Site icon Vistara News

Kangana Ranaut: ರಾಹುಲ್‌ ಗಾಂಧಿ ಅತ್ಯಂತ ಅಪಾಯಕಾರಿ ವ್ಯಕ್ತಿ; ಕಂಗನಾ ರಾಣಾವತ್‌ ಹೀಗೆ ಹೇಳಿದ್ದೇಕೆ?

Rahul Gandhi

ನವದೆಹಲಿ: ಬಾಲಿವುಡ್‌ ನಟಿ, ಬಿಜೆಪಿ ಸಂಸದೆ ಕಂಗನಾ ರಾಣಾವತ್‌ (Kangana Ranaut) ಮತ್ತೊಮ್ಮೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ವಿರುದ್ಧ ಕಿಡಿಕಾರಿದ್ದಾರೆ. ಹಿಂಡನ್‌ಬರ್ಗ್‌ನ ಹೊಸ ವರದಿಯಲ್ಲಿ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ (SEBI) ಮುಖ್ಯಸ್ಥೆ ಮಾಧಬಿ ಪುರಿ ಬುಚ್‌ (Madhabi Puri Buch) ಅವರು ವಿದೇಶದಲ್ಲಿ ಗೌತಮ್‌ ಅದಾನಿ ಹೊಂದಿರುವ ಕಂಪನಿಗಳಲ್ಲಿ ಪಾಲು ಹೊಂದಿದ್ದಾರೆ ಎಂದು ಆರೋಪಿಸಿದ್ದು, ಇದನ್ನು ಅನುಮೋದಿಸಿದ ರಾಹುಲ್ ಗಾಂಧಿ ವಿರುದ್ಧ ಕಂಗನಾ ವಾಗ್ದಾಳಿ ನಡೆಸಿ ʼʼಅತ್ಯಂತ ಅಪಾಯಕಾರಿ ವ್ಯಕ್ತಿʼʼ ಎಂದು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಕಂಗನಾ ಅವರು, ʼʼರಾಹುಲ್ ಗಾಂಧಿ ದೇಶವನ್ನು ಮತ್ತು ದೇಶದ ಭದ್ರತೆ ಹಾಗೂ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಕಹಿ ಮತ್ತು ವಿಷ ತುಂಬಿದ ವ್ಯಕ್ತಿ. ಪ್ರಧಾನಿಯಾಗಲು ಸಾಧ್ಯವಾಗದಿದ್ದರೆ ಈ ರಾಷ್ಟ್ರವನ್ನು ನಾಶಪಡಿಸಬೇಕು ಎನ್ನುವುದು ಅವರ ಯೋಚನೆ. ಇದೇ ಕಾರಣಕ್ಕೆ ನಮ್ಮ ಷೇರುಪೇಟೆಯನ್ನು ಗುರಿಯಾಗಿಸಿಕೊಂಡ ಹಿಂಡನ್‌ಬರ್ಗ್‌ ಅನ್ನು ಬೆಂಬಲಿಸುತ್ತಿದ್ದಾರೆʼʼ ಎಂದು ಕಂಗನಾ ಹೇಳಿದ್ದಾರೆ.

ಜೀವನ ಪರ್ಯಂತ ಪ್ರತಿಪಕ್ಷದಲ್ಲೇ ಕೂರಲು ಸಜ್ಜಾಗಿ ಎಂದು ರಾಹುಲ್‌ ಗಾಂಧಿಗೆ ಕರೆ ನೀಡಿದ ಕಂಗನಾ, ʼʼರಾಹುಲ್‌ ಗಾಂಧಿ ನೀವು ಜೀವನ ಪರ್ಯಂತ ಪ್ರತಿಪಕ್ಷದಲ್ಲೇ ಕುಳಿತುಕೊಳ್ಳಬೇಕು ಮತ್ತು ಈಗಿನಂತೆ ಈ ರಾಷ್ಟ್ರದ ಜನರ ವೈಭವ, ಪ್ರಗತಿ ಮತ್ತು ರಾಷ್ಟ್ರೀಯತೆಯನ್ನು ಅನುಭವಿಸಲು ಸಜ್ಜಾಗಿ. ದೇಶದ ಜನತೆ ಎಂದಿಗೂ ನಿಮ್ಮನ್ನು ತಮ್ಮ ನಾಯಕ ಎಂದು ಒಪ್ಪಿಕೊಳ್ಳುವುದಿಲ್ಲ. ಗೌರವಕ್ಕೆ ನೀವು ಅನರ್ಹ ವ್ಯಕ್ತಿʼʼ ಎಂದು ಕಂಗನಾ ಖಾರವಾಗಿಯೇ ಬರೆದುಕೊಂಡಿದ್ದಾರೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಹಿಂಡನ್‌ಬರ್ಗ್‌ ವರದಿ ಬಗ್ಗೆ ರಾಹುಲ್‌ ಗಾಂಧಿ ಹೇಳಿದ್ದೇನು?

ಅದಾನಿ ಗ್ರೂಪ್‌ ವಿದೇಶದಲ್ಲಿ ಹೊಂದಿರುವ ಕಂಪನಿಗಳ ಹಗರಣಗಳಲ್ಲಿ ಸೆಬಿ ಅಧ್ಯಕ್ಷೆಯಾಗಿರುವ ಮಾಧಬಿ ಪುರಿ ಬುಚ್‌ ಹಾಗೂ ಅವರ ಪತಿ ಧವಳ್‌ ಬುಚ್‌ ಅವರ ಪಾಲೂ ಇದೆ. ಕಂಪನಿಗಳಲ್ಲೂ ಇವರು ಷೇರುಗಳನ್ನು ಹೊಂದಿದ್ದಾರೆ. ವಿದೇಶದಲ್ಲಿ ಕಂಪನಿಗಳಿಂದ ಅಕ್ರಮವಾಗಿ ಪಡೆದುಕೊಂಡ ಹಣದಲ್ಲಿ ಇವರದ್ದೂ ಪಾಲಿದೆ. ಬರ್ಮುಡಾ ಹಾಗೂ ಮಾರಿಷಸ್‌ ಫಂಡ್‌ಗಳಲ್ಲಿ ಮಾಧಬಿ ಪುರಿ ಬುಚ್‌ ಹಾಗೂ ಧವಳ್‌ ಬುಚ್‌ ಅವರ ಷೇರಿದೆ ಎಂದು ಆಗಸ್ಟ್‌ 10ರಂದು ಬಿಡುಗಡೆ ಮಾಡುದ ತನ್ನ ವರದಿಯಲ್ಲಿ ಹಿಂಡನ್‌ಬರ್ಗ್‌ ಸಂಸ್ಥೆ ಆರೋಪಿಸಿತ್ತು.

ಬಳಿಕ ಈ ಬಗ್ಗೆ ರಾಹುಲ್‌ ಗಾಂಧಿ ಪೋಸ್ಟ್‌ ಹಂಚಿಕೊಂಡು, ʼʼಹಿಂಡೆನ್​ಬರ್ಗ್​​ ರಿಸರ್ಚ್ ಮಾಡಿರುವ ಹೊಸ ವರದಿ ಕಳವಳ ಮೂಡಿಸುವಂತಿದೆ. ಸೆಬಿಯ ಸಮಗ್ರತೆಗೆ ಹಾನಿ ಮಾಡಲಾಗಿದೆ. ಈ ಆರೋಪಗಳ ವಿರುದ್ಧ ಜಂಟಿ ಸಂಸದೀಯ ಸಮಿತಿ ತನಿಖೆಗೆ ಪ್ರಧಾನಿ ನರೇಂದ್ರ ಮೋದಿ ಏಕೆ ಹೆದರುತ್ತಾರೆ ಎಂಬುದನ್ನು ಈ ವರದಿ ಸ್ಪಷ್ಟವಾಗಿ ಸೂಚಿಸುತ್ತದೆʼʼ ಎಂದು ಹೇಳಿದ್ದರು.

ʼʼಸಣ್ಣ ಚಿಲ್ಲರೆ ಹೂಡಿಕೆದಾರರ ಸಂಪತ್ತನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿರುವ ಸೆಬಿಯು ಅದರ ಅಧ್ಯಕ್ಷರ ವಿರುದ್ಧದ ಆರೋಪಗಳನ್ನು ನಿರ್ಲಕ್ಷಿಸುತ್ತಿದೆ. ದೇಶಾದ್ಯಂತದ ಪ್ರಾಮಾಣಿಕ ಹೂಡಿಕೆದಾರರು ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಸೆಬಿ ಅಧ್ಯಕ್ಷೆ ಮಾಧಾಬಿ ಪುರಿ ಬುಚ್ ಇನ್ನೂ ಏಕೆ ರಾಜೀನಾಮೆ ನೀಡಿಲ್ಲ? ಹೂಡಿಕೆದಾರರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಂಡರೆ ಯಾರು ಜವಾಬ್ದಾರರು. ಪ್ರಧಾನಿ ಮೋದಿ, ಸೆಬಿ ಅಧ್ಯಕ್ಷರು ಅಥವಾ ಗೌತಮ್ ಅದಾನಿಯೇ? ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಈ ವಿಷಯವನ್ನು ಮತ್ತೊಮ್ಮೆ ಸ್ವಯಂಪ್ರೇರಿತವಾಗಿ ಪರಿಶೀಲಿಸುತ್ತದೆಯೇ?ʼʼ ಎಂದು ರಾಹುಲ್​ ಪ್ರಶ್ನಿಸಿದ್ದರು.

ಇದನ್ನೂ ಓದಿ: Hindenburg: ಅದಾನಿ ವಿದೇಶಿ ಕಂಪನಿಯಲ್ಲಿ ಸೆಬಿ ಅಧ್ಯಕ್ಷೆಯದ್ದೂ ಪಾಲು; ಹಿಂಡನ್‌ಬರ್ಗ್‌ ಮತ್ತೊಂದು ಸ್ಫೋಟಕ ವರದಿ

Exit mobile version