Site icon Vistara News

Kangana Ranaut: ಕಾರಣ ಇದ್ದರೆ ಕೊಲೆ, ಅತ್ಯಾಚಾರ ಮಾಡಬಹುದೆ? ; ವಿರೋಧಿಗಳ ವಿರುದ್ಧ ಗುಡುಗಿದ ಕಂಗನಾ

Kangana Ranaut

ನವದೆಹಲಿ: ಭದ್ರತಾ ಸಿಬ್ಬಂದಿಯೊಬ್ಬರು ತಮಗೆ ಕಪಾಳಮೋಕ್ಷ(Slap) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮಾಚಲಪ್ರದೇಶದ ಮಂಡಿಯ ನೂತನ ಸಂಸದೆ ಕಂಗನಾ ರಣಾವತ್​ (Kangana Ranaut) ಮತ್ತೆ ಗುಡುಗಿದ್ದಾರೆ. ತಮ್ಮ ಮೇಲಿನ ದಾಳಿಯನ್ನು ಅತ್ಯಾಚಾರ, ಕೊಲೆ ಪ್ರಕರಣಗಳ ಜೊತೆ ಹೋಲಿಕೆ ಮಾಡಿಕೊಂಡು ತಮ್ಮ ವಿರೋಧಿಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ಕಂಗನಾ ಮಾಡಿರುವ ಪೋಸ್ಟ್‌ ಬಹಳ ಸದ್ದು ಮಾಡುತ್ತಿದೆ.

ಕಂಗನಾ ಟ್ವೀಟ್‌ನಲ್ಲಿ ಏನಿದೆ?

ಪ್ರತಿ ರೇಪಿಸ್ಟ್‌, ಕೊಲೆಗಡುಕ ಅಥವಾ ಕಳ್ಳನಿಗೆ ತನ್ನದೇ ಆದ ಕಾರಣಗಳಿರುತ್ತವೆ. ಒಂದೋ ಆತನಿಗೆ ಭಾವನಾತ್ಮಕ, ದೈಹಿಕ, ಮಾನಸಿಕ ಅಥವಾ ಹಣಕಾಸಿಗೆ ಸಂಬಂಧಿಸಿದ ಕಾರಣಗಳಿರುತ್ತವೆ. ಹಾಗಾಗಿಯೇ ಆತ ಕೃತ್ಯ ಎಸಗುತ್ತಾನೆ. ಕಾರಣ ಇಲ್ಲದೇ ಯಾವ ಅಪರಾಧವೂ ನಡೆಯಲ್ಲ. ಆದರೂ ಅವರನ್ನು ಅಪರಾಧಿಗಳೆಂದು ಘೋಷಿಸಿ ಜೈಲಿಗಟ್ಟಲಾಗುತ್ತದೆ. ಹೀಗಿರುವಾಗಿ ನನ್ನ ಮೇಲೆ ಹಲ್ಲೆ ನಡೆಸಿದ CIFC ಸಿಬ್ಬಂದಿ ಕುಲ್ವಿಂದರ್‌ ಕೌರ್‌ಗೂ ಒಂದು ಭಾವನಾತ್ಮಕ ಕಾರಣ ಇತ್ತು ಎಂಬ ಕಾರಣ ಹಲವರು ಆಕೆಯ ಬೆಂಬಲಕ್ಕೆ ನಿಂತಿದ್ದಾರೆ. ಹಾಗಾದರೆ ನಿಮ್ಮ ಪ್ರಕಾರ ಕಾರಣ ಇರುವವರು ಅಪರಾಧ ಮಾಡಬಹುದೇ? ಯಾವುದೇ ವ್ಯಕ್ತಿಯ ಅನುಮತಿ ಇಲ್ಲದೇ ಆತನ ಮೈ ಮುಟ್ಟಬಹುದೇ? ಕೊಲೆ ಅತ್ಯಾಚಾರ ಮಾಡಿದರೆ ಸರಿನಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ನನ್ನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗೆ ಮಾನಸಿಕ ಸಮಸ್ಯೆ ಇದೆ. ದಯವಿಟ್ಟು ಆಕೆಯನ್ನು ಯಾವುದಾದರೂ ಯೋಗ ಅಥವಾ ಧ್ಯಾನ ಕೇಂದ್ರಗಳಿಗೆ ಕಳುಹಿಸಿ. ಇಲ್ಲದಿದ್ದರೆ ಬಹಳ ಕಷ್ಟ ಎದುರಿಸಬೇಕಾಗುತ್ತದೆ. ಮನಸ್ಸಿನಲ್ಲಿ ಹೆಚ್ಚು ಹಠ, ಕೋಪ , ಅಸೂಯೆ ಇಟ್ಟುಕೊಳ್ಳಬೇಡಿ. ಆರಾಮಾಗಿರಿ ಎಂದು ಕಂಗನಾ ಮನವಿ ಮಾಡಿದ್ದಾರೆ.

ಚಂಡೀಗಢ ವಿಮಾನ ನಿಲ್ದಾಣದಲ್ಲಿ ಗುರುವಾರ ಕಂಗನಾ ಮೇಲೆ CISF ಸಿಬ್ಬಂದಿ ಕೌರ್‌ ಹಲ್ಲೆ ನಡೆಸಿದ್ದರು. ಇದಾದ ಬಳಿಕ ಆಕೆಯನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಚಂಢೀಗಡದಿಂದ ದಿಲ್ಲಿಗೆ ವಿಮಾನ ಹತ್ತುವ ವೇಳೆ ಈ ಘಟನೆ ನಡೆದಿದ್ದು, ಇನ್ನು ಕೌರ್‌ ವಿರುದ್ಧ ಕೇಸ್‌ ದಾಖಲಿಸಲಾಗಿದೆ. ಈ ನಿಟ್ಟಿನಲ್ಲಿ ಆಕೆಯನ್ನು ಅರೆಸ್ಟ್‌ ಮಾಡಲಾಗಿದೆ. ನರೇಂದ್ರ ಮೋದಿ ಸರ್ಕಾರವು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾನೂನುಗಳನ್ನ ಜಾರಿಗೆ ತರಲು ಮುಂದಾದಾಗ ಅದರ ವಿರುದ್ಧ ಆಂದೋಲನ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ‘ಖಲಿಸ್ತಾನಿ ಬೆಂಬಲಿಗರು’ ಎಂದು ಒಂದು ಗುಂಪು ಕರೆದಿತ್ತು. ಈ ವಿವಾದಕ್ಕೆ ಈಡಾದಾಗ ಕಂಗಾನಾ ಆ ಗಾಯಕ್ಕೆ ಉಪ್ಪು ಸವರುವಂಥ ಹೇಳಿಕೆ ನೀಡಿದ್ದರು.

2020 ರಲ್ಲಿ, ಕಂಗನಾ ರನೌತ್ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದ ಪಂಜಾಬ್​ನ ಮಹಿಳೆಯೊಬ್ಬರನ್ನು ತಪ್ಪಾಗಿ ಅಂದಾಜಿಸಿದ್ದರು. ಅದಕ್ಕಿಂತ ಹಿಂದೆ ಶಾಹೀನ್ ಬಾಗ್​ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಿಲ್ಕಿಸ್ ಬಾನೊ ಅವರು ಎಂದುಕೊಂಡಿದ್ದರು. ಪ್ರತಿಭಟನೆಗೆ ಬರುವ ಮಹಿಳೆಯರೆಲ್ಲರೂ 100 ರೂಪಾಯಿಗೆ ಸಿಗುತ್ತಾರೆ ಎಂದು ಹೇಳಿದ್ದರು. ಇದು ದೊಡ್ಡ ವಿವಾದ ಸೃಷ್ಟಿಸಿತ್ತು. ಅಂದ ಹಾಗೆ ಕಂಗನಾಗೆ ಹೊಡೆದ ಕಾನ್​ಸ್ಟೇಬಲ್​ ಕುಲ್ವಿಂದರ್ ಕೌರ್​ ತಾಯಿಯೂ ಆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಂಗನಾ ಹೇಳಿಕೆಯಿಂದ ಕೋಪಗೊಂಡಿದ್ದ ಅವರು ಪ್ರತಿಕಾರ ತೀರಿಸಲು ಕಾದಿದ್ದರು. ಅಂತೆಯೇ ಚಂಡಿಗಢದಲ್ಲಿ ತಪಾಸಣಾ ಕೇಂದ್ರಕ್ಕೆ ಬರುತ್ತಿದ್ದಂತೆ ಕಪಾಳ ಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:Narendra Modi: ಮೋದಿ ಪ್ರಮಾಣವಚನಕ್ಕೆ 7 ವಿದೇಶಿ ನಾಯಕರು; 8000 ಅತಿಥಿಗಳು

Exit mobile version