ನವದೆಹಲಿ: “ಮುಸ್ಲಿಂ ಮಹಿಳೆಯು (Muslim Woman) ಕೂಡ ವಿಚ್ಛೇದನದ ಬಳಿಕ ಮಾಜಿ ಪತಿಯಿಂದ ಜೀವನಾಂಶ ಪಡೆಯಬಹುದು” ಎಂಬುದಾಗಿ ಸುಪ್ರೀಂ ಕೋರ್ಟ್ (Supreme Court) ಮಹತ್ವದ ಆದೇಶ ಹೊರಡಿಸಿದೆ. ಇದೇ ವೇಳೆ ಗೃಹಿಣಿಯರ ಹಕ್ಕುಗಳ ಕುರಿತು ಕೂಡ ನ್ಯಾಯಪೀಠವು ಪ್ರಸ್ತಾಪಿಸಿದೆ. “ವಿವಾಹಿತ ಮಹಿಳೆಯು ಗೃಹಿಣಿಯಾಗಿದ್ದರೆ, ಆಕೆಗೆ ಪತಿಯು ಜಂಟಿ ಬ್ಯಾಂಕ್ ಖಾತೆ (Homemakers Rights) ಮಾಡಿಸಬೇಕು. ಆಕೆಗೊಂದು ಎಟಿಎಂ ಕೊಡಬೇಕು. ಕುಟುಂಬ ನಿರ್ವಹಣೆ ಸೇರಿ ಹಲವು ಖರ್ಚು-ವೆಚ್ಚಗಳಿಗೆ ಹಣ ನೀಡಬೇಕು” ಎಂಬುದಾಗಿ ಕೂಡ ತಿಳಿಸಿದೆ.
ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನಾ ಮತ್ತು ಅಗಸ್ಟಿನ್ ಜಾರ್ಜ್ ಮಾಸಿಹ್ ಅವರಿದ್ದ ನ್ಯಾಯಪೀಠವು ಎರಡು ಪ್ರತ್ಯೇಕ ತೀರ್ಪುಗಳಲ್ಲಿ ಹಲವು ಅಂಶಗಳನ್ನು ಪ್ರಸ್ತಾಪಿಸಿದೆ. ಸೆಕ್ಷನ್ 125 ಸಿಆರ್ಪಿಸಿ ಎಲ್ಲ ಮಹಿಳೆಯರಿಗೆ ಅನ್ವಯಿಸುತ್ತದೆ ಎಂದು ನ್ಯಾಯಮೂರ್ತಿ ನಾಗರತ್ನಾ ಹೇಳಿದರು. ತನ್ನ ಪತ್ನಿಗೆ ಜೀವನಾಂಶ ನೀಡುವಂತೆ ತೆಲಂಗಾಣ ಹೈಕೋರ್ಟ್ ನೀಡಿದ ಆದೇಶವನ್ನು ಹೈದರಾಬಾದ್ ಮೂಲದ ಮೊಹಮ್ಮದ್ ಅಬ್ದುಲ್ ಸಮದ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದ. ಬುಧವಾರ ಈ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು, ಮುಸ್ಲಿಂ ಮಹಿಳೆಯರಿಗೂ ವಿಚ್ಛೇದನದ ಬಳಿಕ ಮಾಜಿ ಪತಿಯಿಂದ ಜೀವನಾಂಶ ಪಡೆಯುವ ಹಕ್ಕಿದೆ ಎಂದು ತೀರ್ಪು ನೀಡಿದೆ. ಹಾಗೆಯೇ, ನ್ಯಾಯಪೀಠವು, ಗೃಹಿಣಿಯರ ಹಕ್ಕುಗಳ ಬಗ್ಗೆಯೂ ಪ್ರಸ್ತಾಪಿಸಿತು.
“ಗೃಹಿಣಿಯಾಗಿರುವ ಪತ್ನಿಯು ನನ್ನ ಮೇಲೆ ಅವಲಂಬಿತಳಾಗಿದ್ದಾಳೆ. ಆಕೆಗೆ ನನ್ನ ಬೆಂಬಲದ ಅಗತ್ಯವಿದೆ ಎಂಬುದನ್ನು ಪತಿಯು ಅರಿಯಬೇಕು. ಅದರಲ್ಲೂ, ಹಣಕಾಸು ವಿಷಯದಲ್ಲಿ ಪತಿಯು ಉದಾರಿಯಾಗಿರಬೇಕು. ಪತ್ನಿಗೆ ಹಣಕಾಸು ಸ್ವಾತಂತ್ರ್ಯವನ್ನು ಕೊಡಬೇಕು. ಜಂಟಿ ಬ್ಯಾಂಕ್ ಖಾತೆ ಮಾಡಿಸಿ, ಆಕೆಗೊಂದು ಎಟಿಎಂ ನೀಡಬೇಕು. ಅದರಲ್ಲೂ, ಹೆಣ್ಣುಮಕ್ಕಳು ವೈಯಕ್ತಿಕ ಕಾರಣಗಳಿಗಾಗಿ ಮಾಡುವ ಖರ್ಚುಗಳಿಗೆ ಪತಿಯು ಒಂದಷ್ಟು ಹಣ ಕೊಡಬೇಕು. ಪ್ರತಿ ಬಾರಿಯೂ ಮಹಿಳೆಯು ಕೈಚಾಚುವಂತಹ ಪರಿಸ್ಥಿತಿಯು ಮನೆಯಲ್ಲಿ ಇರಬಾರದು” ಎಂದು ನ್ಯಾ.ನಾಗರತ್ನಾ ಅವರು ಹೇಳಿದರು.
“ಗೃಹಿಣಿಯಾಗಿರುವವರಿಗೆ ಹಣಕಾಸು ಸ್ವಾತಂತ್ರ್ಯ ನೀಡುವುದರಿಂದ ಅವರಿಗೆ ಮನೆಯಲ್ಲಿ ಹೆಚ್ಚು ಸುರಕ್ಷತೆಯ ಭಾವನೆ ಮೂಡುತ್ತದೆ. ಹಾಗಾಗಿ, ಮನೆಯ ಖರ್ಚಿನ ಜತೆಗೆ ಆಕೆಯ ವೈಯಕ್ತಿಕ ಖರ್ಚುಗಳಿಗೂ ಪತಿಯು ಹಣ ಕೊಡಬೇಕು. ಪತಿಯ ಹಣದ ಮೇಲೆ ಅವಲಂಬಿತಳಾದ ಮಹಿಳೆಯ ಮನಸ್ಥಿತಿಯನ್ನು ಅರಿಯಬೇಕು. ಹಾಗಾದಾಗ ಮಾತ್ರ ಮಹಿಳೆಯು ನೆಮ್ಮದಿಯಿಂದ ಇರಲು ಸಾಧ್ಯ” ಎಂಬುದಾಗಿ ಕೋರ್ಟ್ ತಿಳಿಸಿದೆ.
ಇದನ್ನೂ ಓದಿ: Supreme Court: ವಿಚ್ಛೇದಿತ ಮುಸ್ಲಿಂ ಮಹಿಳೆಯರು ಜೀವನಾಂಶ ಕೇಳಬಹುದು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು