ಶ್ರೀನಗರ : ಕಾಶ್ಮೀರ ಕಣಿವೆಯಲ್ಲಿ ಮಂಗಳವಾರ ನಡೆದ ಪ್ರತ್ಯೇಕ ಮಿಲಿಟರಿ ಕಾರ್ಯಾಚರಣೆಯಲ್ಲಿ ಒಬ್ಬ ಪಾಕಿಸ್ತಾನಿ ಸೇರಿದಂತೆ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಉಗ್ರರು ಅಡಗಿರುವ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಸಿಆರ್‌ಪಿಎಫ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಉಗ್ರರನ್ನು ಹತ್ಯೆ ಮಾಡಿದ್ದಾರೆ.
ಅನಂತನಾಗ್ ಜಿಲ್ಲೆಯ ಸೆಮ್‌ಥಾನ್ ಗ್ರಾಮದಲ್ಲಿ ಪಾಕಿಸ್ತಾನದ ಉಗ್ರನೊಬ್ಬ ಅಡಗಿದ್ದ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಅಂತೆಯೇ ಆತನಿಗಾಗಿ ಶೋಧ ನಡೆಸುವಾಗ ಗುಂಡಿನ ದಾಳಿ ನಡೆಸಿದ್ದ. ಪ್ರತಿ ದಾಳಿ ನಡೆಸಿದ ಪೊಲೀಸರು ಆತನನ್ನು ಮಟ್ಟಹಾಕಿದ್ದಾರೆ.
ಮಂಗಳವಾರ ಸಂಜೆ ಪುಲ್ವಾಮಾದಲ್ಲಿ ನಡೆದ ಕಾರ್ಯಾಚರಣೆಯ ವೇಳೆಯೂ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಅವರ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ.
ಕಾಶ್ಮೀರದ ಎಡಿಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿ “ಉಗ್ರರು ಭದ್ರತಾ ಪಡೆಗಳ ಮೇಲೆ ಆತ್ಮಾಹುತಿ ದಾಳಿ ನಡೆಸಲು ಯೋಜನೆ ರೂಪಿಸಿದ್ದರು. ಈ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ,” ಎಂದು ಹೇಳಿದ್ದಾರೆ. ಉಗ್ರರೆಲ್ಲರೂ ಲಷ್ಕರೆ ತೈಬಾ ಸಂಪರ್ಕ ಹೊಂದಿದ್ದವರು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ | ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ, ಬ್ಯಾಂಕ್ ಮ್ಯಾನೇಜರ್ ಬರ್ಬರ ಹತ್ಯೆ