ಶಿಮ್ಲಾ: ಕಳೆದ ಲೋಕಸಭೆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅವರು ಗೆಲುವು ಸಾಧಿಸಿ, ಈಗ ಸಂಸದೆಯಾಗಿದ್ದಾರೆ. ಇದರ ಬೆನ್ನಲ್ಲೇ, ಕಂಗನಾ ರಣಾವತ್ ಅವರು ಈಗ ನೀಡಿರುವ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. “ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದ ಜನರು ನನ್ನನ್ನು ಭೇಟಿಯಾಗಲು ಬರುವಾಗ ಆಧಾರ್ ಕಾರ್ಡ್ ತರಬೇಕು” ಎಂದು ಅವರು ಹೇಳಿದ್ದು, ಕಾಂಗ್ರೆಸ್ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದೆ.
“ಹಿಮಾಚಲ ಪ್ರದೇಶಕ್ಕೆ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಮಂಡಿ ಕ್ಷೇತ್ರದಲ್ಲಿ ನನ್ನನ್ನು ಭೇಟಿಯಾಗಲು ಬರುವವರು ಜತೆಗೆ ಆಧಾರ್ ಕಾರ್ಡ್ ತರಬೇಕು. ನೀವು ಯಾವುದೇ ರೀತಿಯ ತೊಂದರೆ ಅನುಭವಿಸದರಿಲು ನಿಮ್ಮ ಕೆಲಸದ ಕುರಿತು ಪತ್ರದಲ್ಲಿ ಬರೆದುಕೊಂಡು ಬರಬೇಕು” ಎಂದು ಸುದ್ದಿಗಾರರೊಂದಿಗೆ ಮಾತನಾಡುವಾಗ ಕಂಗನಾ ರಣಾವತ್ ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕ, ಕಳೆದ ಚುನಾವಣೆಯಲ್ಲಿ ಸೋಲನುಭವಿಸಿದ್ದ ವಿಕ್ರಮಾದಿತ್ಯ ಸಿಂಗ್ ಅವರು ತಿರುಗೇಟು ನೀಡಿದ್ದು, “ನಾನು ಜನರ ಪರವಾಗಿ ಕೆಲಸ ಮಾಡುತ್ತೇನೆ. ನನ್ನನ್ನು ಭೇಟಿಯಾಗಲು ಬರುವವರು ಆಧಾರ್ ಕಾರ್ಡ್ ತರಬೇಕಿಲ್ಲ” ಎಂದಿದ್ದಾರೆ.
MP Kangana Ranaut addresses the media after inaugurating the MP Jan Samvad Kendra. This center will be used for interacting with common people & listening to their problems. #HimachalPradesh #Mandi #KanganaRanaut pic.twitter.com/8DW3OYsoW0
— Rahul Chauhan (@RahulCh9290) July 10, 2024
“ಜನಪ್ರತಿನಿಧಿಗಳಾದವರು ಜನರನ್ನು ಭೇಟಿ ಮಾಡಲು ಹಿಂಜರಿಯಬಾರದು ಹಾಗೂ ಅದು ಅವರ ಜವಾಬ್ದಾರಿಯಾಗಿದೆ. ರಾಜ್ಯದ ಪ್ರತಿಯೊಬ್ಬರೂ ಜನಪ್ರತಿನಿಧಿಗಳನ್ನು ಭೇಟಿಯಾಗಬಹುದು. ಸಣ್ಣ ಕೆಲಸ ಇರಲಿ, ದೊಡ್ಡ ಕೆಲಸ ಇರಲಿ, ನೀತಿಗಳ ಕುರಿತೇ ಇರಲಿ ಅಥವಾ ವೈಯಕ್ತಿಕ ಕೆಲಸಗೇ ಇರಲಿ, ಪ್ರತಿಯೊಬ್ಬರೂ ಜನಪ್ರತಿನಿಧಿಗಳನ್ನು ಭೇಟಿಯಾಗಬೇಕು ಹಾಗೂ ಅದಕ್ಕೆ ಜನಪ್ರತಿನಿಧಿಗಳು ಮುಕ್ತ ಅವಕಾಶ ನೀಡಬೇಕು” ಎಂದಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕಂಗನಾ ರಣಾವತ್ ಅವರು ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ 72,088 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ನಟನೆ ತೊರೆಯುವುದಾಗಿ ಕಂಗನಾ ರಣಾವತ್ ಈಗಾಗಲೇ ಘೋಷಣೆ ಮಾಡಿದ್ದಾರೆ. ಆಜ್ ತಕ್ ಸುದ್ದಿವಾಹಿನಿಗೆ ಸಂದರ್ಶನ ನೀಡುವ ವೇಳೆ ಈ ಘೋಷಣೆ ಮಾಡಿದ್ದರು
“ನೀವು ಮಂಡಿ ಲೋಕಸಭೆಯಲ್ಲಿ ಗೆಲುವು ಸಾಧಿಸಿದರೆ ಏನೆಲ್ಲ ಮಾಡುತ್ತೀರಿ” ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಹೌದು, ಮಂಡಿಯಲ್ಲಿ ಗೆಲುವು ಸಾಧಿಸಿದ ಬಳಿಕ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ. ಆದರೆ, ನಮ್ಮ ಬಳಿ ತುಂಬ ಒಳ್ಳೆಯ ನಟಿ ಇದ್ದಾರೆ. ದಯಮಾಡಿ ನೀವು ಬಿಟ್ಟು ಹೋಗಬೇಡಿ ಎಂಬುದಾಗಿ ಹೆಚ್ಚಿನ ನಿರ್ದೇಶಕರು ಹೇಳುತ್ತಾರೆ. ಹೌದು, ನಾನೊಬ್ಬ ಒಳ್ಳೆ ನಟಿ ನಿಜ. ಇದೇ ಮೆಚ್ಚುಗೆಯನ್ನು ಸ್ವೀಕರಿಸಿ ನಾನು ಮುಂದೆ ಹೋಗುತ್ತೇನೆ” ಎಂದು ತಿಳಿಸಿದ್ದಾರೆ. ಆ ಮೂಲಕ ಬಾಲಿವುಡ್, ನಟನೆ ತ್ಯಜಿಸುವುದನ್ನು ಅವರು ದೃಢಪಡಿಸಿದ್ದಾರೆ.