Site icon Vistara News

K.S. Rajanna: ಛಲಬಿಡದ ಸಾಧಕನಿಗೆ ಪದ್ಮಶ್ರೀ ಗರಿ; ಅಂಗವೈಕಲ್ಯ ಮೆಟ್ಟಿನಿಂತ ಕನ್ನಡಿಗನಿಗೆ ದೇಶದ ನಮನ- ವೀಡಿಯೋ ವೈರಲ್‌

K S Rajanna

ನವದೆಹಲಿ: ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧಿಸುವ ಮನೋಬಲ, ಆತ್ಮವಿಶ್ವಾಸ, ದೃಢವಾದ ನಂಬಿಕೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ವ್ಯಕ್ತಿಯೇ ಸಾಕ್ಷಿ. ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಅವರು ಈ ಸಾಲಿನ ನಾಗರಿಕ ಪದ್ಮ ಪ್ರಶಸ್ತಿ(Padma Award)ಯನ್ನು ಪ್ರದಾನ ಮಾಡಿದರು. ಅಲ್ಲಿ ಪದ್ಮಶ್ರೀ ಪ್ರಶಸ್ತಿ(Padmashri Award) ಸ್ವೀಕರಿಸಲು ಬಂದಿದ್ದ ಈ ವ್ಯಕ್ತಿಯನ್ನು ಕಂಡು ಒಂದು ಕ್ಷಣ ಅಲ್ಲಿದ್ದ ಗಣ್ಯರು ಭಾವುಕರಾದ್ದದ್ದು ನಿಜ. ಬಾಲ್ಯದಲ್ಲಿ ಪೋಲಿಯೋದಿಂದ ಎರಡೂ ಕೈ ಕಾಲುಗಳನ್ನು ಕಳೆದುಕೊಂಡರೂ ಛಲ ಬಿಡದೇ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದು ಉದ್ಯಮಿಯಾಗಿ ಹಲವು ಅಂಗವಿಕಲರಿಗೆ ಉದ್ಯೋಗ ನೀಡಿ, ಪ್ಯಾರಾ-ಒಲಂಪಿಕ್ಸ್ ನಲ್ಲಿ ಪಾಲ್ಗೊಂಡು ದೇಶಕ್ಕೆ ಚಿನ್ನದ ಪದಕದ ಗರಿಯನ್ನೂ ತಂದಿದ್ದ ಈ ವ್ಯಕ್ತಿ ಬೇರೆ ಯಾರೂ ಅಲ್ಲ ಹೆಮ್ಮೆಯ ಕನ್ನಡಿಗ ಕೆ.ಎಸ್.ರಾಜಣ್ಣ(K.S. Rajanna)

ಗುರುವಾರ ನಡೆದ ಪದ್ಮ ಪ್ರಶಶ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ವಿಕಲಚೇತನರ ಕಲ್ಯಾಣಕ್ಕಾಗಿ ಶ್ರಮಿಸಿದ ವಿಕಲಚೇತನ ಸಾಮಾಜಿಕ ಕಾರ್ಯಕರ್ತ ಕೆ.ಎಸ್.ರಾಜಣ್ಣ ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಲು ವೇದಿಕೆಗೆ ತೆರಳುವ ಮುನ್ನ ರಾಜಣ್ಣ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಬಂದು ಅವರ ಕೈ ಕುಲುಕಿ, ಮಾತನಾಡಿದರು.

ರಾಜಣ್ಣ ನಂತರ ಪಕ್ಕದಲ್ಲೇ ಕುಳಿತಿದ್ದ ಅಮಿತ್‌ ಅವರ ಜೊತೆಯೂ ಮಾತನಾಡಿ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಆಸನದ ಕಡೆಗೆ ಸಾಗಿದರು. ಪ್ರಶಸ್ತಿ ಸ್ವೀಕಾರಕ್ಕೂ ಮುನ್ನ ರಾಷ್ಟ್ರಪತಿಗಳಿಗೆ ತಲೆಬಾಗಿ ನಮಸ್ಕರಿಸಿದರು. ಇದಾದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಗೌರವ ಸ್ವೀಕರಿಸಿದರು. ಈ ವೇಳೆ ಅಲ್ಲಿ ನೆರೆದಿದ್ದ ಗಣ್ಯರು ಚಪ್ಪಾಳೆ ಹೊಡೆದು ಅವರನ್ನು ಅಭಿನಂದಿಸಿದರು. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗಿದ್ದು, ನೋಡುಗರು ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜಣ್ಣ ಹಿನ್ನೆಲೆ ಏನು?

ಕೇವಲ 11 ತಿಂಗಳ ಮಗುವಾಗಿದ್ದಾಗ ಮಹಾಮಾರಿ ಪೋಲಿಯೋದಿಂದ ತಮ್ಮ ಎರಡೂ ಕೈಗಳು ಮತ್ತು ಕಾಲುಗಳನ್ನು ಕಳೆದುಕೊಂಡಿದ್ದ ರಾಜಣ್ಣ, ತಮ್ಮ ಕೊರತೆಗಳ ಬಗ್ಗೆ ಕುಗ್ಗದೇ ಅದನ್ನೇ ಸವಾಲಾಗಿ ಸ್ವೀಕರಿಸಿ ಮೆಕ್ಯಾನಿಕಲ್ ಎಂಜಿನಿಯರ್ ಪದವಿ ಪಡೆದ ಅವರು ಉದ್ಯಮಿಯಾದರು. ತಮ್ಮ ರೀತಿಯೇ ಸಮಾಜದಲ್ಲಿ ಅಂಗವೈಕಲ್ಯಕ್ಕೆ ತುತ್ತಾಗಿ ಸಂಕಷ್ಟ ಎದುರಿಸುತ್ತಿರವ ಅನೇಕರಿಗೆ ಕೆಲಸ ನೀಡುವ ಮೂಲಕ ವಿಭಿನ್ನರಾಗಿ ನಿಂತವರು ರಾಜಣ್ಣ. 2002ರ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ರಾಜಣ್ಣ ಅವರು ಡಿಸ್ಕಸ್ ಥ್ರೋದಲ್ಲಿ ಚಿನ್ನ ಹಾಗೂ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದರು.

ಇದನ್ನೂ ಓದಿ: CAA: ಕೇಂದ್ರ ಸೂಚನೆ ಕೊಟ್ಟ ಕೂಡಲೇ ಮಧ್ಯಪ್ರದೇಶದಲ್ಲಿ ಸಿಎಎ ಜಾರಿ; ಸಿಎಂ ಮೋಹನ್‌ ಯಾದವ್‌

ಸಕ್ಕರೆ ಸವಿದಷ್ಟೇ ಖುಷಿಯಾಯ್ತು ಎಂದ ರಾಜಣ್ಣ

ಇನ್ನು ಪದ್ಮ ಪ್ರಶಸ್ತಿ ಪಡೆದಿರುವ ಬಗ್ಗೆ ರಾಜಣ್ಣ, ಮಂಡ್ಯ ಜಿಲ್ಲೆ ಮೂಲದವನಾದ ನನಗೆ ಈ ಪ್ರಶಸ್ತಿಯು ಸಕ್ಕರೆ ತಿಂದಂತೆ ಸಿಹಿ ಎನಿಸುತ್ತಿದೆ. ದೈಹಿಕ ನ್ಯೂನತೆ ಹೊಂದಿರುವ ವ್ಯಕ್ತಿಗಳಿಗೆ ರಾಜಕೀಯ ಮೀಸಲಾತಿ ಇಲ್ಲ. ಈ ಪ್ರಶಸ್ತಿಯು ವಿಧಾನ ಪರಿಷತ್ ಅಥವಾ ರಾಜ್ಯಸಭೆಗೆ ಸದಸ್ಯರಾಗಿ ಅಂಗವೈಕಲ್ಯವುಳ್ಳ ವ್ಯಕ್ತಿಯನ್ನು ನೇಮಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಪ್ರೇರಣೆ ನೀಡಲಿದೆ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.

Exit mobile version