ರಾಂಚಿ: ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್ ಸೇರಿ ಆಡಳಿತ ನಡೆಸುತ್ತಿರುವ ಜಾರ್ಖಂಡ್‌ನಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆಯುವ ಸಾಧ್ಯತೆಗಳು ಕಂಡುಬರುತ್ತಿವೆ. ಒಂದು ಕಡೆ ಭಾರತೀಯ ಜನತಾ ಪಕ್ಷವು ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಿರುವ ನಡುವೆಯೇ ಇನ್ನೊಂದು ಕಡೆ ೧೬ ಬಿಜೆಪಿ ಶಾಸಕರು ಜೆಎಂಎಂ ಸೇರಲು ಉತ್ಸುಕರಾಗಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ಹೇಳಿಕೊಂಡಿದ್ದಾರೆ.
ಬಿಜೆಪಿಯ ೨೫ ಶಾಸಕರಲ್ಲಿ ೧೬ ಮಂದಿ ಹೇಮಂತ್ ಸೊರೇನ್ ನೇತೃತ್ವದ ಸರಕಾರವನ್ನು ಬೆಂಬಲಿಸಲು ಸಿದ್ಧರಾಗಿದ್ದಾರೆ. ಅವರಿಗೆ ಬಿಜೆಪಿಯಲ್ಲಿ ಉಸಿರುಗಟ್ಟಿದಂತಾಗಿದೆ ಎಂದು ಜೆಎಂಎಂ ನಾಯಕ ಸುಪ್ರಿಯೊ ಭಟ್ಟಾಚಾರ್ಯ ಹೇಳಿಕೊಂಡಿದ್ದಾರೆ.
ಜಾರ್ಖಂಡ್‌ನಲ್ಲಿ ರಾಜಕೀಯ ಪರಿಸ್ಥಿತಿ ಸ್ವಲ್ಪ ಅಯೋಮಯವಾಗಿದೆ. ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದು, ಯಾವುದೇ ಕ್ಷಣದಲ್ಲಿ ತನಿಖೆ ಆರಂಭವಾಗುವ ಸಾಧ್ಯತೆ ಇದೆ. ಇದು ಬಿಜೆಪಿಯ ಕುತಂತ್ರ ಎಂಬ ವಾದವನ್ನು ಜೆಎಂಎಂ ಮಾಡುತ್ತಿದೆ. ಈ ನಡುವೆ, ಕೆಲವು ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿ ಸೆಳೆಯಲು ಪ್ರಯತ್ನಿಸುತ್ತಿದೆ ಎಂಬ ವದಂತಿಗಳು ಹರಡಿವೆ. ಇಂಥ ಹೊತ್ತಿನಲ್ಲಿ ಭಟ್ಟಾಚಾರ್ಯ ಅವರ ಹೇಳಿಕೆ ಬಂದಿದೆ.
ವಿಧಾನಸಭೆ ಬಲಾಬಲ ಹೇಗಿದೆ?
೮೧ ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ ಜೆಎಂಎಂ(೩೦ ಶಾಸಕರು) ಮತ್ತು ಕಾಂಗ್ರೆಸ್ (೧೬ ಶಾಸಕರು) ಜತೆ ಸೇರಿ ಸರಕಾರ ನಡೆಸುತ್ತಿವೆ. ಇದಕ್ಕೆ ಆರ್‌ಜೆಡಿಯ ಒಬ್ಬ ಶಾಸಕನ ಬೆಂಬಲವಿದೆ. ಇತ್ತ ಪ್ರತಿಪಕ್ಷದಲ್ಲಿರುವ ಬಿಜೆಪಿ ೨೫ ಶಾಸಕರನ್ನು ಹೊಂದಿದೆ. ಜಾರ್ಖಂಡ್ ವಿಕಾಸ್ ಮೋರ್ಚಾ-೨, ಎಜೆಎಸ್‌ಯು-೨, ಸಿಪಿಎಂಎಲ್-೧, ಎನ್‌ಸಿಪಿ-೧, ಪಕ್ಷೇತರ-೨ ಶಾಸಕರಿದ್ದಾರೆ.
ಬಿಜೆಪಿ ಕಾಂಗ್ರೆಸ್‌ನ ಒಂದಷ್ಟು ಶಾಸಕರನ್ನು ಸೆಳೆದು ಪಕ್ಷೇತರರನ್ನು ಸೇರಿಸಿಕೊಂಡು ಸರಕಾರ ರಚಿಸುವ ಪ್ಲ್ಯಾನ್ ಹೊಂದಿದೆ ಎಂದು ಹೇಳಲಾಗುತ್ತಿದೆ. ಆದರೆ, ಈಗ ಜೆಎಂಎಂ ಬಿಜೆಪಿ ಶಾಸಕರೇ ಇತ್ತ ಬರುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.
ಬಿಜೆಪಿ ನಿರಾಕರಣೆ
ಈ ನಡುವೆ ಜೆಎಂಎಂ ನಾಯಕ ಭಟ್ಟಾಚಾರ್ಯ ಅವರ ಹೇಳಿಕೆಯನ್ನು ಬಿಜೆಪಿ ಖಡಾಖಂಡಿತವಾಗಿ ತಳ್ಳಿ ಹಾಕಿದೆ. ಇದೆಲ್ಲ ಊಹಾಪೋಹ ಎಂದು ಪಕ್ಷದ ವಕ್ತಾರ ಪ್ರತುಲ್ ಶಹದೇವ್ ಹೇಳಿದ್ದಾರೆ. ʻʻಜೆಎಂಎಂ ಶಾಸಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಪಕ್ಷದ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸುತ್ತಿದೆ. ಉಳಿವಿಗಾಗಿನ ಹೋರಾಟ ನಡೆಸುತ್ತಿರುವ ಆ ಪಕ್ಷಕ್ಕೆ ಯಾರು ಹೋಗುತ್ತಾರೆʼʼ ಎಂದು ಅವರು ಪ್ರಶ್ನಿಸಿದ್ದಾರೆ.
ʻʻಜೆಎಂಎಂ ಶಾಸಕರು ಲೂಟಿ ಮತ್ತು ಪ್ರಚಾರದಲ್ಲಿ ಮುಳುಗಿದ್ದಾರೆ. ಈಗ ಸುಳ್ಳು ವಿವರಣೆಗಳ ಮೂಲಕ ಏನೇನೋ ಕಥೆಗಳನ್ನು ಹರಡುತ್ತಿದ್ದಾರೆʼʼ ಎನ್ನುವುದು ಶಹದೇವ್ ಹೇಳಿಕೆ.