ಮುಂಬೈ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಟಿಕೆಟ್‌ಗಾಗಿ ಲಾಬಿ ಶುರು ಮಾಡಿದ್ದಾರೆ. ಇದರ ಬೆನ್ನಲ್ಲೇ ಹಿಮಾಚಲ ಪ್ರದೇಶದ ಮಂಡಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅವರು ಹೇಳಿದ್ದಾರೆ. ಹಾಗಾಗಿ, ನೇರ ಹೇಳಿಕೆಗಳಿಂದಲೂ ದೇಶಾದ್ಯಂತ ಸುದ್ದಿಯಲ್ಲಿರುವ ನಟಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ರಾಜಕೀಯ ಪ್ರವೇಶಿಸುವ ಕುರಿತು ಸುದ್ದಿಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಸರ್ಕಾರವು ನನ್ನ ಭಾಗವಹಿಸುವಿಕೆಯನ್ನು ಬಯಸಿದರೆ, ಖಂಡಿತವಾಗಿಯೂ ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ. ಹಿಮಾಚಲ ಪ್ರದೇಶದ ಜನರ ಸೇವೆ ಮಾಡುವ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಅದು ನನ್ನ ಭಾಗ್ಯ. ರಾಜಕೀಯ ಪಕ್ಷವು ನನ್ನ ಸ್ಪರ್ಧೆ ಬಯಸಿದರೆ ಖಂಡಿತವಾಗಿಯೂ ನಾನು ಸ್ಪರ್ಧಿಸುತ್ತೇನೆ” ಎಂದು ಹೇಳಿದ್ದಾರೆ.
“ರಾಜಕೀಯವೇ ನನ್ನ ವೃತ್ತಿ ಅಲ್ಲ. ರಾಜಕೀಯ ಸೇರುವ ಕುರಿತು ಯಾವುದೇ ಯೋಜನೆಯನ್ನೂ ಹೊಂದಿಲ್ಲ. ಸಿನಿಮಾ ಕ್ಷೇತ್ರದಲ್ಲಿಯೇ ಏಳಿಗೆ ಹೊಂದುವ ಕುರಿತು ಯೋಚನೆ ಇದೆ” ಎಂದು ಕೂಡ ತಿಳಿಸಿದ್ದಾರೆ. ಕಂಗನಾ ರಣಾವತ್ ಅವರು ಕೇಂದ್ರ ಸರ್ಕಾರದ ನೀತಿ-ನಿಲುವುಗಳನ್ನು ಮುಕ್ತವಾಗಿ ಬೆಂಬಲಿಸುತ್ತಾರೆ. ಹಾಗಾಗಿ, ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯು ರಣಾವತ್ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ | Twitter | ಟ್ರಂಪ್, ಕಂಗನಾ ಖಾತೆ ಬ್ಯಾನ್ ವಾಪಸ್ ಆಗುತ್ತಾ? ಮಸ್ಕ್ ಮಾಡಿದ ಟ್ವೀಟ್ ಮರ್ಮವೇನು?