Site icon Vistara News

Jayant Chaudhary: ಐಎನ್​ಡಿಐಎ ಮೈತ್ರಿಕೂಟಕ್ಕೆ ಮತ್ತೊಂದು ಹೊಡೆತ; ಎನ್‌ಡಿಎಗೆ ಸೇರ್ಪಡೆಯಾದ ಆರ್‌ಎಲ್‌ಡಿ

rld

rld

ನವದೆಹಲಿ: ಲೋಕಸಭಾ ಚುನಾವಣಾ (Lok Sabha election) ಹೊತ್ತಿನಲ್ಲಿ ವಿಪಕ್ಷ ಒಕ್ಕೂಟ ಐಎನ್​ಡಿಐಎಗೆ (INDI Alliance) ಮತ್ತೊಂದು ಹಿನ್ನಡೆಯಾಗಿದೆ. ಜಯಂತ್‌ ಚೌಧರಿ (Jayant Chaudhary) ನೇತೃತ್ವದ ರಾಷ್ಟ್ರೀಯ ಲೋಕ ದಳ (Rashtriya Lok Dal) ಶನಿವಾರ ಅಧಿಕೃತವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ (NDA)ಗೆ ಸೇರ್ಪಡೆಯಾಗಿದೆ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮೊದಲು ಭೇಟಿಯಾದ ಜಯಂತ್ ಚೌಧರಿ ಅವರು ಸುದೀರ್ಘ ಮಾತುಕತೆ ನಡೆಸಿದ್ದು, ಎನ್​ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗಲು ಒಪ್ಪಿಗೆ ಸೂಚಿಸಿದರು. ಬಳಿಕ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ʼʼಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಆರ್​ಎಲ್​ಡಿ ಪಕ್ಷದ ಅಧ್ಯಕ್ಷ ಜಯಂತ್ ಚೌಧರಿ ಅವರೊಂದಿಗೆ ಸಭೆ ನಡೆಯಿತು. ಎನ್‌ಡಿಎ ಕುಟುಂಬಕ್ಕೆ ಸೇರುವ ಜಯಂತ್ ನಿರ್ಧಾರವನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಪ್ರಯಾಣ ಮತ್ತು ಉತ್ತರ ಪ್ರದೇಶದ ಅಭಿವೃದ್ಧಿಯಲ್ಲಿ ನೀವು ಪ್ರಮುಖ ಕೊಡುಗೆ ನೀಡುತ್ತೀರಿ ಎಂಬ ವಿಶ್ವಾಸವಿದೆ. ಈ ಬಾರಿ ಎನ್‌ಡಿಎ 400 ದಾಟುತ್ತದೆʼʼ ಎಂದು ಜೆ.ಪಿ.ನಡ್ಡಾ ಬರೆದುಕೊಂಡಿದ್ದಾರೆ.

ಅಮಿತ್‌ ಶಾ ಹೇಳಿದ್ದೇನು?

ಆರ್​ಎಲ್​ಡಿ ಪಕ್ಷವನ್ನು ಅಮಿತ್‌ ಶಾ ಅವರೂ ಸ್ವಾಗತಿಸಿದ್ದಾರೆ. ʼʼರಾಷ್ಟ್ರೀಯ ಲೋಕದಳದ ಅಧ್ಯಕ್ಷ ಜಯಂತ್ ಅವರನ್ನು ನಾನು ಎನ್‌ಡಿಎ ಕುಟುಂಬಕ್ಕೆ ಸ್ವಾಗತಿಸುತ್ತೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೀತಿಗಳಲ್ಲಿ ವಿಶ್ವಾಸವನ್ನು ಇರಿಸಿ ಅವರು ಎನ್​ಡಿಎಗೆ ಸೇರ್ಪಡೆಯಾಗಿದ್ದಾರೆ. ಇದರಿಂದ ರೈತರು, ಬಡವರು ಮತ್ತು ವಂಚಿತ ವರ್ಗಗಳ ಉನ್ನತಿಗಾಗಿ ಸಂಕಲ್ಪ ತೊಟ್ಟಿರುವ ನಮಗೆ ಇನ್ನಷ್ಟು ಬಲ ಸಿಕ್ಕಂತಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 400 ಸೀಟ್‌ ದಾಟಲಿದೆʼʼ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಜಯಂತ್‌ ಚೌಧರಿ ಹೇಳಿದ್ದೇನು?

ಎನ್‌ಡಿಎ ಸೇರ್ಪಡೆಯ ತಮ್ಮ ನಿರ್ಧಾರವನ್ನು ಜಯಂತ್‌ ಚೌಧರಿ ಸಮರ್ಥಿಸಿಕೊಂಡಿದ್ದಾರೆ. ʼʼನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಅಭಿವೃದ್ಧಿಗೊಳ್ಳಲಿದೆ. ಜತೆಗೆ ಬಡವರ ಏಳಿಗೆಯೂ ಆಗಲಿದೆ. ಅಮಿತ್‌ ಶಾ ಮತ್ತು ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗಲು ನಿರ್ಧರಿಸಿದೆ. ಅಭಿವೃದ್ಧಿ ಹೊಂದಿದ ದೇಶದ ಕನಸನ್ನು ಎನ್‌ಡಿಎ ನನಸು ಮಾಡಲಿದೆʼʼ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Bharat Ratna: ಚೌಧರಿಗೆ ಭಾರತರತ್ನ ಘೋಷಣೆ ಬೆನ್ನಲ್ಲೇ ಬಿಜೆಪಿ ಜತೆ ಮೈತ್ರಿ ಎಂದ ಆರ್‌ಎಲ್‌ಡಿ!

ಇಂಡಿಯಾ ಸಖ್ಯ ತೊರೆಯುವ ನಿರ್ಧಾರ ತಿಳಿಸಿದ್ದ ಚೌಧರಿ

ಐಎನ್​ಡಿಐಎ ಜತೆಗಿನ ಮೈತ್ರಿ ಮುರಿದುಕೊಂಡ ಆರ್‌ಎಲ್‌ಡಿ ಕೆಲವು ದಿನಗಳ ಹಿಂದೆ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಗೊಳ್ಳುವುದಾಗಿ ಘೋಷಿಸಿತ್ತು. ಜನರಿಗೆ ಒಳ್ಳೆಯದನ್ನು ಮಾಡುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಜಯಂತ್ ಚೌಧರಿ ಸ್ಪಷ್ಟನೆ ನೀಡಿದ್ದರು. ಕೆಲವು ದಿನಗಳ ಹಿಂದೆ ನಿತೀಶ್‌ ಕುಮಾರ್‌ ಐಎನ್​ಡಿಐಎ ಮೈತ್ರಿ ತೊರೆದಿದ್ದರು. ಅದಾದ ಬಳಿಕ ಜಯಂತ್ ಚೌಧರಿಯೂ ಹೊರ ಬಂದಿದ್ದು, ಚುನಾವಣೆ ಸಮಯದಲ್ಲಿ ಐಎನ್​ಡಿಐಎಗೆ ಮತ್ತಷ್ಟು ಆಘಾತ ಎದುರಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version