತದಲ್ಲಿ 24 ಮಂದಿ ಮೃತಪಟ್ಟಿದ್ದು, ಸಾವುನೋವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ.
ಭೂಕಂಪಕ್ಕೆ ತುತ್ತಾಗಿ ಬದುಕುಳಿದವರನ್ನು ಹುಡುಕಲು ಜಪಾನಿನ ತುರ್ತುರಕ್ಷಣಾ ಪಡೆಗಳು ಹೋರಾಟ ಮುಂದುವರಿಸಿವೆ. ನೋಟೊ ಪೆನಿನ್ಸುಲಾದಲ್ಲಿಯೂ ವಿನಾಶದ ಪ್ರಮಾಣ ಹೆಚ್ಚಿದ್ದು, ಹಲವು ಕಟ್ಟಡಗಳು ಕುಸಿದು ಹೊಗೆಯಾಡುತ್ತಿದೆ. ಹಲವು ಮನೆಗಳು ಕುಸಿದು ಚಪ್ಪಟೆಯಾಗಿವೆ. ಮೀನುಗಾರಿಕೆ ದೋಣಿಗಳು ಮುಳುಗಿವೆ ಅಥವಾ ದಡದತ್ತ ಕೊಚ್ಚಿಹೋಗಿವೆ.
ಸೋಮವಾರದಂದು ಕನಿಷ್ಠ 1.2 ಮೀಟರ್ (ನಾಲ್ಕು ಅಡಿ) ಎತ್ತರದ ಅಲೆಗಳು ವಾಜಿಮಾ ತೀರವನ್ನು ಅಪ್ಪಳಿಸಿದವು. ಬೇರೆ ಕಡೆಗಳಲ್ಲಿ ಸಣ್ಣ ಸುನಾಮಿಗಳ ಸರಣಿಯು ವರದಿಯಾಗಿದೆ. ಹೆಚ್ಚು ದೊಡ್ಡ ಅಲೆಗಳು ಬರಲಿಲ್ಲ. ಮಂಗಳವಾರ ಜಪಾನ್ ಎಲ್ಲಾ ಸುನಾಮಿ ಎಚ್ಚರಿಕೆಗಳನ್ನು ಹಿಂದೆಗೆದುಕೊಂಡಿದೆ.
ಇದನ್ನೂ ಓದಿ: Junior NTR: ಬಿಗ್ ಅಪ್‌ಡೇಟ್ ಹಂಚಿಕೊಂಡ ಜ್ಯೂನಿಯರ್ ಎನ್‌ಟಿಆರ್-ಪ್ರಶಾಂತ್ ನೀಲ್!