Site icon Vistara News

Justin Trudeau: ಟ್ರುಡೊ ಆರೋಪ ಅಸಂಬದ್ಧ; ಕೆನಡಾವೇ ಭಾರತ ವಿರೋಧಿಗಳಿಗೆ ಆಶ್ರಯ ನೀಡಿದೆ: ಭಾರತ ಕಟು ಪ್ರತಿಕ್ರಿಯೆ

justin trudeau

ಹೊಸದಿಲ್ಲಿ: ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ (Khalistan terrorist) ಹರ್ದೀಪ್ ಸಿಂಗ್‌ ನಿಜ್ಜರ್‌ (Hardeep Singh Nijjar) ಹತ್ಯೆಯ ಹಿನ್ನೆಲೆಯಲ್ಲಿ ಭಾರತದ ರಾಯಭಾರಿಯನ್ನು (India’s diplomat) ಹೊರಹಾಕಿರುವ ಕ್ರಮವನ್ನು ಭಾರತ ವಿದೇಶಾಂಗ ಇಲಾಖೆ ಕಟುವಾದ ಶಬ್ದಗಳಲ್ಲಿ ಖಂಡಿಸಿದೆ. ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ (Justin Trudeau) ಹಾಗೂ ಅಲ್ಲಿನ ವಿದೇಶಾಂಗ ಸಚಿವರು ನೀಡಿರುವ ಹೇಳಿಕೆಗಳು ಅಸಂಬದ್ಧವಾಗಿವೆ ಹಾಗೂ ದುರುದ್ದೇಶಪೂರಿತವಾಗಿವೆ ಎಂದಿದೆ.

ಸೆ. 18ರಂದು ಕೆನಡಾದ ಸಂಸತ್ತಿನಲ್ಲಿ ಮಾತನಾಡಿದ ಜಸ್ಟಿನ್ ಟ್ರುಡೊ, ಇದೇ ವರ್ಷ ಜೂನ್‌ನಲ್ಲಿ ನಡೆದಿದ್ದ ಹರ್ದೀಪ್ ಸಿಂಗ್ ಹತ್ಯೆಯ ಹಿಂದೆ ಭಾರತದ ಕೈವಾಡ ಇರುವುದನ್ನು ಕೆನಡಾದ ಸರ್ಕಾರಿ ಏಜೆನ್ಸಿಗಳು ಪತ್ತೆ ಹಚ್ಚಿವೆ ಎಂದಿದ್ದರು. ಇದಾದ ಬಳಿಕ ಅಲ್ಲಿದ್ದ ಭಾರತೀಯ ರಾಯಭಾರಿಯನ್ನು ಹೊರಹಾಕಲಾಗಿದೆ ಎಂದು ಅಲ್ಲಿನ ವಿದೇಶಾಂಗ ಸಚಿವರು ಹೇಳಿದ್ದರು.

ಟ್ರುಡೊ ಅವರ ಈ ಹೇಳಿಕೆಯನ್ನು ತೀಕ್ಷ್ಣ ಶಬ್ದಗಳಿಂದ ಖಂಡಿಸಿರುವ ಭಾರತದ ವಿದೇಶಾಂಗ ಸಚಿವಾಲಯ, ʼʼಕೆನಡಾದಲ್ಲಿ ನಡೆದಿರುವ ಕೊಲೆ ಪ್ರಕರಣಕ್ಕೂ ಅಲ್ಲಿ ನಡೆಯುವ ವಿಧ್ವಂಸಕ ಕೃತ್ಯಗಳಿಗೂ ಭಾರತದ ಹೆಸರನ್ನು ತಳುಕು ಹಾಕಿ ಕೆನಡಾ ಪ್ರಧಾನಿ ಹಾಗೂ ಅಲ್ಲಿನ ವಿದೇಶಾಂಗ ಸಚಿವರು ನೀಡಿರುವ ಹೇಳಿಕೆಗಳು ಅಸಂಬದ್ಧವಾಗಿವೆ ಹಾಗೂ ದುರುದ್ದೇಶಪೂರಿತವಾಗಿವೆ. ನಮ್ಮದು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟಿರುವ ದೇಶವಾಗಿದ್ದು, ಕಾನೂನು- ಸುವ್ಯವಸ್ಥೆಯನ್ನು ಪಾಲಿಸುವ ಬದ್ಧತೆಯನ್ನು ಹೊಂದಿರುವ ರಾಷ್ಟ್ರವಾಗಿದೆʼʼ ಎಂದು ಹೇಳಿದೆ.

ಕೆನಡಾ ಪ್ರಧಾನಿ ಈ ಹಿಂದೆಯೂ ನಮ್ಮ ಪ್ರಧಾನಿ ವಿರುದ್ಧ ಇಂಥದ್ದೇ ಆರೋಪ ಮಾಡಿದ್ದರು. ಅವೆಲ್ಲವನ್ನೂ ಜತೆಗೆ ಈಗ ಮಾಡಿರುವ ಆರೋಪವನ್ನೂ ನಾವು ತಿರಸ್ಕರಿಸುತ್ತಿದ್ದೇವೆ. ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂಥ ಹಾಗೂ ಅಖಂಡ ಭಾರತವನ್ನು ವಿಭಜನೆ ಮಾಡುವ ಪ್ರತ್ಯೇಕತಾವಾದಿ ಶಕ್ತಿಗಳಿಗೆ ಕೆನಡಾ ಸರ್ಕಾರ ಆಶ್ರಯ ನೀಡಿದೆ. ಈ ಬಗ್ಗೆ ಭಾರತ, ಮೊದಲಿನಿಂದಲೂ ಕೆನಡಾ ದೇಶವನ್ನು ಎಚ್ಚರಿಸುತ್ತಾ ಬಂದಿದ್ದರೂ ಭಾರತದ ಕಾಳಜಿಯನ್ನು ಕೆನಡಾ ಅವಗಣನೆ ಮಾಡುತ್ತಲೇ ಬಂದಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ, ಕೆನಡಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಕೆನಡಾದಲ್ಲಿ ಭಾರತ ವಿರೋಧಿ ಶಕ್ತಿಗಳಿಗೆ ಆಶ್ರಯ ಕೊಟ್ಟಿರುವುದಷ್ಟೇ ಅಲ್ಲ, ಅಲ್ಲಿನ ರಾಜಕಾರಣಿಗಳೂ ಇಂಥ ಶಕ್ತಿಗಳಿಗೆ ಬಹಿರಂಗವಾಗಿಯೇ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಇದು ನಿಜಕ್ಕೂ ಖೇದಕರ ಹಾಗೂ ತೀವ್ರ ಆಕ್ಷೇಪಾರ್ಹ ವಿಚಾರ. ಕೆನಡಾ ಅನೇಕ ಅಪರಾಧಗಳ ತವರೂರಾಗಿದೆ. ಅಲ್ಲಿ ಕೊಲೆಗಳು, ಮಾನವ ಕಳ್ಳಸಾಗಣೆ ಸೇರಿದಂತೆ ಅನೇಕ ಸಂಘಟಿತ ಅಪರಾಧಗಳು ನಡೆಯುತ್ತಲೇ ಇವೆ. ಅಂಥ ಎಲ್ಲಾ ಕುಕೃತ್ಯಗಳಿಗೆ ಭಾರತದ ನಂಟು ಕಲ್ಪಿಸುವುದು ಸರಿಯಲ್ಲ. ಇಂಥ ಯಾವುದೇ ಪ್ರಯತ್ನಗಳನ್ನು ಭಾರತ ಖಡಾಖಂಡಿತವಾಗಿ ನಿರಾಕರಿಸುತ್ತದೆ ಎಂದು ವಿದೇಶಾಂಗ ಇಲಾಖೆಯು ಕಟುಶಬ್ದಗಳಲ್ಲಿ ಹೇಳಿದೆ.

Exit mobile version