ಮುಂಬೈ: ದೇಶದಲ್ಲಿ ಚಿಲ್ಲರೆ ವ್ಯಾಪಾರದಿಂದ ಹಿಡಿದು ಟೆಲಿಕಾಂ, ಇಂಟರ್ನೆಟ್ ಕ್ಷೇತ್ರದವರೆಗೆ ಮಹತ್ತರ ಛಾಪು ಮೂಡಿಸಿರುವ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿ ಈಗ ದೇಶದಲ್ಲೇ ಬೃಹತ್ ಮಾಲ್ ನಿರ್ಮಿಸಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ (Bandra Kurla Complex) ಜಿಯೋ ವರ್ಲ್ಡ್ ಪ್ಲಾಜಾ (Jio World Plaza) ನಿರ್ಮಿಸಲಾಗಿದ್ದು, ನವೆಂಬರ್ 1ರಿಂದ ಸಾರ್ವಜನಿಕರು ಲಕ್ಸುರಿ ಮಾಲ್‌ನಲ್ಲಿ ಶಾಪಿಂಗ್, ಸಿನಿಮಾ, ಆಹಾರ ಸೇರಿ ಹಲವು ರೀತಿಯ ಲಕ್ಸುರಿ ಸೇವೆಗಳನ್ನು ಪಡೆಯಬಹುದಾಗಿದೆ.
ಗ್ರಾಹಕ ಸ್ನೇಹಿ ಶಾಪಿಂಗ್ ವ್ಯವಸ್ಥೆ
ನಾಗರಿಕರು ಉತ್ತಮ ಶಾಪಿಂಗ್ ಅನುಭವ ಪಡೆಯಲೆಂದೇ ಸುಮಾರು 7.5 ಲಕ್ಷ ಚದರ ಅಡಿಯಲ್ಲಿ ಬೃಹತ್ ಪ್ಲಾಜಾ ನಿರ್ಮಿಸಲಾಗಿದೆ. ಶಾಪಿಂಗ್‌ಗೆ ನೆರವಾಗಲು ಸಿಬ್ಬಂದಿ, ವಿಐಪಿಗಳಿಗೆ ಸಹಾಯಕರು, ಕ್ಷಣಾರ್ಧದಲ್ಲಿ ಟ್ಯಾಕ್ಸಿ ಸೇವೆ, ವ್ಹೀಲ್‌ಚೇರ್, ಬಟ್ಲರ್ ಸರ್ವಿಸ್, ಬೇಬಿ ಸ್ಟ್ರಾಲರ್‌ಗಳು ಸೇರಿ ಹಲವು ಗ್ರಾಹಕ ಸ್ನೇಹಿ ಸೌಕರ್ಯಗಳು ಇರಲಿವೆ.
ಜಾಗತಿಕ ಬ್ರ್ಯಾಂಡ್‌ಗಳ ‘ತವರುಮನೆ’
ಬಟ್ಟೆಯಿಂದ ಹಿಡಿದು ಊಟದವರೆಗೆ ಭಾರತದ ಜತೆಗೆ ಜಾಗತಿಕ ಬ್ರ್ಯಾಂಡ್‌ಗಳಿಗೆ ಜಿಯೋ ವರ್ಲ್ಡ್ ಪ್ಲಾಜಾ ತವರು ಮನೆಯಂತೆ ರಲಿದೆ. ಬ್ಯಾಲೆನ್ಸಿಯಾಗ, ಜಾರ್ಜಿಯೋ ಅರ್ಮಾನಿ ಕೆಫೆ, ಸ್ಯಾಮ್‌ಸಂಗ್ ಎಕ್ಸ್‌ಪೀರಿಯನ್ಸ್ ಸೆಂಟರ್, ವ್ಯಾಲೆಂಟಿನೋ, ಟೋರಿ ಬರ್ಚ್, ಟಿಫಾನಿ, ಪಾಟರಿ ಬಾರ್ನ್, ಬುಲ್ಗರಿ (ದೇಶಕ್ಕೆ ಇದೇ ಮೊದಲ ಬಾರಿಗೆ ಪ್ರವೇಶ), ಅರ್ಮಾನಿ, ಡಿಯೋರ್ ಸೇರಿ ಸುಮಾರು 66 ಜಾಗತಿಕ ಬ್ರ್ಯಾಂಡ್‌ಗಳು ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ಇರಲಿವೆ.
ದೇಶದ ಖ್ಯಾತ ಡಿಸೈನರ್‌ಗಳಾದ ಮನೀಶ್ ಮಲ್ಹೋತ್ರಾ, ಅಬು ಜಾನಿ-ಸಂದೀಪ್ ಖೋಸ್ಲಾ, ರಾಹುಲ್ ಮಿಶ್ರಾ, ಫಲ್ಗುಣಿ ಸೇರಿ ಗಣ್ಯಾತಿ ಗಣ್ಯರು ಡಿಸೈನ್ ಮಾಡಿದ ಬಟ್ಟೆಗಳಿಗೆ ಇದು ತಾಣವಾಗಿರಲಿದೆ. ಕಮಲದಿಂದ ಸ್ಫೂರ್ತಿ ಪಡೆದು ಇಡೀ ಮಾಲ್ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಕೆಫೆ, ಮಲ್ಟಿಪ್ಲೆಕ್ಸ್, ಬಟ್ಟೆ, ಊಟ ಸೇರಿ ನೂರಾರು ಲಕ್ಸುರಿ ಸೇವೆಗಳು ದೊರೆಯಲಿವೆ.
ಇದನ್ನೂ ಓದಿ: ರಿಲಯನ್ಸ್ ಜಿಯೋದಿಂದ ಬಂತು ಜಿಯೋಸ್ಪೇಸ್ ಫೈಬರ್; ಇದು ಉಪಗ್ರಹ ಆಧರಿತ ಬ್ರಾಡ್ ಬ್ಯಾಂಡ್ ಸೇವೆ
ಮಾಲ್‌ಗೆ ಚಾಲನೆ ನೀಡುವ ಕುರಿತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಿರ್ದೇಶಕಿ ಇಶಾ ಅಂಬಾನಿ ಮಾಹಿತಿ ನೀಡಿದ್ದಾರೆ. “ದೇಶದ ಸಂಸ್ಕೃತಿ, ಬ್ರ್ಯಾಂಡ್‌ಗಳನ್ನು ಪರಿಚಯಿಸುವ ಜತೆಗೆ ಜಗತ್ತಿನ ಎಲ್ಲ ಪ್ರಮುಖ ಬ್ರ್ಯಾಂಡ್‌ಗಳಿಗೆ ಜಿಯೋ ವರ್ಲ್ಡ್ ಪ್ಲಾಜಾ ಸಾಕ್ಷಿಯಾಗಿದೆ. ದೇಶದ ಜನರಿಗೆ ಅತ್ಯುತ್ತಮ ಶಾಪಿಂಗ್, ರಿಟೇಲ್ ಅನುಭವ ಒದಗಿಸಬೇಕು ಎಂಬುದು ನಮ್ಮ ಗುರಿ” ಎಂದು ತಿಳಿಸಿದ್ದಾರೆ.