ಮುಂಬೈ: ರಿಲಯನ್ಸ್ ಜಿಯೋ (Reliance Jio) ಪ್ರಿಪೇಯ್ಡ್ ಬಳಕೆದಾರರಿಗೆ ಕಂಪನಿಯು ಕಹಿ ಸುದ್ದಿ ನೀಡಿದೆ. ಜಿಯೋ ಪ್ರಿಪೇಯ್ಡ್ ಪ್ಲಾನ್‌ನ ಶುಲ್ಕಗಳನ್ನು (Jio Tariffs) ಶೇ.20ರಷ್ಟು ಏರಿಕೆ ಮಾಡಿದ್ದು, ಇದರಿಂದ ಗ್ರಾಹಕರಿಗೆ ಹೊರೆಯಾಗಲಿದೆ. ಅದರಲ್ಲೂ, ಇತ್ತೀಚೆಗೆ ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್, ಹಾಲಿನ ಬೆಲೆಯೇರಿಕೆ ಆಗಿದ್ದು, ಇದರ ಬೆನ್ನಲ್ಲೇ ಜಿಯೋ ಪ್ರಿಪೇಯ್ಡ್ ಪ್ಲಾನ್‌ಗಳ ಶುಲ್ಕವೂ ಜಾಸ್ತಿಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಜುಲೈ 3ರಿಂದ ರಿಲಯನ್ಸ್ ಜಿಯೋ ಹೊಸ ರೇಟ್ ಅನ್ವಯವಾಗಲಿದೆ.
ತಿಂಗಳ ಪ್ಲಾನ್‌ಗೆ ಇಷ್ಟಾಗಲಿದೆ ಹೊರೆ
28 ದಿನಗಳವರೆಗೆ 2 ಜಿಬಿ ಡೇಟಾ (ಪ್ರತಿದಿನ ಅಲ್ಲ), ಅನ್‌ಲಿಮಿಟೆಡ್ ಕರೆಗಳು ಇರುವ 155 ಪ್ಲಾನ್‌ಗೆ ಇನ್ನು 189 ರೂ. ಪಾವತಿಸಬೇಕಾಗುತ್ತದೆ. ಹಾಗೆಯೇ, ಪ್ರತಿದಿನ 1 ಜಿಬಿ ಇಂಟರ್‌ನೆಟ್ ಪ್ಲಾನ್‌ಗೆ 28 ದಿನಗಳಿಗೆ 209 ರೂ. ಬದಲು 249 ರೂ., ನಿತ್ಯ 1.5 ಜಿಬಿ ಪ್ಲಾನ್‌ಗೆ 239 ರೂ. ಬದಲು 299 ರೂ., 2 ಜಿಬಿ ಪ್ಲಾನ್‌ಗೆ 299 ರೂ. ಬದಲು 349 ರೂ., 2.5 ಜಿಬಿಗೆ 349 ರೂ. ಬದಲು 399 ರೂ., 3 ಜಿಬಿಗೆ 399 ರೂ. ಬದಲು 449 ರೂ. ಪಾವತಿಸಬೇಕಾಗುತ್ತದೆ.
2 ಹಾಗೂ 3 ತಿಂಗಳ ಪ್ಲಾನ್
ಎರಡು ಹಾಗೂ ಮೂರು ತಿಂಗಳ ಪ್ಲಾನ್‌ಗಳ ಬೆಲೆಯನ್ನೂ ಏರಿಕೆ ಮಾಡಲಾಗಿದೆ. ಪ್ರತಿ ದಿನ 1.5 ಜಿಬಿ ಇಂಟರ್‌ನೆಟ್, ಅನ್‌ಲಿಮಿಟೆಡ್ ಕರೆಗಳಿಗೆ ಇನ್ನು 479 ರೂ. ಬದಲು 579 ರೂ., 2 ಜಿಬಿಗೆ 533 ರೂ. ಬದಲು 629, 3 ತಿಂಗಳು ಅನ್‌ಲಿಮಿಟೆಡ್ ಕರೆ, 6 ಜಿಬಿ ಇಂಟರ್‌ನೆಟ್ (ಪ್ರತಿದಿನ ಅಲ್ಲ) ಪ್ಲಾನ್‌ಗೆ 395 ರೂ. ಬದಲಾಗಿ 479 ರೂ. ಪಾವತಿಸಬೇಕಾಗುತ್ತದೆ. ಮೂರು ತಿಂಗಳು ಪ್ರತಿ ದಿನ 1.5 ಜಿಬಿ ಅಂತರ್ಜಾಲ, ಅನ್‌ಲಿಮಿಟೆಡ್ ಕಾಲ್ಸ್ ಪ್ಲಾನ್‌ಗೆ 666 ರೂ. ಬದಲಾಗಿ 799 ರೂ. 2 ಜಿಬಿಗೆ 719 ರೂ. ಬದಲು 859 ರೂ., 3 ಜಿಬಿಗೆ 999 ರೂ. ಬದಲಾಗಿ 1,199 ರೂ. ತೆರಬೇಕಾಗಿದೆ.
ವಾರ್ಷಿಕ ಹಾಗೂ ಡೇಟಾ ಆ್ಯಡ್ ಆನ್‌ಗೆ ಎಷ್ಟು ಏರಿಕೆ
336 ದಿನಗಳವರೆಗೆ ಅನ್‌ಲಿಮಿಟೆಡ್ ಕರೆಗಳು, 24 ಜಿಬಿ ಡೇಟಾ (ಪ್ರತಿದಿನ ಅಲ್ಲ) ಪ್ಲಾನ್‌ಗೆ 1,559 ರೂ. ಬದಲು 1,899 ರೂ., ಒಂದು ವರ್ಷಕ್ಕೆ ನಿತ್ಯ 2.5 ಜಿಬಿ ಪ್ಲಾನ್‌ಗೆ 2,999 ರೂ. ಬದಲು 3,599 ರೂ. ಪಾವತಿಸಬೇಕಾಗುತ್ತದೆ. ಡೇಟಾ ಆ್ಯಡ್ ಆನ್ ಪ್ಲಾನ್‌ಗಳನ್ನೂ ಬಿಟ್ಟಿಲ್ಲ. 1 ಜಿಬಿ ಡೇಟಾಗೆ 15 ರೂ.ನಿಂದ 19 ರೂ.ಗೆ ಏರಿಕೆ ಮಾಡಲಾಗಿದೆ. ಇನ್ನು 2 ಜಿಬಿ ಡೇಟಾಗೆ 25 ರೂ.ನಿಂದ 29 ರೂ., 6 ಜಿಬಿ ಡೇಟಾಗೆ 61 ರೂ.ನಿಂದ 69 ರೂ.ಗೆ ಹೆಚ್ಚಳ ಮಾಡಲಾಗಿದೆ. ಭಾರತದಲ್ಲಿ ಸುಮಾರು 45 ಕೋಟಿಗೂ ಅಧಿಕ ಜನ ರಿಲಯನ್ಸ್ ಜಿಯೋ ಬಳಸುತ್ತಾರೆ. ಹಾಗಾಗಿ, ಇದು ದೇಶದಲ್ಲೇ ಬೃಹತ್ ಟೆಲಿಕಾಮ್ ಕಂಪನಿ ಎನಿಸಿದೆ.