ಹೈದರಾಬಾದ್: ತಮ್ಮ ನಿವಾಸದಲ್ಲಿ ಬಿದ್ದು ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (K Chandrashekar Rao-KCR) ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಶನಿವಾರ ತಿಳಿಸಿದ್ದಾರೆ. ಡಿಸೆಂಬರ್ 8ರಂದು ಜಾರಿ ಬಿದ್ದಿದ್ದ ಚಂದ್ರಶೇಖರ್ ರಾವ್ ಅವರನ್ನು ಹೈದರಾಬಾದ್‌ನ ಯಶೋದಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶಸ್ತ್ರಚಿಕಿತ್ಸೆಯ ನಂತರ ಮಾಹಿತಿ ನೀಡಿದ ವೈದ್ಯರು, ”69 ವರ್ಷದ ನಾಯಕ ಚಂದ್ರಶೇಖರ್ ರಾವ್ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಈಗ ನೋವಿನಿಂದ ಮುಕ್ತರಾಗಿದ್ದಾರೆ ಮತ್ತು ದಿನವಿಡೀ ವಿಶ್ರಾಂತಿ ಪಡೆದಿದ್ದಾರೆ. ವೈದ್ಯರ ತಂಡ ನಿಗಾ ಇರಿಸಿದೆ” ಎಂದು ತಿಳಿಸಿದ್ದಾರೆ. ಅಲ್ಲದೆ ಕೆಸಿಆರ್ ಸ್ವಲ್ಪ ಹೊತ್ತು ನಡೆದಾಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಅಲ್ಲದೆ ಅವರ ತ್ವರಿತ ಚೇತರಿಕೆಗೆ ಸಹಾಯ ಮಾಡಲು ವ್ಯಾಯಾಮಗಳ ವೇಳಾಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ.
ಕೆಸಿಆರ್ ಅವರ ಆರೋಗ್ಯದ ಪ್ರಗತಿಯ ಬಗ್ಗೆ ತಮಗೆ ತೃಪ್ತಿ ಇದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ. ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮುಖ್ಯಸ್ಥ ಕೆಸಿಆರ್ ಡಿಸೆಂಬರ್ 8ರಂದು ಎರ್ರವಳ್ಳಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಜಾರಿ ಬಿದ್ದಿದ್ದರು ಎಂದು ಆಪ್ತ ಮೂಲಗಳು ತಿಳಿಸಿವೆ. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ಡಿಸೆಂಬರ್ 3ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅವರು ಎರ್ರವೆಲ್ಲಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ತಂಗಿದ್ದರು. ಪಕ್ಷದ ಮುಖಂಡರು ಮತ್ತು ಸಾರ್ವಜನಿಕರನ್ನು ಭೇಟಿಯಾಗುತ್ತಿದ್ದರು.
ವಿಧಾನಸಭಾ ಚುನಾವಣೆಯಲ್ಲಿ ಸೋಲು
ಇತ್ತೀಚೆಗೆ ಹೊರಬಿದ್ದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕೆಸಿಆರ್ ನೇತೃತ್ವದ ಬಿಆರ್‌ಎಸ್‌ಗೆ ಭಾರೀ ಮುಖಭಂಗವಾಗಿತ್ತು. 2014ರಲ್ಲಿ ರಚನೆಯಾದ ತೆಲಂಗಾಣದಲ್ಲಿ ಇದೇ ಮೊದಲ ಬಾರಿಗೆ ಬಿಆರ್‌ಎಸ್ ಹೊರತಾದ ಸರ್ಕಾರ ರಚನೆಯಾಗಿದೆ. ನವೆಂಬರ್ 30ರಂದು ತೆಲಂಗಾಣದಲ್ಲಿ ಚುನಾವಣೆ ನಡೆದಿದ್ದು, ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿತ್ತು. 119 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 65 ಸ್ಥಾನಗಳನ್ನು ಗೆದ್ದರೆ, ಆಡಳಿತಾರೂಢ ಬಿಆರ್‌ಎಸ್ 39 ಸ್ಥಾನವನ್ನು ಗೆದ್ದು ಸೋಲೊಪ್ಪಿಕೊಂಡಿತು. ಇನ್ನು ಬಿಜೆಪಿ 8 ಮತ್ತು ಎಐಎಂಐಎ 7 ಸ್ಥಾನಗಳನ್ನು ಗೆದ್ದುಕೊಂಡಿವೆ. ಕೆ ಚಂದ್ರಶೇಖರ ರಾವ್ (KCR) ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆಲಂಗಾಣದ ಎರಡನೇ ಮುಖ್ಯಮಂತ್ರಿಯಾಗಿ ಹಾಗೂ ಮೊದಲ ಕಾಂಗ್ರೆಸ್ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಡಿಸೆಂಬರ್ 7ರಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇದನ್ನೂ ಓದಿ: K Chandrasekhar Rao: ರೇವಂತ್ ರೆಡ್ಡಿ ಸಿಎಂ ಆದ ದಿನವೇ ಜಾರಿ ಬಿದ್ದು ಸೊಂಟ ಮುರಿದುಕೊಂಡ ಕೆಸಿಆರ್
ಸೋಲಿಗೆ ಕಾರಣ ಏನು?
ಕೆಸಿಆರ್ ವ್ಯಾಪಕವಾದ ಚುನಾವಣಾ ಪ್ರಚಾರ ನಡೆಸಿದ್ದರು. ಪಕ್ಷವು ಬಡವರಿಗಾಗಿ ಮಾಡಿದ ತನ್ನ ಕಲ್ಯಾಣ ಯೋಜನೆಗಳನ್ನು ಹೈಲೈಟ್ ಮಾಡಲು ಪ್ರಯತ್ನಿಸಿತು. ಆದರೆ ಕೆಲವು ಯೋಜನೆಗಳ ಅನುಷ್ಠಾನ, ಹಣ ಹಂಚಿಕೆಯಲ್ಲಿ ತಾರತಮ್ಯ ಮತ್ತು ಭ್ರಷ್ಟಾಚಾರದ ಆರೋಪ ಕೇಳಿಬಂತು. ಪರಿಣಾಮ ಕೆಸಿಆರ್ ಹಲವು ಶಾಸಕರಿಗೆ ಚುನಾವಣಾ ಟಿಕೆಟ್ ನೀಡಿರಲಿಲ್ಲ. ಪರಿಣಾಮ ಈ ಪೈಕಿ ಬಹುತೇಕ ಸ್ಥಾನಗಳು ಕಾಂಗ್ರೆಸ್ ಪಾಲಾಗಿದೆ. ಇದೀಗ ಅಧಿಕಾರಕ್ಕೂ ಬಂದಿದೆ.