Site icon Vistara News

J&K Terrorism: ಜಮ್ಮು ಕಾಶ್ಮೀರದ ಉಗ್ರರಿಗೆ ಇನ್ನು ಅವರ ಜಮೀನೂ ಇಲ್ಲ

jk terrorism

ಹೊಸದಿಲ್ಲಿ: ಜಮ್ಮು- ಕಾಶ್ಮೀರ ಮೂಲದ, ಇಲ್ಲಿ ಭಯೋತ್ಪಾದನೆ ನಡೆಸುತ್ತಿದ್ದ ಹಾಗೂ ಈಗ ವಾಸ್ತವ ಗಡಿರೇಖೆಯಾಚೆಗಿನ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಆಶ್ರಯ ಪಡೆದಿರುವ ನೂರಾರು ಭಯೋತ್ಪಾದಕರು ಇದೀಗ ತಮ್ಮ ಆಸ್ತಿಪಾಸ್ತಿಗಳನ್ನು ಕೂಡ ಕಳೆದುಕೊಳ್ಳಲಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಆಶ್ರಯ ಪಡೆದಿರುವ ಜಮ್ಮು ಮತ್ತು ಕಾಶ್ಮೀರದ ನೂರಾರು ಭಯೋತ್ಪಾದಕರು, ಇದೀಗ ಇಲ್ಲಿದ್ದ ತಮ್ಮ ಆಸ್ತಿಪಾಸ್ತಿಗಳನ್ನು ಕಳೆದುಕೊಳ್ಳಲಿದ್ದಾರೆ. ಯಾಕೆಂದರೆ ಜಮ್ಮು ಕಾಶ್ಮೀರ ಆಡಳಿತ ಅವರನ್ನು “ಘೋಷಿತ ಅಪರಾಧಿಗಳು” ಎಂದು ಘೋಷಿಸಿದೆ ಮತ್ತು ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

“ರಾಷ್ಟ್ರದ್ರೋಹಿಗಳು, ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ಈಗ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ದುಷ್ಕರ್ಮಿಗಳು ಈಗ ಅಲ್ಲಿಂದ ಭಯೋತ್ಪಾದನೆಯನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಜೆ & ಕೆ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಹೇಳಿದ್ದಾರೆ. ದೋಡಾ ಜಿಲ್ಲೆಯಲ್ಲಿ ಈಗಾಗಲೇ ಕ್ರಮ ಪ್ರಾರಂಭವಾಗಿದೆ. ಅಲ್ಲಿ ಪಿಒಕೆಯಲ್ಲಿ ಆಶ್ರಯ ಪಡೆದ 16 ಸ್ಥಳೀಯರನ್ನು “ಘೋಷಿತ ಅಪರಾಧಿಗಳು” ಎಂದು ಘೋಷಿಸಲಾಗಿದೆ.

J&K ಪೋಲಿಸ್‌ನ ಗುಪ್ತಚರ ವಿಭಾಗ ಈಗಾಗಲೇ 4,200ಕ್ಕೂ ಹೆಚ್ಚು ಜನರ ಪಟ್ಟಿಯನ್ನು ಸಿದ್ಧಪಡಿಸಿದೆ. ಅವರಲ್ಲಿ ಹೆಚ್ಚಿನವರು 1990ರಿಂದ PoKನಲ್ಲಿದ್ದಾರೆ. ಅವರ ಆಸ್ತಿಗಳ ವಿವರಗಳನ್ನು ಪಡೆದುಕೊಳ್ಳಲಾಗಿದೆ. “ಘೋಷಿತ ಅಪರಾಧಿ” ಎಂದು ಗೊತ್ತುಪಡಿಸಿದ ಯಾವುದೇ ವ್ಯಕ್ತಿಯ ಆಸ್ತಿಯನ್ನು ಮಾರಾಟ ಮಾಡಲು, ಕೊಳ್ಳಲು ಅಥವಾ ವರ್ಗಾಯಿಸಲಾಗುವುದಿಲ್ಲ. ಇದಲ್ಲದೆ, ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪಿಗಳ ಆಸ್ತಿಗಳನ್ನು ಜಪ್ತಿ ಮಾಡಲಾಗುತ್ತಿದೆ.

1990ರಲ್ಲಿ ಶಸ್ತ್ರಾಸ್ತ್ರ ತರಬೇತಿಗಾಗಿ ಸಾವಿರಾರು ಯುವಕರು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಿಒಕೆ ಸೇರಿದ್ದರು. ಹೆಚ್ಚಿನವರು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಮರಳಿದರು. ಕಳೆದ ಮೂರು ದಶಕಗಳಲ್ಲಿ, ಈ ಪ್ರದೇಶದಲ್ಲಿ ಎನ್‌ಕೌಂಟರ್‌ಗಳಲ್ಲಿ 23,000ಕ್ಕೂ ಹೆಚ್ಚು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಕೊಂದಿದ್ದಾರೆ. 2010ರಲ್ಲಿ, J&K ಸರ್ಕಾರವು PoKನಿಂದ ಹಿಂತಿರುಗಲು ಇಚ್ಛಿಸುವವರಿಗೆ “ಶರಣಾಗತಿ ಮತ್ತು ಪುನರ್ವಸತಿ” ನೀತಿಯನ್ನು ಘೋಷಿಸಿತು. ಸುಮಾರು 300 ಜನ ಹಿಂತಿರುಗಿದ್ದರು. ಆದರೆ 4,000ಕ್ಕೂ ಹೆಚ್ಚು ಜನರು ಇನ್ನೂ ಅಲ್ಲಿನ ಶಿಬಿರಗಳಲ್ಲಿದ್ದಾರೆ ಎಂದು ನಂಬಲಾಗಿದೆ.

ಇದನ್ನೂ ಓದಿ: Terrorism Watch: ಮೋದಿ ಸರ್ಕಾರದ ಅವಧಿಯಲ್ಲಿ ಕಾಶ್ಮೀರದ ಹಿಂಸಾಚಾರ ಏನಾಯ್ತು; ಅಂಕಿಅಂಶ ಹೇಳುವುದೇನು?

Exit mobile version