ನವದೆಹಲಿ: ರಿಲಯನ್ಸ್ ಜಿಯೋದ (Reliance Jio) ಹೊಸ ಯೋಜನೆ ‘ಏರ್ ಫೈಬರ್’ (Air Fiber) ಸೇವೆಗಾಗಿ ಇನ್ನು ಕಾಯುವ ಅಗತ್ಯವಿಲ್ಲ. ಗಣೇಶ ಚತುರ್ಥಿಯಂದು (Ganesh Chaturthi) ಅಂದರೆ ಸೆಪ್ಟೆಂಬರ್ 19 ರಂದು ಜಿಯೋ ಏರ್ ಫೈಬರ್ (Jio Air Fiber) ಸೇವೆಯನ್ನು ಆರಂಭಿಸಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ (Reliance Industries Chairman Mukesh Ambani) ಅವರು ಭಾನುವಾರ ಕಂಪೆನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಿಸಿದರು(Reliance AGM 2023).
ಜಿಯೋ ಏರ್ ಫೈಬರ್ 5ಜಿ ನೆಟ್‌ವರ್ಕ್ ಮತ್ತು ಅತ್ಯಾಧುನಿಕ ವೈರ್‌ಲೆಸ್ ತಂತ್ರಜ್ಞಾನವನ್ನು ಬಳಸಿಕೊಂಡು ಮನೆಗಳು ಮತ್ತು ಕಚೇರಿಗಳಿಗೆ ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ಒದಗಿಸುತ್ತದೆ. ಜಿಯೋ ಏರ್ ಫೈಬರ್ ಆರಂಭದಿಂದಾಗಿ ದೂರಸಂಪರ್ಕ ಕ್ಷೇತ್ರದಲ್ಲಿ ಸಂಚಲನ ಉಂಟಾಗುವ ಸಾಧ್ಯತೆ ಇದೆ.
— Reliance Jio (@reliancejio) August 28, 2023
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಮುಕೇಶ್ ಅಂಬಾನಿ, “ನಮ್ಮ ಆಪ್ಟಿಕಲ್ ಫೈಬರ್ ಸೇವೆಯಾದ ಜಿಯೋ ಫೈಬರ್ 10 ದಶಲಕ್ಷಕ್ಕೂ ಹೆಚ್ಚು ಸಂಪರ್ಕಗಳನ್ನು ಹೊಂದಿದೆ. ಇನ್ನೂ ಲಕ್ಷಾಂತರ ಮನೆಗಳಿಗೆ ಬೇಡಿಕೆ ಇದ್ದು, ಅಲ್ಲಿ ತಂತಿ ಸಂಪರ್ಕ ಕಲ್ಪಿಸುವುದು ಕಷ್ಟಕರವಾಗಿದೆ. ಈ ತೊಂದರೆಯನ್ನು ಜಿಯೋ ಏರ್ ಫೈಬರ್ ನಿವಾರಿಸುತ್ತದೆ. ಈ ಮೂಲಕ ನಾವು 20 ಕೋಟಿ ಮನೆ ಮತ್ತು ಕಚೇರಿಗಳನ್ನು ತಲುಪುವ ನಿರೀಕ್ಷೆಯಲ್ಲಿದ್ದೇವೆ. ಜಿಯೋ ಏರ್ ಫೈಬರ್ ಆರಂಭದೊಂದಿಗೆ, ಜಿಯೋ ವಲಯಕ್ಕೆ ಪ್ರತಿದಿನ 1.5 ಲಕ್ಷ ಹೊಸ ಗ್ರಾಹಕರನ್ನು ಸೇರಿಸಲು ಸಾಧ್ಯವಾಗುತ್ತದೆ” ಎಂದು ತಿಳಿಸಿದ್ದಾರೆ.
ಜಿಯೋದ ಆಪ್ಟಿಕಲ್ ಫೈಬರ್ ಸೌಲಭ್ಯವು ಭಾರತದಾದ್ಯಂತ 15 ಲಕ್ಷ ಕಿಮೀಗಳಷ್ಟು ಹರಡಿದೆ. ಆಪ್ಟಿಕಲ್ ಫೈಬರ್‌ನಲ್ಲಿ ಗ್ರಾಹಕರು ತಿಂಗಳಿಗೆ ಸರಾಸರಿ 280 ಜಿಬಿಗಿಂತ ಹೆಚ್ಚಿನ ಡೇಟಾವನ್ನು ಬಳಸುತ್ತಾರೆ. ಇದು ಜಿಯೋದ ತಲಾ ಮೊಬೈಲ್ ಇಂಟರ್ನೆಟ್ ಡೇಟಾ ಬಳಕೆಗಿಂತ 10 ಪಟ್ಟು ಹೆಚ್ಚು. ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋ ಏರ್ ಫೈಬರ್ ಜೊತೆಗೆ ಜಿಯೋ ಟ್ರೂ 5 ಜಿ ಡೆವಲಪರ್ ಪ್ಲಾಟ್‌ಫಾರ್ಮ್ ಮತ್ತು ಜಿಯೋ ಟ್ರೂ 5ಜಿ ಲ್ಯಾಬ್‌ಗಳನ್ನು ಪ್ರಾರಂಭಿಸುವುದಾಗಿ ಘೋಷಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Reliance AGM 2023: ರಿಲಯನ್ಸ್‌ನಲ್ಲಿ ಮಹತ್ವದ ಬದಲಾವಣೆ; ನೀತಾ ಅಂಬಾನಿ ರಾಜೀನಾಮೆ, ಮಕ್ಕಳಿಗೆ ಮಣೆ
ಈ ಬಗ್ಗೆ ಮಾತನಾಡಿದ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ, “ಭಾರತೀಯ ಉದ್ಯಮಗಳು, ಸಣ್ಣ ಉದ್ಯಮಗಳು ಮತ್ತು ತಂತ್ರಜ್ಞಾನದ ಸ್ಟಾರ್ಟ್-ಅಪ್‌ಗಳು ಡಿಜಿಟಲ್ ಪ್ರಪಂಚದೊಂದಿಗೆ ಸಂವಹನ ನಡೆಸುವ ವಿಧಾನವನ್ನು ಪರಿವರ್ತಿಸುವ ವೇದಿಕೆಯನ್ನು ನಾವು ನಿರ್ಮಿಸುತ್ತಿದ್ದೇವೆ. ಉದ್ಯಮಗಳ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು, ಜಿಯೋ 5ಜಿ ನೆಟ್‌ವರ್ಕ್, ಎಡ್ಜ್ ಕಂಪ್ಯೂಟಿಂಗ್ ಮತ್ತು ಅಪ್ಲಿಕೇಶನ್‌ಗಳನ್ನು ಸಂಯೋಜಿಸುವ ಸಮಗ್ರ ವೇದಿಕೆಯನ್ನು ರಚಿಸಿದೆ. ಮತ್ತೊಂದೆಡೆ, ‘ಜಿಯೋ ಟ್ರೂ 5ಜಿ ಲ್ಯಾಬ್’ ನಲ್ಲಿರುವ ನಮ್ಮ ತಂತ್ರಜ್ಞಾನ ಪಾಲುದಾರರು ಉದ್ಯಮ-ನಿರ್ದಿಷ್ಟ ಪರಿಹಾರಗಳನ್ನು ಅಭಿವೃದ್ಧಿಪಡಿಸಬಹುದು, ಪರೀಕ್ಷಿಸಬಹುದು ಮತ್ತು ಸಹ-ನಿರ್ಮಾಣದಲ್ಲಿ ಜತೆಗೂಡಬಹುದು” ಎಂದು ಹೇಳಿದರು. ಜಿಯೋ ಟ್ರೂ 5ಜಿ ಲ್ಯಾಬ್ ನವಿ ಮುಂಬೈನ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್‌ನಲ್ಲಿದೆ.
ವಾಣಿಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.