ನವ ದೆಹಲಿ: ಜವಾಹರ ಲಾಲ್ ವಿಶ್ವವಿದ್ಯಾಲಯ (ಜೆಎನ್‌ಯು) ಮಾಜಿ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷದ ವಕ್ತಾರರನ್ನಾಗಿ ನೇಮಿಸಿಕೊಳ್ಳಲಾಗಿದೆ. ಉತ್ತರ ಭಾರತದ ಹಿಂದಿ ಬೆಲ್ಟ್‌ನಲ್ಲಿ ಪಕ್ಷದ ವರ್ಚಸ್ಸನ್ನು ಮಾತಿನ ಮೂಲಕ ಹೆಚ್ಚಿಸುವ ಪ್ರಯತ್ನವಾಗಿ ಹೊಸ ಪ್ರತಿಭೆಗಳನ್ನು ಕಾಂಗ್ರೆಸ್ ಹುಡುಕುತ್ತಿದೆ. ಹೀಗಾಗಿ ಈಗಾಗಲೇ ಮಾತಿನ ಮೂಲಕ ಮೋಡಿ ಮಾಡಿರುವ ಕನ್ಹಯ್ಯ ಕುಮಾರ್ ಉತ್ತಮ ಆಯ್ಕೆ ಎಂದು ಪರಿಗಣಿಸಲಾಗಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಹಿಂದಿ ಭಾಷಾ ಸಂವಹನ ವಿಭಾಗವನ್ನು ಬಲವರ್ಧನೆಗೊಳಿಸುವ ಪ್ರಯತ್ನವೂ ಸಾಗಿದ್ದು, ಚೆನ್ನಾಗಿ ಹಿಂದಿ ಮಾತನಾಡಬಲ್ಲ ಮತ್ತು ಪ್ರತಿಪಕ್ಷಗಳಿಗೆ ದಿಟ್ಟ ಪ್ರತ್ಯುತ್ತರ ನೀಡಬಲ್ಲವರ ಹುಡುಕಾಟ ಜೋರಾಗಿ ನಡೆದಿತ್ತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್ ಸೇರಿದ್ದ ಕನ್ಹಯ್ಯ ಅವರನ್ನು ವಕ್ತಾರರ ನೇಮಕದ ವೇಳೆ ಪರಿಗಣಿಸಿ ಆಯ್ಕೆ ಮಾಡಲಾಗಿದೆ. ಕನ್ಹಯ್ಯ ಕುಮಾರ್ ಅವರು ಕಳೆದ ಜೂನ್ ೧೮ರಂದು ರಾಷ್ಟ್ರೀಯ ವಕ್ತಾರರಾಗಿ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮಿಲಿಟರಿಯಲ್ಲಿ ನಾಲ್ಕು ವರ್ಷಗಳ ಅವಧಿಗೆ ಯೋಧರನ್ನು ನೇಮಿಸಿಕೊಳ್ಳುವ ಕೇಂದ್ರದ ಅಗ್ನಿಪಥ್ ಯೋಜನೆಯಿಂದಾಗುವ ಸಮಸ್ಯೆಗಳ ಬಗ್ಗೆ ಅವರು ಮಾತನಾಡಿದ್ದರು. ಅದು ಭಾರತೀಯ ಸೇನೆಯ ವೃತ್ತಿಯನ್ನಾಗಿಸಿಕೊಂಡು ಬದುಕು ಕಟ್ಟಿಕೊಳ್ಳುವ ನಿರೀಕ್ಷೆ ಹೊತ್ತಿರುವ ಬಡ ಯುವಕರಿಗೆ ಇದರಿಂದ ಆಗುವ ನಷ್ಟಗಳ ಬಗ್ಗೆ ಮನಮುಟ್ಟುವಂತೆ ವಿವರಿಸಿದ್ದರು.
ಜೂನ್ ೨೬ರಂದು ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲೂ ಅವರು ಭಾಗವಹಿಸಿದ್ದರು. ಕಾಂಗ್ರೆಸ್ ಅಂದು ಸುಮಾರು ೨೦ ಪ್ರಮುಖ ನಾಯಕರು ರಾಷ್ಟ್ರದ ಬೇರೆ ಬೇರೆ ಭಾಗಗಳಲ್ಲಿ ಅಗ್ನಿಪಥ್ ವಿರುದ್ಧ ಮಾತನಾಡುವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆ ೨೦ ಮಂದಿಯಲ್ಲಿ ಕನ್ಹಯ್ಯ ಕುಮಾರ್ ಕೂಡಾ ಒಬ್ಬರಾಗಿದ್ದರು. ಕುಮಾರ್ ಪಟನಾದಲ್ಲಿ ಪತ್ರಿಕಾಗೋಷ್ಠಿ ಮಾಡಿದ್ದರು.
ಭಾರತೀಯ ಜನತಾ ಪಕ್ಷದಲ್ಲಿ ಹಿಂದಿ ಚೆನ್ನಾಗಿ ಮಾತನಾಡುವ ಹಲವು ಯುವ ನಾಯಕರಿದ್ದಾರೆ. ಜನರಿಗೆ ಅರ್ಥವಾಗುವಂತೆ ಅವರು ವಿವರಿಸಬಲ್ಲರು. ಅದೇ ಸಾಮರ್ಥ್ಯದ ನಾಯಕರು ಕಾಂಗ್ರೆಸ್‌ಗೂ ಅಗತ್ಯವಿದೆ ಎನ್ನುವುದನ್ನು ನಾಯಕರು ಮನಗಂಡಿದ್ದಾರೆ. ಕೇವಲ ಇಂಗ್ಲಿಷ್‌ನಲ್ಲಿ ವಿವರಿಸಿದರೆ ಸಂದೇಶ ತುಂಬ ಜನರಿಗೆ ತಲುಪುವುದಿಲ್ಲ. ಅದರ ಬದಲು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಸಮಾನ ಕಮಾಂಡ್ ಇರುವ ನಾಯಕರು ಬೇಕು ಎನ್ನುವುದು ಪಕ್ಷದೊಳಗೆ ಹುಟ್ಟಿರುವ ಹೊಸ ವಾದವಾಗಿದೆ. ಈ ಹುಡುಕಾಟ ರಾಷ್ಟ್ರದ ಬೇರೆ ಬೇರೆ ಭಾಗಗಳಲ್ಲಿ ನಡೆಯುತ್ತಿದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷ ಭಾಷಣ ಸ್ಪರ್ಧೆ ಕೂಡಾ ನಡೆಸಿ ಪ್ರತಿಭೆಗಳ ಹುಡುಕಾಟ ನಡೆಸಿತ್ತು.
ಯಾರು ಈ ಕನ್ಹಯ್ಯ ಕುಮಾರ್?
2016ರಲ್ಲಿ ಜೆಎನ್‌ಯುನಲ್ಲಿ ವಿದ್ಯಾರ್ಥಿ ಯೂನಿಯನ್ ವತಿಯಿಂದ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ ಎರಡನೇ ವರ್ಷಾಚರಣೆಯನ್ನು ಆಚರಿಸಲಾಗಿತ್ತು. ಈ ವೇಳೆ ಕನ್ಹಯ್ಯ ಕುಮಾರ್ ದೇಶ ವಿರೋಧಿ ಘೋಷಣೆಗಳನ್ನು ಮೊಳಗಿಸಿದ್ದರು ಎಂಬ ಆರೋಪ ಎದುರಾಗಿತ್ತು. ಅವರನ್ನು ಬಂಧಿಸಿದ್ದು ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು.
೨೦೧೮ರ ಏಪ್ರಿಲ್ ೨೯ರಂದು ಕನ್ಹಯ್ಯ ಅವರು ಸಿಪಿಐ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಸೇರಿಕೊಂಡಿದ್ದರು. ಬಳಿಕ ೨೦೨೧ರ ಸೆಪ್ಟೆಂಬರ್ ೨೮ರಂದು ಕಾಂಗ್ರೆಸ್ ಪಕ್ಷ ಸೇರಿದರು. ಇದರ ನಡುವೆ, ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಅವರು ಬೇಗುಸರಾಯ್ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಅವರು ೨,೬೯,೯೭೬ ಮತಗಳನ್ನು ಪಡೆದಿದ್ದರು. ಅವರ ವಿರುದ್ಧ ಗೆಲುವು ಸಾಧಿಸಿದ್ದ ಗಿರಿರಾಜ್ ಸಿಂಗ್ ೪,೨೨,೨೧೭ ಮತಗಳಿಂದ ಗೆಲುವು ಸಾಧಿಸಿದ್ದರು.
ಕನ್ಹಯ್ಯ ಕುಮಾರ್ ದೇಶದ ನಾನಾ ಕಡೆಗಳಲ್ಲಿ ತಿರುಗಾಟ ಮಾಡಿದ ಅನುಭವವನ್ನು ಹೊಂದಿದ್ದಾರೆ. ಅವರ ವಿಡಂಬನಾತ್ಮಕ ಮಾತುಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ನರೇಂದ್ರ ಮೋದಿ ಮತ್ತು ಬಿಜೆಪಿಯ ನಿಲುವುಗಳನ್ನು ಅತ್ಯಂತ ಹಾಸ್ಯಮಯವಾಗಿ ಅವರು ಕಾಲೆಳೆಯುತ್ತಾರೆ.
ಇದನ್ನೂ ಓದಿ| ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಜೂನ್ 2ರಂದು ಬಿಜೆಪಿ ಸೇರ್ಪಡೆ