ರಾಂಚಿ: ಜಾರ್ಖಂಡ್‌ನ ಮೂವರು ಕಾಂಗ್ರೆಸ್ ಶಾಸಕರು ಕೋಲ್ಕೊತಾ ಬಳಿ ೫೦ ಲಕ್ಷ ರೂ.ಯೊಂದಿಗೆ ಬಂಧನಕ್ಕೊಳಗಾದ ಬೆನ್ನಿಗೇ ಹಲವು ರಾಜಕೀಯ ಚರ್ಚೆಗಳು ಶುರುವಾಗಿವೆ. ಜಾರ್ಖಂಡ್‌ನ ಕಾಂಗ್ರೆಸ್ ಶಾಸಕರಿಗೆ ಆಮಿಷ ಒಡ್ಡುವ ಮೂಲಕ ಅವರನ್ನು ಸೆಳೆಯುವ, ಆ ಮೂಲಕ ಜೆಎಂಎಂ-ಕಾಂಗ್ರೆಸ್ ಸರಕಾರವನ್ನು ಪತನಗೊಳಿಸುವ ಸಂಚು ನಡೆಯುತ್ತಿದೆ ಎನ್ನುವುದು ಚರ್ಚೆಗೆ ಬಂದಿರುವ ವಿಷಯ.
ಜಮ್ತಾರಾದ ಶಾಸಕ ಇರ್ಫಾನ್ ಅನ್ಸಾರಿ, ರಾಂಚಿ ಜಿಲ್ಲೆಯ ಖಜ್ರಿಯ ಜನಪ್ರತಿನಿಧಿ ರಾಜೇಶ್ ಕಶ್ಯಪ್ ಮತ್ತು ಶಿಮ್‌ದೇಗಾ ಜಿಲ್ಲೆಯ ಕೊಲೆಬಿರಾ ವಿಧಾನಸಭಾ ಕ್ಷೇತ್ರದ ಪ್ರತಿನಿಧಿ ನಮನ್ ಬಿಕ್ಸಲ್ ಕೊಂಗಾರಿ ಅವರು ಸಾಗುತ್ತಿದ್ದ ಎಸ್‌ಯುವಿಯನ್ನು ಪಂಚ್ಲಾ ಪೊಲೀಸ್ ಠಾಣೆಯ ರಾಣಿಹಟಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ-೧೬ರಲ್ಲಿ ಶನಿವಾರ ರಾತ್ರಿ ತಡೆಯಲಾಗಿತ್ತು. ಈ ವಾಹನದಲ್ಲಿ ೫೦ ಲಕ್ಷ ರೂ.ಗೂ ಹೆಚ್ಚು ಹಣವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ ಕಾಂಗ್ರೆಸ್ ಪಕ್ಷದಿಂದಲೂ ಇವರನ್ನು ಅಮಾನತು ಮಾಡಲಾಗಿದೆ.
ಈ ನಡುವೆ, ಜಾರ್ಖಂಡ್‌ನ ಕಾಂಗ್ರೆಸ್‌ನ ಶಾಸಕರಾಗಿರುವ ಜೈಮಂಗಲ್ ಸಿಂಗ್ ಒಂದು ಆರೋಪ ಮಾಡಿದ್ದಾರೆ. ಕೋಲ್ಕೊತಾದಲ್ಲಿ ಸಿಕ್ಕಿಬಿದ್ದಿರುವ ಮೂವರೂ ಶಾಸಕರು ತನಗೊಂದು ಆಫರ್ ನೀಡಿದ್ದರು. ಅದರ ಪ್ರಕಾರ, ಅಸ್ಸಾಂ ಮುಖ್ಯಮಂತ್ರಿಯಾಗಿರುವ ಹಿಮಂತ್ ಬಿಸ್ವಾ ಶರ್ಮ ಅವರನ್ನು ಗುವಾಹಟಿಯಲ್ಲಿ ಭೇಟಿಯಾಗಬೇಕು. ಅವರು ಜಾರ್ಖಂಡ್‌ನಲ್ಲಿರುವ ಜೆಎಂಎಂ-ಕಾಂಗ್ರೆಸ್ ಸರಕಾರವನ್ನು ಉರುಳಿಸುವ ಪ್ಲ್ಯಾನ್ ಮಾಡುತ್ತಿದ್ದಾರೆ. ಅವರ ಜತೆ ಕೈ ಜೋಡಿಸಿದರೆ ಮಂತ್ರಿ ಹುದ್ದೆ ಮತ್ತು ಕೋಟ್ಯಂತರ ರೂ. ನಗದು ಸಿಗಲಿದೆ ಎಂದು ತನ್ನಲ್ಲಿ ತಿಳಿಸಿದ್ದರು ಎಂದು ಅವರು ಹೇಳಿದ್ದಾರೆ.
ಅವರು ಬಾಯಲ್ಲಿ ಹೇಳಿದ್ದಷ್ಟೇ ಅಲ್ಲ, ರಾಂಚಿಯ ಅರ್ಗೋರಾ ಪೊಲೀಸ್ ಠಾಣೆಗೆ ಅಧಿಕೃತ ದೂರನ್ನು ಕೂಡಾ ನೀಡಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿದ್ದಾರೆ.
ಕೋಲ್ಕೊತ್ತಾದಿಂದ ಅಸ್ಸಾಂಗೆ?
ಶಾಸಕ ಜೈಮಂಗಲ್ ಸಿಂಗ್ ಅವರು ದೂರಿನಲ್ಲಿ ಹೇಳಿರುವ ಪ್ರಕಾರ, ʻʻಈಗ ಬಂಧಿತರಾಗಿರುವ ಶಾಸಕರು ನನ್ನನ್ನೂ ಕೋಲ್ಕೊತಾಗೆ ಬರುವಂತೆ ಹೇಳಿದ್ದರು. ಅಲ್ಲಿಂದ ಗುವಾಹಟಿಗೆ ಹೋಗೋಣ ಎಂದಿದರು. ಜಾಮ್ತಾರಾ ಎಂಎಂಎ ಇರ್ಫಾನ್ ಅನ್ಸಾರಿಯಂತೂ ತನಗೆ ಮುಂದಿನ ಬಿಜೆಪಿ ಸರಕಾರದಲ್ಲಿ ಆರೋಗ್ಯ ಖಾತೆ ಸಿಗುತ್ತದೆ ಎಂದೇ ಹೇಳುತ್ತಿದ್ದ. ಪ್ರತಿ ಶಾಸಕರಿಗೆ ೧೦ ಕೋಟಿ ಕೊಡುತ್ತಾರೆ ಎನ್ನುತ್ತಿದ್ದ. ಬಿಸ್ವಾ ಶರ್ಮ ಅವರಿಗೆ ಬಿಜೆಪಿಯ ಉನ್ನತ ಮಟ್ಟದ ಸಂಪರ್ಕ ಇದೆ. ಅವರು ಹೇಳಿದಂತೆ ನಡೆಯುತ್ತದೆ. ಅವರೇ ನನಗೆ ಇಷ್ಟೆಲ್ಲ ಭರವಸೆ ಕೊಟ್ಟಿದ್ದು ಎಂದು ಇರ್ಫಾನ್ ಹೇಳಿದ್ದಾನೆʼʼ.
ನಿರಾಕರಿಸಿದ ಬಿಸ್ವಾ ಶರ್ಮ
ಆದರೆ, ಅಸ್ಸಾಂ ಮುಖ್ಯಮಂತ್ರಿಯಾಗಿರುವ ಹಿಮಂತ್ ಬಿಸ್ವಾ ಶರ್ಮ ಅವರು ಈ ಆರೋಪವನ್ನು ನಿರಾಕರಿಸಿದ್ದಾರೆ. ನಾನು ಕಾಂಗ್ರೆಸ್‌ನ ದೊಡ್ಡ ದೊಡ್ಡ ನಾಯಕರ ಜತೆಗೂ ಸಂಪರ್ಕದಲ್ಲಿದ್ದೇನೆ. ಈ ಆರೋಪ ಯಾಕೆ ಬಂತೋ ಗೊತ್ತಿಲ್ಲ ಎಂದು ಹೇಳಿದ್ದಾರೆ. ʻʻʻಕಾಂಗ್ರೆಸ್‌ನ ದೊಡ್ಡ ದೊಡ್ಡ ನಾಯಕರ ಜತೆಗೂ ನನಗೆ ಸಂಪರ್ಕವಿದೆ. ಹಾಗಂತ ನಾವು ರಾಜಕೀಯ ಮಾತನಾಡುತ್ತೇವೆ ಎಂದಲ್ಲ. ೨೨ಕ್ಕೂ ಹೆಚ್ಚು ವರ್ಷಗಳಿಂದ ಪಕ್ಷದಲ್ಲಿದ್ದೇನೆ.ʼʼ ಎಂದಿದ್ದಾರೆ
ಪತನ ಪ್ರಯತ್ನ ನಿಜವೇ?
೮೧ ಸದಸ್ಯರ ಜಾರ್ಖಂಡ್ ರಾಜ್ಯ ವಿಧಾನಸಭೆಯಲ್ಲಿ ಜೆಎಂಎಂ(೩೦ ಶಾಸಕರು) ಮತ್ತು ಕಾಂಗ್ರೆಸ್ (೧೬ ಶಾಸಕರು) ಜತೆ ಸೇರಿ ಸರಕಾರ ನಡೆಸುತ್ತಿವೆ. ಇದಕ್ಕೆ ಆರ್‌ಜೆಡಿಯ ಒಬ್ಬ ಶಾಸಕನ ಬೆಂಬಲವಿದೆ. ಇತ್ತ ಪ್ರತಿಪಕ್ಷದಲ್ಲಿರುವ ಬಿಜೆಪಿ ೨೫ ಶಾಸಕರನ್ನು ಹೊಂದಿದೆ. ಜಾರ್ಖಂಡ್ ವಿಕಾಸ್ ಮೋರ್ಚಾ-೨, ಎಜೆಎಸ್‌ಯು-೨, ಸಿಪಿಎಂಎಲ್-೧, ಎನ್‌ಸಿಪಿ-೧, ಪಕ್ಷೇತರ-೨ ಶಾಸಕರಿದ್ದಾರೆ. ಬಿಜೆಪಿ ಕಾಂಗ್ರೆಸ್‌ನ ಒಂದಷ್ಟು ಶಾಸಕರನ್ನು ಸೆಳೆದು ಪಕ್ಷೇತರರನ್ನು ಸೇರಿಸಿಕೊಂಡು ಸರಕಾರ ರಚಿಸುವ ಪ್ಲ್ಯಾನ್ ಹೊಂದಿದೆ ಎಂದು ಹೇಳಲಾಗುತ್ತಿದೆ.
ಮಹಾರಾಷ್ಟ್ರ ಸರಕಾರದಲ್ಲಿ ಹುಟ್ಟಿದ ಬಂಡಾಯ ಗುಜರಾತ್‌ನಿಂದ ಅಸ್ಸಾಂಗೆ ಶಿಫ್ಟ್ ಆಗಿರುವುದಕ್ಕೂ ಜಾರ್ಖಂಡ್‌ನ ಶಾಸಕರ ಆಪಾದನೆಗೂ ಸಂಬಂಧ ಕಲ್ಪಿಸಲಾಗುತ್ತಿದೆ.