Site icon Vistara News

Kangana Ranaut: ಕಂಗನಾಗೆ ಕಪಾಳಮೋಕ್ಷ ಮಾಡಿದ್ದ ಕಾನ್‌ಸ್ಟೇಬಲ್‌ ಬೆಂಗಳೂರಿಗೆ ವರ್ಗಾವಣೆ?

Kangana Ranaut

ಹೊಸದಿಲ್ಲಿ: ಬಿಜೆಪಿ ಸಂಸದೆ(BJP MP), ಬಾಲಿವುಡ್‌ ನಟಿ ಕಂಗನಾ ರಣಾವತ್​ (Kangana Ranaut)ಗೆ ಕಪಾಳಮೋಕ್ಷ ಮಾಡಿದ್ದ ಕಾನ್‌ಸ್ಟೇಬಲ್‌ ಕುಲ್ವಿಂದರ್‌ ಕೌರ್‌ರನ್ನು ಬೆಂಗಳೂರಿಗೆ ವರ್ಗಾವಣೆ(Transfer) ಮಾಡಲಾಗಿದೆ ಎಂದು ವರದಿಯಾಗಿದೆ. ಘಟನೆ ಬಳಿಕ ಕುಲ್ವಿಂದರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ವಿಚಾರಣೆ ನಡೆಯುತ್ತಿರುವ ಹಿನ್ನೆಲೆ ಕುಲ್ವಿಂದರ್ ಇನ್ನು ಸೇವೆಗೆ ಮರಳಿಲ್ಲ. ಆದರೆ ಇದೀಗ ಆಕೆ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾಳೆ ಎಂಬ ಸುದ್ದಿ ಹರಿದಾಡುತ್ತಿದೆ.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಜೆಪಿ ಸಂಸದೆ ಕಂಗನಾ ರಣಾವತ್‌ ಮೇಲೆ ಹಲ್ಲೆ ನಡೆಸಿದ್ದ CISF ಕುಲ್ವಿಂದರ್‌ ಕೌರ್‌ ಈಗಲೂ ಅಮಾನತಿನಲ್ಲಿದ್ದಾರೆ. ಆಕೆಯ ಮೇಲಿನ ತನಿಖೆ ಮುಂದುವರೆದಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದೆ.

ಘಟನೆ ವಿವರ:

ಚಂಡೀಗಢ ಏರ್‌ಪೋರ್ಟ್‌ನಲ್ಲಿ (Chandigarh Airport) ಕಂಗನಾ ರಣಾವತ್ ಅವರ ಮೇಲೆ ಕುಲ್ವಿಂದರ್ ಆಕ್ರಮಣಕಾರಿಯಾಗಿ ದಾಳಿ ನಡೆಸಿ ಕಪಾಳಕ್ಕೆ ಏಟು ನೀಡಿದ್ದರು. ದೆಹಲಿ ರೈತರ ಪ್ರತಿಭಟನೆಯನ್ನು ಟೀಕಿಸಿದ್ದಕ್ಕೆ ಹೊಡೆದಿದ್ದೇನೆ ಎಂದು ಕುಲ್ವಿಂದರ್ ಹೇಳಿಕೊಂಡಿದ್ದರು. ಚಂಢೀಗಡದಿಂದ ದಿಲ್ಲಿಗೆ ವಿಮಾನ ಹತ್ತುವ ವೇಳೆ ಈ ಘಟನೆ ನಡೆದಿದ್ದು, ಇನ್ನು ಕೌರ್‌ ವಿರುದ್ಧ ಕೇಸ್‌ ದಾಖಲಿಸಲಾಗಿದೆ. ಈ ನಿಟ್ಟಿನಲ್ಲಿ ಆಕೆಯನ್ನು ಅರೆಸ್ಟ್‌ ಮಾಡಲಾಗಿದೆ.

ನರೇಂದ್ರ ಮೋದಿ ಸರ್ಕಾರವು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾನೂನುಗಳನ್ನ ಜಾರಿಗೆ ತರಲು ಮುಂದಾದಾಗ ಅದರ ವಿರುದ್ಧ ಆಂದೋಲನ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ‘ಖಲಿಸ್ತಾನಿ ಬೆಂಬಲಿಗರು’ ಎಂದು ಒಂದು ಗುಂಪು ಕರೆದಿತ್ತು. ಈ ವಿವಾದಕ್ಕೆ ಈಡಾದಾಗ ಕಂಗಾನಾ ಆ ಗಾಯಕ್ಕೆ ಉಪ್ಪು ಸವರುವಂಥ ಹೇಳಿಕೆ ನೀಡಿದ್ದರು.

2020 ರಲ್ಲಿ, ಕಂಗನಾ ರನೌತ್ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದ ಪಂಜಾಬ್​ನ ಮಹಿಳೆಯೊಬ್ಬರನ್ನು ತಪ್ಪಾಗಿ ಅಂದಾಜಿಸಿದ್ದರು. ಅದಕ್ಕಿಂತ ಹಿಂದೆ ಶಾಹೀನ್ ಬಾಗ್​ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಿಲ್ಕಿಸ್ ಬಾನೊ ಅವರು ಎಂದುಕೊಂಡಿದ್ದರು. ಪ್ರತಿಭಟನೆಗೆ ಬರುವ ಮಹಿಳೆಯರೆಲ್ಲರೂ 100 ರೂಪಾಯಿಗೆ ಸಿಗುತ್ತಾರೆ ಎಂದು ಹೇಳಿದ್ದರು. ಇದು ದೊಡ್ಡ ವಿವಾದ ಸೃಷ್ಟಿಸಿತ್ತು. ಅಂದ ಹಾಗೆ ಕಂಗನಾಗೆ ಹೊಡೆದ ಕಾನ್​ಸ್ಟೇಬಲ್​ ಕುಲ್ವಿಂದರ್ ಕೌರ್​ ತಾಯಿಯೂ ಆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಂಗನಾ ಹೇಳಿಕೆಯಿಂದ ಕೋಪಗೊಂಡಿದ್ದ ಅವರು ಪ್ರತಿಕಾರ ತೀರಿಸಲು ಕಾದಿದ್ದರು. ಅಂತೆಯೇ ಚಂಡಿಗಢದಲ್ಲಿ ತಪಾಸಣಾ ಕೇಂದ್ರಕ್ಕೆ ಬರುತ್ತಿದ್ದಂತೆ ಕಪಾಳ ಮೋಕ್ಷ ಮಾಡಿದ್ದಾರೆ.

100 ರೂಪಾಯಿಗೆ ಸಿಗುವ ಮಹಿಳೆಯರು ಎಂದು ಕಂಗನಾ ಕೊಟ್ಟಿರುವ ಹೇಳಿಕೆಯು ಎಕ್ಸ್ ನಲ್ಲಿ(ಟ್ವಿಟರ್​) ಕಂಗನಾ ಮತ್ತು ಗಾಯಕ-ನಟ ದಿಲ್ಜೀತ್ ದೋಸಾಂಜ್ ನಡುವೆ ಗಲಾಟೆಗೆ ಕಾರಣವಾಗಿತ್ತು. ಫೆಬ್ರವರಿ 2021 ರಲ್ಲಿ, ಅಂತರರಾಷ್ಟ್ರೀಯ ಪಾಪ್ ಸೆನ್ಸೇಷನ್ ರಿಹಾನ್ನಾ ಅವರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಕಂಗನಾ ರಣಾವತ್‌ ಪ್ರತಿಭಟನಾಕಾರರನ್ನು “ಭಯೋತ್ಪಾದಕರು” ಎಂದು ಕರೆದಿದ್ದರು ಮತ್ತು ಅವರು ಭಾರತವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಸಂಸದೆ ಮೇಲಿನ ಹಲ್ಲೆ ಸಂಬಂಧ ವಿಶೇಷ ತನಿಖಾದಳ ತಂಡವನ್ನು ರಚಿಸಲಾಗಿದೆ. ಪ್ರಕರಣದ ಸಂಪೂರ್ಣ ತನಿಖೆ ನಡೆಸಿರುವ ಎಸ್‌ಐಟಿ ತಂಡ ವರದಿಯನ್ನು ಉನ್ನತ ಅಧಿಕಾರಿಗಳಿಗೆ ಸಲ್ಲಿಕೆ ಮಾಡಿದೆ. ಆದರೆ ಈ ಕುರಿತು ಎಸ್‌ಐಟಿ ಅಧಿಕಾರಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಇದನ್ನೂ ಓದಿ:Narendra Modi: ಲೋಕಸಭಾ ಚುನಾವಣೆಯ ಫಲಿತಾಂಶದಿಂದ ದೇಶೀಯ ಮಾರುಕಟ್ಟೆಗೆ ಉತ್ತೇಜನ; ಮೋದಿ ಬಣ್ಣನೆ

Exit mobile version