ಹೊಸದಿಲ್ಲಿ: ದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ (JNU) ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ (JNU election) ಎಡಪಕ್ಷಗಳು (Left Parties) ಜಯಭೇರಿ ಬಾರಿಸಿವೆ. ಮತ ಎಣಿಕೆಯ ಆರಂಭಿಕ ಗಂಟೆಗಳಲ್ಲಿ ಎಬಿವಿಪಿ (ABVP) ಮುಂದಿದ್ದು, ನಂತರ ಅದನ್ನು ಹಿಂದಿಕ್ಕಿದ ಎಡಪಕ್ಷಗಳು ಮತ್ತೊಮ್ಮೆ ವಿಶ್ವವಿದ್ಯಾಲಯದಲ್ಲಿ ತಮ್ಮ ಪ್ರಾಬಲ್ಯವನ್ನು ತೋರಿಸಿದವು.
ವಿದ್ಯಾರ್ಥಿ ಸಂಘದ ಎಲ್ಲಾ ನಾಲ್ಕು ಹುದ್ದೆಗಳನ್ನು ಎಡಪಕ್ಷಗಳು ಬಾಚಿಕೊಂಡಿವೆ. ಆ ಮೂಲಕ ಆರ್‌ಎಸ್‌ಎಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆಯ ಭರವಸೆಯನ್ನು ಹುಸಿಗೊಳಿಸಿವೆ. ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣೆ ಯಾವಾಗಲೂ ವಿವಾದದಿಂದ ಕೂಡಿದ್ದಾಗಿದ್ದು, ಅಂತಾರಾಷ್ಟ್ರೀಯ ಗಮನ ಸೆಳೆಯುತ್ತದೆ.
ಎಬಿವಿಪಿ ಒಂದು ಹಂತದಲ್ಲಿ ಸ್ವೀಪ್‌ನತ್ತ ಸಾಗುತ್ತಿದ್ದುದು ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿತು. ಆದರೆ ಎಣಿಕೆ ಮುಂದುವರೆದಂತೆ ಎಡಪಕ್ಷಗಳು ತಮ್ಮ ಮತಗಳನ್ನು ಹೆಚ್ಚಿಸಿಕೊಂಡವು.
4 ವರ್ಷಗಳ ಕೋವಿಡ್ ವಿರಾಮದ ನಂತರ ನಡೆದ ಚುನಾವಣೆಯಲ್ಲಿ, ಅಖಿಲ ಭಾರತ ವಿದ್ಯಾರ್ಥಿಗಳ ಸಂಘ (ಎಐಎಸ್‌ಎ), ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫೆಡರೇಶನ್ (ಡಿಎಸ್‌ಎಫ್), ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್ (ಎಐಎಸ್‌ಎಫ್) ಒಳಗೊಂಡ ಯುನೈಟೆಡ್ ಲೆಫ್ಟ್ ಮೈತ್ರಿ ಅಭ್ಯರ್ಥಿಗಳು, ಆರ್‌ಎಸ್‌ಎಸ್-ಸಂಯೋಜಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿರುದ್ಧ ಸ್ಪರ್ಧಿಸಿದ್ದರು.
ಎಬಿವಿಪಿಯ ಅಧ್ಯಕ್ಷೀಯ ಅಭ್ಯರ್ಥಿ ಉಮೇಶ್ ಚಂದ್ರ 2,118 ಮತಗಳನ್ನು ಪಡೆದರೆ, ಎಡಪಕ್ಷ ಅಭ್ಯರ್ಥಿ ಧನಂಜಯ್ 3,100 ಮತಗಳನ್ನು ಪಡೆದರು.
ಅಧ್ಯಕ್ಷ
ಧನಂಜಯ್ (ಎಡ)- 3,100
ಉಮೇಶ್ ಚಂದ್ರ ಅಜ್ಮೀರ್ (ಎಬಿವಿಪಿ)- 2,118
ಉಪಾಧ್ಯಕ್ಷ
ಅವಿಜಿತ್ ಘೋಷ್ (ಎಡ)- 2,762
ದೀಪಿಕಾ ಶರ್ಮಾ (ಎಬಿವಿಪಿ)- 1,848
ಪ್ರಧಾನ ಕಾರ್ಯದರ್ಶಿ
ಅರ್ಜುನ್ ಆನಂದ್ (ಎಬಿವಿಪಿ) – 2,4,12
ಪ್ರಿಯಾಂಶಿ ಆರ್ಯ (BAPSA, ಎಡ ಬೆಂಬಲಿತ) – 3,440
ಜಂಟಿ ಕಾರ್ಯದರ್ಶಿ
ಗೋವಿಂದ್ ಡಾಂಗಿ (ABVP) – 2,591
ಮೊ ಸಾಜಿದ್ (ಎಡ) – 3,035
1969ರಲ್ಲಿ ಜೆಎನ್‌ಯು ಸ್ಥಾಪನೆಯಾದಾಗಿನಿಂದ, ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು, ನಿರ್ದಿಷ್ಟವಾಗಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನೊಂದಿಗೆ ಸಂಯೋಜಿತವಾಗಿರುವ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ವಿದ್ಯಾರ್ಥಿ ರಾಜಕೀಯದ ಮೇಲೆ ಬಲವಾದ ಪ್ರಭಾವ ಹೊಂದಿದೆ.
ಅಧ್ಯಕ್ಷೀಯ ಹುದ್ದೆಯಲ್ಲಿ ಎಸ್‌ಎಫ್‌ಐ ಪ್ರಭಾವಿ 22 ಬಾರಿ ಗೆಲುವು ಸಾಧಿಸಿದ್ದರೆ, ಅಖಿಲ ಭಾರತ ವಿದ್ಯಾರ್ಥಿಗಳ ಸಂಘ (ಎಐಎಸ್‌ಎ) 11 ಬಾರಿ ಗೆದ್ದಿದೆ. ಹಲವು ವರ್ಷಗಳಿಂದ ಜೆಎನ್‌ಯುನಲ್ಲಿ ವಿದ್ಯಾರ್ಥಿ ರಾಜಕೀಯವನ್ನು ರೂಪಿಸುವಲ್ಲಿ ಈ ಸಂಸ್ಥೆಗಳು ಬೀರಿದ ಪ್ರಭಾವ ಗಮನಾರ್ಹ. ಜೆಎನ್‌ಯುಎಸ್‌ಯು ಚುನಾವಣೆಗೆ ಅಧ್ಯಕ್ಷೀಯ ಡಿಬೇಟ್ ಮಾರ್ಚ್ 20ರಂದು ನಡೆದಿತ್ತು. ಮಾರ್ಚ್ 22ರಂದು ಮತದಾನ ನಡೆದಿದ್ದು, ಭಾನುವಾರ ಫಲಿತಾಂಶ ಹೊರಬಿದ್ದಿದೆ.
ಜೆಎನ್‌ಯು ಈಗಿನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವಾರು ರಾಜಕಾರಣಿಗಳು, ಸಾರ್ವಜನಿಕ ಕ್ಷೇತ್ರದ ಗಣ್ಯರು, ವಿದ್ವಾಂಸರು, ಗಣ್ಯರು, ಚಿಂತಕರನ್ನು ನೀಡಿದೆ. ಹಾಗೆಯೇ ʼಹಿಂದೂಸ್ತಾನ್ ತುಕ್ಡೇ ತುಕ್ಡೇʼ ಘೋಷಣೆ ಹಾಗೂ ಅದನ್ನು ಬೆಂಬಲಿಸಿದ ವಿದ್ಯಾರ್ಥಿಗಳಿಂದಲೂ ಕುಖ್ಯಾತವಾಗಿದೆ.
ಇದನ್ನೂ ಓದಿ: Shehla Rashid: ಮೋದಿಯ ಉಗ್ರ ವಿರೋಧಿಯಾಗಿದ್ದ ನಾನೀಗ ಕಟ್ಟಾ ಅಭಿಮಾನಿ ಎಂದ ಜೆಎನ್‌ಯು ಹೋರಾಟಗಾರ್ತಿ!