ಧಾರವಾಡ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಧಾರವಾಡ ಕ್ಷೇತ್ರದ ಅಭ್ಯರ್ಥಿ ಪ್ರಲ್ಹಾದ್ ಜೋಶಿ (pralhad joshi) ಪರ ಗುರುವಾರ ಮಹಾರಾಷ್ಟ್ರ ಸಿಎಂ ಹಾಗೂ ಶಿವಸೇನೆ (Eknath Shinde) ಮುಖ್ಯಸ್ಥ ಏಕನಾಥ ಶಿಂಧೆ ಅವರು ಪ್ರಚಾರ ಭಾಷಣೆ ಮಾಡಿದರು. ನಗರದ ಮೃತ್ಯುಂಜಯ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಮೋದಿ (Narendra Modi) ನೀಡುವ ಗ್ಯಾರಂಟಿ ಪಡೆಯಲು ಪ್ರಲ್ಹಾದ್ ಜೋಶಿಯನ್ನು ಗೆಲ್ಲಿಸಿ ಎಂದು ಕರೆಕೊಟ್ಟರು.
ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಸಿಎಂ ಶಿಂಧೆ ಅವರು, ಧಾರವಾಡದ ಜನತೆಯನ್ನು ಭೇಟಿ ಮಾಡಿದ್ದು ಖುಷಿ ತಂದಿದೆ ಎಂದು ಹೇಳಿದರು. ಛತ್ರಪತಿ ಶಿವಾಜಿ ಅವರಿಗೂ ಧಾರವಾಡಕ್ಕೂ ಸಂಬಂಧ ಇದೆ. ಪುಣೆ ಹಾಗೂ ಧಾರವಾಡ ಸಾಂಸ್ಕೃತಿಕ, ಶೈಕ್ಷಣಿಕ ಕೇಂದ್ರ ಎಂಬುದಾಗಿ ನುಡಿದರು.
ದೇಶದ ವಿಕಾಸ ಹಾಗೂ ಪ್ರಗತಿಯ ಚುನಾವಣೆ ಇದಾಗಿದೆ. ಜೋಶಿ ಅವರು 5ನೆಯ ಬಾರಿ ಸ್ಪರ್ದೆ ಮಾಡಿದ್ದಾರೆ. ನಿಮ್ಮ ಆಶೀರ್ವಾದದಿಂದ ಮತ್ತೊಮ್ಮೆ ಅವರು ಗೆಲ್ಲಬೇಕು. ಆ ಮೂಲಕ ಮೋದಿಯವರ ಕೈ ಬಲಪಡಿಸಬೇಕು. ನಾನು ಕಾರ್ಯಕರ್ತನಾಗಿ ಕೆಲಸ ಮಾಡಿ ಸಿಎಂ ಆಗಿದ್ದೇನೆ. ಈಗಲೂ ಸಹ ನಾನು ಕಾರ್ಯಕರ್ತನಾಗಿಯೇ ಇದ್ದೇನೆ. ನೀವೆಲ್ಲ ಭಾಗ್ಯವಂತರು ಯಾಕೆಂದರೆ ಜೋಶಿ ಆದರ್ಶ ಸಂಸದರು. ಅವರು ಮೋದಿಯವರ ಹತ್ತಿರವೇ ಇರುವ ಸಂಸದರಾಗಿದ್ದಾರೆ ಎಂದು ನುಡಿದರು.
ಕಾಂಗ್ರೆಸ್ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಅವರು ಗೆಲ್ಲುವ ಮೊದಲು ಏನೇನೋ ಕೊಡ್ತೀನಿ ಅಂಥ ಹೇಳಿದ್ದರು. ಆದರೆ ಈಗ ನಮ್ಮಲ್ಲಿ ದುಡ್ಡಿಲ್ಲ ಅಂತಾರೆ. ಆದ್ರೆ ದೇಶದಲ್ಲಿ ಚಾಲ್ತಿ ಇರೋದು ಮೋದಿ ಗ್ಯಾರಂಟಿ ಎಂದು ಅವರು ಹೇಳಿದರು.
ಇದನ್ನೂ ಓದಿ: K. Annamalai : ಪ್ರಚಾರ ಸಭೆಯಲ್ಲಿ ಅಣ್ಣಾಮಲೈ ಹೊಗಳಿದಾಗ ಕಣ್ಣೀರು ಹಾಕಿದ ವಿಜಯಪುರ ಅಭ್ಯರ್ಥಿ ಜಿಗಜಿಣಗಿ
ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ನಾವು 5ನೆಯ ಪಡೆಯಲು ಮೋದಿ ಕಾರಣ. ದೇಶದಲ್ಲಿ ಮೋದಿ ಅಭಿವೃದ್ಧಿ ಮಾಡಿದ್ದಾರೆ. ಒಂದೇ ಒಂದು ರಜೆ ಸಹ ಪಡೆಯದೆ ಕೆಲಸ ಮಾಡಿದ್ದಾರೆ. ಸ್ವಲ್ಪ ಚಳಿ ಆದರೆ ವಿದೇಶಕ್ಕೆ ತೆರಳುವವರು ಬೇರೆ ಪಾರ್ಟಿಯ ಯುವರಾಜ (ರಾಹುಲ್ ಗಾಂಧಿ) ಎಂದು ಶಿಂಧೆ ಹೇಳಿದರು.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ತ್ರಿವರ್ಣ ದ್ವಜ ಹಾರಿಸಿದ ಕೀರ್ತಿ ಜೋಶಿ ಅವರಿಗೆ ಇದೆ. ಪಾಕಿಸ್ತಾನದವರು ಮೊದಲು ನಮ್ಮ ದೇಶದಲ್ಲಿ ಬಾಂಬ್ ಹಾಕುತ್ತಿದ್ದರು. ಈಗ ಭಾರತ ಮೋದಿ ನೇತೃತ್ವದಲ್ಲಿ ಪಾಕ್ ನ ಒಳಗೆ ಹೊಕ್ಕು ಸದೆಬಡಿಯುತ್ತಿದೆ ಎಂದು ಹೇಳಿದರು.
ದ್ವಾರಕಾ ನಗರದಲ್ಲಿ ಸಮುದ್ರದ ಒಳಗೆ ಹೋಗಿ ಮೋದಿ ದೇಶದ ಒಳಿತಿಗೆ ಪ್ರಾರ್ಥನೆ ಮಾಡಿದ್ದಾರೆ. ಮೋದಿ ದೇಶದ ಕೆಲಸಕ್ಕಾಗಿ ಅವರು ಇದ್ದಾರೆ. ಕೋಟ್ಯಾನುಕೋಟಿ ರಾಮನ ಭಕ್ತರ ಸಂಕಲ್ಪ ಪೂರ್ಣ ಆಗಿದೆ. ಈಗ ಎಲ್ಲರೂ ಖುಷಿಯಿಂದ ಇದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮಾಡಿದ ಚಂದ್ರಯಾನ ಫೇಲ್ ಆಗಿವೆ. ಪದೇ ಪದೇ ತಪ್ಪುಗಳನ್ನು ಮಾಡಿದ್ದಾರೆ. ಆದಾಗ್ಯೂ ಇಂಡಿಯಾ ಬಣ ಮೋದಿಯನ್ನು ಸೋಲಿಸುವುದಕ್ಕೆ ನಿಂತಿದೆ, ಅದು ಅದು ಎಂದಿಗೂ ಆಗುವುದಿಲ್ಲ ಎಂದು ನುಡಿದರು.