ಹೊಸದಿಲ್ಲಿ: ಹಿಂದೂಗಳ ಪವಿತ್ರ ಯಾತ್ರೆಯಾಗಿರುವ ಕನ್ವರ್ ಯಾತ್ರೆ (Kanwar Yatra) ಸಾಗುವ ಮಾರ್ಗದಲ್ಲಿನ ಹೋಟೆಲ್, ರೆಸ್ಟೋರೆಂಟ್ ಮತ್ತು ತಿನಿಸು ಮಾರಾಟಗಾರರು ತಮ್ಮ ಮಾಲೀಕರ ಹೆಸರನ್ನು ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಶುಕ್ರವಾರ ಆದೇಶ ಹೊರಡಿಸಿರುವ ಬಗ್ಗೆ ಎಐಎಂಐಎಂ(AIMIM) ಅಧ್ಯಕ್ಷ ಅಸಾದುದ್ದೀನ್ ಓವೈಸಿ(Asaduddin Owaisi) ಕಿಡಿ ಕಾರಿದ್ದಾರೆ. ಇದು ಮುಸ್ಲಿಂ ಸಮುದಾಯದ ವಿರುದ್ಧ ಬಿಜೆಪಿ ಸರ್ಕಾರದ ದ್ವೇಷವನ್ನು ತೋರಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಓವೈಸಿ, ಭಾರತೀಯ ಮುಸ್ಲಿಮರ ವಿರುದ್ಧ ದ್ವೇಷ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಇದೇ ಸಾಕ್ಷಿ. ಇದರ ಬಹುದೊಡ್ಡ ಕ್ರೆಡಿಟ್ ಜಾತ್ಯಾತೀತ ಪಕ್ಷ ಎಂದು ಕರೆಸಿಕೊಳ್ಳುವ ಬಿಜೆಪಿ ಮತ್ತು ಹಿಂದೂತ್ವದ ನಾಯಕರಿಗೆ ಸಲ್ಲುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ.
Fear on UP's kanwar routes:
— Asaduddin Owaisi (@asadowaisi) July 20, 2024
This is The reality of hatred for Indian Muslims ,credit for this visceral hatred goes to political parties /leaders of Hindutva and so called lip servicing Secular parties.
https://t.co/JzYfLp1l2N
ಓವೈಸಿಯನ್ನು ಜಿನ್ನಾಗೆ ಹೋಲಿಕೆ
ಓವೈಸಿ ಟ್ವೀಟ್ ಬೆನ್ನಲ್ಲೇ ಬಿಜೆಪಿ ಮುಖಂಡ ಸುಖಾಂತಾ ಮಜುಮ್ದಾರ್ ಓವೈಸಿ ವಿರುದ್ಧ ಕಿಡಿ ಕಾರಿದ್ದಾರೆ. ಪ್ರತಿಪಕ್ಷಗಳು ಜನರನ್ನು ದಾರಿ ತಪ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇಂತಹದ್ದೇ ಪ್ರಕಟಣೆಯನ್ನು ಸಮಾಜವಾದಿ ಪಕ್ಷ ಅಧಿಕಾರದಲ್ಲಿರುವಾಗಲೂ ಹೊರಡಿಸಲಾಗಿತ್ತು. ಓವೈಸಿ ಪಾಕಿಸ್ತಾನ ಸ್ಥಾಪಕ ಮೊಹಮ್ಮದ್ ಅಲಿ ಜಿನ್ಹಾರಂತೆ ವರ್ತಿಸುತ್ತಿದ್ದಾರೆ ಎಂದಿದ್ದಾರೆ.
ಕನ್ವರ್ ಯಾತ್ರೆ ಶ್ರಾವಣ ಮಾಸದಲ್ಲಿ ನಡೆಯುತ್ತದೆ. ಈ ಯಾತ್ರೆಯ ಮೂಲಕ ಶಿವಭಕ್ತರು ಹರಿದ್ವಾರದಿಂದ ಪುಣ್ಯ ತೀರ್ಥ ತಂದು ಉತ್ತರ ಪ್ರದೇಶದ ಮುಜಾಫರ್‌ನಗರದ ಮಾರ್ಗವಾಗಿ ತೆರಳುತ್ತಾರೆ. ಈ ವರ್ಷದ ಕನ್ವರ್ ಯಾತ್ರೆಯು ಜುಲೈ 22ರಂದು ಪ್ರಾರಂಭವಾಗಿ ಆಗಸ್ಟ್ 2ರವರೆಗೆ ನಡೆಯಲಿದೆ.ಕನ್ವರ್ ಯಾತ್ರೆ ಸಾಗುವ ಮಾರ್ಗದಲ್ಲಿರುವ ಹೋಟೆಲ್, ಢಾಬಾಗಳು ಮತ್ತು ಇತರ ವ್ಯಾಪಾರಿಗಳು ಮಾಲೀಕರು ಮತ್ತು ಸಿಬ್ಬಂದಿಯ ಹೆಸರನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಪೊಲೀಸರು ಹೊರಡಿಸಿದ್ದ ಆದೇಶಕ್ಕೆ ಪ್ರತಿಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.
ಕನ್ವರ್ ಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರ ಗೊಂದಲವನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಜಾಫರ್‌ನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಸಿಂಗ್ ಗುರುವಾರ ತಿಳಿಸಿದ್ದರು. ಅದಾಗ್ಯೂ ಪ್ರತಿಪಕ್ಷಗಳು ಈ ನಡೆಯನ್ನು ಖಂಡಿಸಿದ್ದವು. ಇದೀಗ ಸ್ವತಃ ಮುಖ್ಯಮಂತ್ರಿಯೇ ಈ ಆದೇಶ ಹೊರಡಿಸಿರುವುದು ಕುತೂಹಲ ಮೂಡಿಸಿದೆ.
ʼʼಧಾರ್ಮಿಕ ಯಾತ್ರಾರ್ಥಿಗಳ ಪಾವಿತ್ರ್ಯವನ್ನು ಕಾಪಾಡುವ ಉದ್ದೇಶದ ಹಿನ್ನೆಲೆಯಲ್ಲಿ ಮುಜಾಫರ್‌ನಗರ ಪೊಲೀಸರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವುದನ್ನು ಸಿಎಂ ಯೋಗಿ ಆದಿತ್ಯನಾಥ್ ಗಮನಿಸಿದರು. ಹೀಗಾಗಿ ಅವರು ರೆಸ್ಟೋರೆಂಟ್, ಹೋಟೆಲ್, ರಸ್ತೆಬದಿಯ ಢಾಬಾ ಅಥವಾ ಆಹಾರದ ಗಾಡಿ ಸೇರಿದಂತೆ ಪ್ರತಿಯೊಂದು ಕಡೆ ಮಾಲೀಕರ ಹೆಸರು ಮತ್ತು ವಿವರಗಳನ್ನು ಪ್ರದರ್ಶಿಸುವಂತೆ ಸೂಚಿಸಿದ್ದಾರೆʼʼ ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ ಉತ್ತರ ಪ್ರದೇಶದ ಸಚಿವ ಕಪಿಲ್ ದೇವ್ ಅಗರ್ವಾಲ್ ಅವರು ಮಾತನಾಡಿ, ಮುಸ್ಲಿಂ ಮಾರಾಟಗಾರರು ಹಿಂದುಗಳಂತೆ ನಟಿಸಿ ಯಾತ್ರಾರ್ಥಿಗಳಿಗೆ ಮಾಂಸಾಹಾರವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. “ಅವರು ವೈಷ್ಣೋ ಡಾಬಾ ಭಂಡಾರ್, ಶಕುಂಭರಿ ದೇವಿ ಹೋಟೆಲ್ ಮತ್ತು ಶುದ್ಧ ಸಸ್ಯಾಹಾರಿ ಎಂದು ಬೋರ್ಡ್ ಸ್ಥಾಪಿಸಿ ಮಾಂಸಾಹಾರ ಮಾರಾಟ ಮಾಡುತ್ತಾರೆ” ಎಂದು ಅವರು ತಿಳಿಸಿದ್ದರು.
ಮುಜಾಫರ್‌ನಗರ ಪೊಲೀಸರ ಆದೇಶಕ್ಕೆ ಕಿಡಿ ಕಾರಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, “ಕನ್ವರ್ ಯಾತ್ರೆಯ ಉದ್ದಕ್ಕೂ ಇರುವ ಹೊಟೇಲ್‌ಗಳಲ್ಲಿ ಮಾಲೀಕರು ಮತ್ತು ಸಿಬ್ಬಂದಿಯ ಹೆಸರನ್ನು ಪ್ರದರ್ಶಿಸಬೇಕೆಂಬ ಉತ್ತರ ಪ್ರದೇಶ ಪೊಲೀಸರು ನೀಡಿರುವ ಆದೇಶವು ‘ಸಾಮಾಜಿಕ ಅಪರಾಧ’. ಜನರ ನಡುವಿನ ಸಾಮರಸ್ಯವನ್ನು ಕೆಡಿಸಲು ಇಂತಹ ಆದೇಶಗಳನ್ನು ತಹೊರಡಿಲಾಗುತ್ತಿದೆʼʼ ಎಂದು ಅವರು ಕಿಡಿಕಾರಿದ್ದಾರೆ.