ಲಖನೌ: ಕನ್ವರ್ ಯಾತ್ರೆ (Kanwar Yatra) ಸಾಗುವ ಮಾರ್ಗದಲ್ಲಿನ ಹೋಟೆಲ್, ರೆಸ್ಟೋರೆಂಟ್ ಮತ್ತು ತಿನಿಸು ಮಾರಾಟಗಾರರು ತಮ್ಮ ಮಾಲೀಕರ ಹೆಸರನ್ನು ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಶುಕ್ರವಾರ ಆದೇಶ ಹೊರಡಿಸಿರುವುದು ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದೆ. ಯೋಗಿ ನಡೆಗೆ ಹಲವು ವಿರೋಧಗಳು ಕೇಳಿ ಬಂದಿರುವ ಬೆನ್ನಲ್ಲೇ ಯೋಗ ಗುರು ಬಾಬಾ ರಾಮದೇವ್(Baba Ramdev) ಕೂಡ ಬೆಂಬಲ ಸೂಚಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಬಾ ರಾಮ್‌ದೇವ್, ತಮ್ಮ ಹೆಸರಿನ ಬಗ್ಗೆ ಎಲ್ಲರಿಗೂ ಗೌರವ ಇರಬೇಕು. ರಾಮ್‌ದೇವ್‌ಗೆ ತನ್ನ ಗುರುತು ಬಹಿರಂಗ ಪಡಿಸುವಲ್ಲಿ ಸಮಸ್ಯೆ ಇಲ್ಲವೆಂದ ಮೇಲೆ ರೆಹ್ಮಾನ್‌ಗೆ ಏಕೆ ಸಮಸ್ಯೆ ಆಗುತ್ತಿದೆ? ಪ್ರತಿಯೊಬ್ಬರಿಗೆ ತಮ್ಮ ಹೆಸರಿನ ಬಗ್ಗೆ ಹೆಮ್ಮೆ ಇರಬೇಕು. ಹೆಸರು ಮುಚ್ಚಿಡುವ ಅವಶ್ಯಕತೆ ಇಲ್ಲ. ಮಾಡುವ ಕೆಲಸದಲ್ಲಿ ಶುದ್ದತೆ ಇರಬೇಕು. ನಮ್ಮ ಕೆಲಸದಲ್ಲಿ ನೀಯತ್ತು ಇದ್ದರೆ ನಾವು ಹಿಂದೂವೋ ಅಥವಾ ಮುಸ್ಲಿಮರೋ ಎಂಬ ವಿಚಾರ ಮುಖ್ಯವಾಗುವುದಿಲ್ಲ ಎಂದಿದ್ದಾರೆ.
ಕನ್ವರ್ ಯಾತ್ರೆ ಶ್ರಾವಣ ಮಾಸದಲ್ಲಿ ನಡೆಯುತ್ತದೆ. ಈ ಯಾತ್ರೆಯ ಮೂಲಕ ಶಿವಭಕ್ತರು ಹರಿದ್ವಾರದಿಂದ ಪುಣ್ಯ ತೀರ್ಥ ತಂದು ಉತ್ತರ ಪ್ರದೇಶದ ಮುಜಾಫರ್‌ನಗರದ ಮಾರ್ಗವಾಗಿ ತೆರಳುತ್ತಾರೆ. ಈ ವರ್ಷದ ಕನ್ವರ್ ಯಾತ್ರೆಯು ಜುಲೈ 22ರಂದು ಪ್ರಾರಂಭವಾಗಿ ಆಗಸ್ಟ್ 2ರವರೆಗೆ ನಡೆಯಲಿದೆ.ಕನ್ವರ್ ಯಾತ್ರೆ ಸಾಗುವ ಮಾರ್ಗದಲ್ಲಿರುವ ಹೋಟೆಲ್, ಢಾಬಾಗಳು ಮತ್ತು ಇತರ ವ್ಯಾಪಾರಿಗಳು ಮಾಲೀಕರು ಮತ್ತು ಸಿಬ್ಬಂದಿಯ ಹೆಸರನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಪೊಲೀಸರು ಹೊರಡಿಸಿದ್ದ ಆದೇಶಕ್ಕೆ ಪ್ರತಿಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.
ಕನ್ವರ್ ಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರ ಗೊಂದಲವನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಜಾಫರ್‌ನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಸಿಂಗ್ ಗುರುವಾರ ತಿಳಿಸಿದ್ದರು. ಅದಾಗ್ಯೂ ಪ್ರತಿಪಕ್ಷಗಳು ಈ ನಡೆಯನ್ನು ಖಂಡಿಸಿದ್ದವು. ಇದೀಗ ಸ್ವತಃ ಮುಖ್ಯಮಂತ್ರಿಯೇ ಈ ಆದೇಶ ಹೊರಡಿಸಿರುವುದು ಕುತೂಹಲ ಮೂಡಿಸಿದೆ.
ʼʼಧಾರ್ಮಿಕ ಯಾತ್ರಾರ್ಥಿಗಳ ಪಾವಿತ್ರ್ಯವನ್ನು ಕಾಪಾಡುವ ಉದ್ದೇಶದ ಹಿನ್ನೆಲೆಯಲ್ಲಿ ಮುಜಾಫರ್‌ನಗರ ಪೊಲೀಸರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವುದನ್ನು ಸಿಎಂ ಯೋಗಿ ಆದಿತ್ಯನಾಥ್ ಗಮನಿಸಿದರು. ಹೀಗಾಗಿ ಅವರು ರೆಸ್ಟೋರೆಂಟ್, ಹೋಟೆಲ್, ರಸ್ತೆಬದಿಯ ಢಾಬಾ ಅಥವಾ ಆಹಾರದ ಗಾಡಿ ಸೇರಿದಂತೆ ಪ್ರತಿಯೊಂದು ಕಡೆ ಮಾಲೀಕರ ಹೆಸರು ಮತ್ತು ವಿವರಗಳನ್ನು ಪ್ರದರ್ಶಿಸುವಂತೆ ಸೂಚಿಸಿದ್ದಾರೆʼʼ ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ ಉತ್ತರ ಪ್ರದೇಶದ ಸಚಿವ ಕಪಿಲ್ ದೇವ್ ಅಗರ್ವಾಲ್ ಅವರು ಮಾತನಾಡಿ, ಮುಸ್ಲಿಂ ಮಾರಾಟಗಾರರು ಹಿಂದುಗಳಂತೆ ನಟಿಸಿ ಯಾತ್ರಾರ್ಥಿಗಳಿಗೆ ಮಾಂಸಾಹಾರವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. “ಅವರು ವೈಷ್ಣೋ ಡಾಬಾ ಭಂಡಾರ್, ಶಕುಂಭರಿ ದೇವಿ ಹೋಟೆಲ್ ಮತ್ತು ಶುದ್ಧ ಸಸ್ಯಾಹಾರಿ ಎಂದು ಬೋರ್ಡ್ ಸ್ಥಾಪಿಸಿ ಮಾಂಸಾಹಾರ ಮಾರಾಟ ಮಾಡುತ್ತಾರೆ” ಎಂದು ಅವರು ತಿಳಿಸಿದ್ದರು.
ಮುಜಾಫರ್‌ನಗರ ಪೊಲೀಸರ ಆದೇಶಕ್ಕೆ ಕಿಡಿ ಕಾರಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, “ಕನ್ವರ್ ಯಾತ್ರೆಯ ಉದ್ದಕ್ಕೂ ಇರುವ ಹೊಟೇಲ್‌ಗಳಲ್ಲಿ ಮಾಲೀಕರು ಮತ್ತು ಸಿಬ್ಬಂದಿಯ ಹೆಸರನ್ನು ಪ್ರದರ್ಶಿಸಬೇಕೆಂಬ ಉತ್ತರ ಪ್ರದೇಶ ಪೊಲೀಸರು ನೀಡಿರುವ ಆದೇಶವು ‘ಸಾಮಾಜಿಕ ಅಪರಾಧ’. ಜನರ ನಡುವಿನ ಸಾಮರಸ್ಯವನ್ನು ಕೆಡಿಸಲು ಇಂತಹ ಆದೇಶಗಳನ್ನು ತಹೊರಡಿಲಾಗುತ್ತಿದೆʼʼ ಎಂದು ಅವರು ಕಿಡಿಕಾರಿದ್ದಾರೆ.
ಉಜ್ಜೈನಿಯಲ್ಲೂ ನಿಯಮ ಜಾರಿ
ಉತ್ತರಾಖಂಡ ಮತ್ತು ಯುಪಿ ಸರ್ಕಾರದ ಕ್ರಮದ ನಂತರ, ಉಜ್ಜಯಿನಿ ಮಹಾನಗರ ಪಾಲಿಕೆಯೂ ಅಂಗಡಿಯವರಿಗೆ ತಮ್ಮ ಹೆಸರನ್ನು ಪ್ರದರ್ಶಿಸಲು ಆದೇಶಿಸಿದೆ. ಉಜ್ಜಯಿನಿ ಮೇಯರ್ ಮುಖೇಶ್ ತತ್ವಾಲ್ ಅವರು ಶನಿವಾರ, ಉಲ್ಲಂಘಿಸುವವರು ಮೊದಲ ಅಪರಾಧಕ್ಕೆ ₹ 2,000 ಮತ್ತೆ ಮತ್ತೆ ಈ ಆದೇಶವನ್ನು ಉಲ್ಲಂಘಿಸಿದರೆ ₹ 5,000 ದಂಡವನ್ನು ಪಾವತಿಸಬೇಕಾಗುತ್ತದೆ ಎಂದಿದ್ದಾರೆ.
ಉಜ್ಜಯಿನಿ ಧಾರ್ಮಿಕ ಮತ್ತು ಪವಿತ್ರ ನಗರ. ಜನರು ಧಾರ್ಮಿಕ ಆಸ್ತ (ನಂಬಿಕೆ) ಯೊಂದಿಗೆ ಇಲ್ಲಿಗೆ ಬರುತ್ತಾರೆ. ಅವರು ಯಾರ ಸೇವೆಯನ್ನು ಪಡೆಯುತ್ತಿದ್ದಾರೆಂದು ಅಂಗಡಿಯ ಮಾಲೀಕರ ಬಗ್ಗೆ ತಿಳಿದುಕೊಳ್ಳುವ ಹಕ್ಕಿದೆ. ಗ್ರಾಹಕರು ಅತೃಪ್ತರಾಗಿದ್ದರೆ ಅಥವಾ ಮೋಸ ಹೋದರೆ, ಅಂಗಡಿಯ ಮಾಲೀಕರ ವಿವರಗಳನ್ನು ತಿಳಿದುಕೊಳ್ಳುವುದರಿಂದ ಪರಿಹಾರವನ್ನು ಪಡೆಯಲು ಅವರಿಗೆ ಅವಕಾಶ ನೀಡುತ್ತದೆ ಎಂದು ಅವರು ಹೇಳಿದರು.