ಹೊಸದಿಲ್ಲಿ: ಕನ್ವರ್ ಯಾತ್ರೆ (Kanwar Yatra) ಸಾಗುವ ಮಾರ್ಗದಲ್ಲಿನ ಹೋಟೆಲ್, ರೆಸ್ಟೋರೆಂಟ್ ಮತ್ತು ತಿನಿಸು ಮಾರಾಟಗಾರರು ತಮ್ಮ ಮಾಲೀಕರ ಹೆಸರನ್ನು ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ಹೊರಡಿಸಿದ ಆದೇಶಕ್ಕೆ ಸುಪ್ರೀಂ ಕೋರ್ಟ್(Supreme Court) ಮಧ್ಯಂತರ ತಡೆ ನೀಡಿದೆ.
ನಾಮ ಫಲಕ ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶ ಪ್ರಶ್ನಿಸಿ ನಾಗರಿಕ ಹಕ್ಕುಗಳ ರಕ್ಷಣಾ ಸಂಘಟನೆಯ ಎನ್‌ಜಿಒವೊಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್‌ವಿಎನ್ ಭಟ್ಟಿ ಇರುವ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿದ್ದು, ಮುಂದಿನ ವಿಚಾರಣೆ ನಡೆಯವವರೆಗೆ ತಡೆಯಾಜ್ಞೆ ಹೊರಡಿಸುವುದಾಗಿ ಹೇಳಿದೆ. ಪೊಲೀಸರು ನಾಮಫಲಕ ಅಳವಡಿಸಿ ಎಂದು ವ್ಯಾಪಾರಿಗಳನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದಿರುವ ಕೋರ್ಟ್, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.
Supreme Court stays governments’ directive asking eateries on Kanwariya Yatra route to put owners' names and issues notices to Uttar Pradesh, Uttarakhand and Madhya Pradesh governments on petitions challenging their directive asking eateries on Kanwariya Yatra route to put… pic.twitter.com/6GQKwY8OK4
— ANI (@ANI) July 22, 2024
ಕನ್ವರ್ ಯಾತ್ರೆ ಶ್ರಾವಣ ಮಾಸದಲ್ಲಿ ನಡೆಯುತ್ತದೆ. ಇಂದಿನಿಂದ ಪ್ರಾರಂಭವಾಗುವ ಈ ಯಾತ್ರೆ ಆಗಸ್ಟ್ 2ರವರೆಗೆ ನಡೆಯಲಿದೆ. ಈ ಯಾತ್ರೆಯ ಮೂಲಕ ಶಿವಭಕ್ತರು ಹರಿದ್ವಾರದಿಂದ ಪುಣ್ಯ ತೀರ್ಥ ತಂದು ಉತ್ತರ ಪ್ರದೇಶದ ಮುಜಾಫರ್‌ನಗರದ ಮಾರ್ಗವಾಗಿ ತೆರಳುತ್ತಾರೆ. ಕನ್ವರ್ ಯಾತ್ರೆ ಸಾಗುವ ಮಾರ್ಗದಲ್ಲಿರುವ ಹೋಟೆಲ್, ಢಾಬಾಗಳು ಮತ್ತು ಇತರ ವ್ಯಾಪಾರಿಗಳು ಮಾಲೀಕರು ಮತ್ತು ಸಿಬ್ಬಂದಿಯ ಹೆಸರನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಪೊಲೀಸರು ಹೊರಡಿಸಿದ್ದ ಆದೇಶಕ್ಕೆ ಪ್ರತಿಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.
ಕನ್ವರ್ ಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರ ಗೊಂದಲವನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಜಾಫರ್‌ನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಸಿಂಗ್ ಗುರುವಾರ ತಿಳಿಸಿದ್ದರು. ಅದಾಗ್ಯೂ ಪ್ರತಿಪಕ್ಷಗಳು ಈ ನಡೆಯನ್ನು ಖಂಡಿಸಿದ್ದವು. ಇದೀಗ ಸ್ವತಃ ಮುಖ್ಯಮಂತ್ರಿಯೇ ಈ ಆದೇಶ ಹೊರಡಿಸಿರುವುದು ಕುತೂಹಲ ಮೂಡಿಸಿದೆ.
ʼʼಧಾರ್ಮಿಕ ಯಾತ್ರಾರ್ಥಿಗಳ ಪಾವಿತ್ರ್ಯವನ್ನು ಕಾಪಾಡುವ ಉದ್ದೇಶದ ಹಿನ್ನೆಲೆಯಲ್ಲಿ ಮುಜಾಫರ್‌ನಗರ ಪೊಲೀಸರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವುದನ್ನು ಸಿಎಂ ಯೋಗಿ ಆದಿತ್ಯನಾಥ್ ಗಮನಿಸಿದರು. ಹೀಗಾಗಿ ಅವರು ರೆಸ್ಟೋರೆಂಟ್, ಹೋಟೆಲ್, ರಸ್ತೆಬದಿಯ ಢಾಬಾ ಅಥವಾ ಆಹಾರದ ಗಾಡಿ ಸೇರಿದಂತೆ ಪ್ರತಿಯೊಂದು ಕಡೆ ಮಾಲೀಕರ ಹೆಸರು ಮತ್ತು ವಿವರಗಳನ್ನು ಪ್ರದರ್ಶಿಸುವಂತೆ ಸೂಚಿಸಿದ್ದಾರೆʼʼ ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ ಉತ್ತರ ಪ್ರದೇಶದ ಸಚಿವ ಕಪಿಲ್ ದೇವ್ ಅಗರ್ವಾಲ್ ಅವರು ಮಾತನಾಡಿ, ಮುಸ್ಲಿಂ ಮಾರಾಟಗಾರರು ಹಿಂದುಗಳಂತೆ ನಟಿಸಿ ಯಾತ್ರಾರ್ಥಿಗಳಿಗೆ ಮಾಂಸಾಹಾರವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. “ಅವರು ವೈಷ್ಣೋ ಡಾಬಾ ಭಂಡಾರ್, ಶಕುಂಭರಿ ದೇವಿ ಹೋಟೆಲ್ ಮತ್ತು ಶುದ್ಧ ಸಸ್ಯಾಹಾರಿ ಎಂದು ಬೋರ್ಡ್ ಸ್ಥಾಪಿಸಿ ಮಾಂಸಾಹಾರ ಮಾರಾಟ ಮಾಡುತ್ತಾರೆ” ಎಂದು ಅವರು ತಿಳಿಸಿದ್ದರು.
ಮುಜಾಫರ್‌ನಗರ ಪೊಲೀಸರ ಆದೇಶಕ್ಕೆ ಕಿಡಿ ಕಾರಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, “ಕನ್ವರ್ ಯಾತ್ರೆಯ ಉದ್ದಕ್ಕೂ ಇರುವ ಹೊಟೇಲ್‌ಗಳಲ್ಲಿ ಮಾಲೀಕರು ಮತ್ತು ಸಿಬ್ಬಂದಿಯ ಹೆಸರನ್ನು ಪ್ರದರ್ಶಿಸಬೇಕೆಂಬ ಉತ್ತರ ಪ್ರದೇಶ ಪೊಲೀಸರು ನೀಡಿರುವ ಆದೇಶವು ‘ಸಾಮಾಜಿಕ ಅಪರಾಧ’. ಜನರ ನಡುವಿನ ಸಾಮರಸ್ಯವನ್ನು ಕೆಡಿಸಲು ಇಂತಹ ಆದೇಶಗಳನ್ನು ತಹೊರಡಿಲಾಗುತ್ತಿದೆʼʼ ಎಂದು ಅವರು ಕಿಡಿಕಾರಿದ್ದಾರೆ.
ಇದನ್ನೂ ಓದಿ:Economic Survey 2023-24: ದೇಶದ ಆರ್ಥಿಕತೆ, ಜಿಡಿಪಿ, ಹೂಡಿಕೆ; ಆರ್ಥಿಕ ಸಮೀಕ್ಷೆಯ ಪ್ರಮುಖಾಂಶಗಳು ಇಲ್ಲಿವೆ