Site icon Vistara News

ಕಪಿಲ್‌ ಸಿಬಲ್‌ ಕಾಂಗ್ರೆಸ್‌ ಬಿಟ್ರು, ಉಳಿದ ಜಿ-23 ನಾಯಕರು ಏನ್ಮಾಡ್ತಾರಂತೆ?

ಜಿ-23 ನಾಯಕರು

ನವದೆಹಲಿ: ಕಾಂಗ್ರೆಸ್‌ ನಾಯಕತ್ವ ಬದಲಾವಣೆಗೆ ಆಗ್ರಹಿಸುತ್ತಿರುವ G-23 ಗುಂಪಿನ ಪ್ರಮುಖರಲ್ಲಿ ಒಬ್ಬರಾದ ಕಪಿಲ್‌ ಸಿಬಲ್‌ ಪಕ್ಷದ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ʻʻನಮ್ಮದು ಜಿ ಹುಜೂರ್ 23 ಅಲ್ಲ, ‘ನಾಟ್ ಜೀ ಹುಜೂರ್ 23’ʼ ಎನ್ನುವುದು ಸಮಾಜವಾದಿ ಪಕ್ಷದ ಬೆಂಬಲದಿಂದ ರಾಜ್ಯಸಭೆಗೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ವೇಳೆ ಆಡಿದ ಮಾತು.

ಅವರೇನೋ ರಾಜ್ಯಸಭೆಯಲ್ಲಿ ಸ್ವತಂತ್ರ ಧ್ವನಿಯಾಗಬೇಕು ಎಂಬ ನೆಲೆಯಲ್ಲಿ ಹೊರಟಿದ್ದಾರೆ. ಹಾಗಿದ್ದರೆ, ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಮುನಿಸಿಕೊಂಡಿರುವ ಜಿ-23 ಗುಂಪಿನ ಇತರ ನಾಯಕರು ಏನು ಮಾಡುತ್ತಾರೆ. ಅವರ ನಡೆ ಏನಿರಲಿದೆ ಎಂಬ ಕುತೂಹಲ ಎಲ್ಲ ಕಡೆ ಇದೆ.
ಐದು ತಿಂಗಳಲ್ಲಿ ಐವರ ನಿರ್ಗಮನ: ಕಳೆದ ಐದು ತಿಂಗಳಲ್ಲಿ ಕಾಂಗ್ರೆಸ್‌ನ ಐವರು ಪ್ರಮುಖ ನಾಯಕರು ಪಕ್ಷವನ್ನು ತೊರೆದಿದ್ದಾರೆ. ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥರಾಗಿದ್ದ ಬಲರಾಂ ಜಾಖಡ್‌, ಗುಜರಾತ್‌ ಕಾಂಗ್ರೆಸ್‌ ಕಾರ್ಯಾಧ್ಯಕ್ಷರಾಗಿದ್ದ ಹಾರ್ದಿಕ್‌ ಪಟೇಲ್‌, ಮಾಜಿ ಕೇಂದ್ರ ಮಂತ್ರಿಗಳಾದ ಅಶ್ವಿನ್‌ ಕುಮಾರ್‌, ಆರ್‌ಪಿಎನ್‌ ಸಿಂಗ್‌, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ರಾಜೀನಾಮೆ ಕೊಟ್ಟಿದ್ದಾರೆ.

ಇಷ್ಟರ ನಡುವೆ, ಉಳಿದ ನಾಯಕರು ಏನು ಮಾಡಬಹುದು ಎಂಬ ಕುತೂಹಲವಿದೆ. ಹಾಗಿದ್ದರೆ ಈ ಜಿ-23 ಎಂದರೇನು? ಅದಲ್ಲಿರುವ ನಾಯಕರು ಯಾರು ಎಂಬ ಪುಟ್ಟ ನೋಟ ಇಲ್ಲಿದೆ.

ಜಿ-23 ಎಂದರೇನು?
ಆಗಸ್ಟ್ 2020ರಲ್ಲಿ, 23 ಹಿರಿಯ ಕಾಂಗ್ರೆಸ್ ನಾಯಕರು ಆಗಿನ ಪಕ್ಷದ ಹಂಗಾಮಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ಪಕ್ಷಕ್ಕೆ ಸಕ್ರಿಯ ನಾಯಕತ್ವ ಬೇಕು ಮತ್ತು ಸಾಂಸ್ಥಿಕ ಪುನರುಜ್ಜೀವನ ಆಗಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಲೋಕಸಭೆ ಮತ್ತು ರಾಜ್ಯ ಚುನಾವಣೆಗಳಲ್ಲಿ ಪದೇ ಪದೇ ಆಗುತ್ತಿರುವ ವೈಫಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಆರೋಗ್ಯ ಸ್ಥಿತಿಯ ಕೂಲಂಕುಷ ಪರೀಕ್ಷೆ ಆಗಬೇಕೆಂದು ಒತ್ತಾಯಿಸಿದರು. ಗುಲಾಂ ನಬಿ ಆಜಾದ್ ಮತ್ತು ಕಪಿಲ್ ಸಿಬಲ್ ಸೇರಿದಂತೆ ನಾಯಕರು ಹಲವಾರು ಸಂದರ್ಭಗಳಲ್ಲಿ ಪಕ್ಷದ ನಿಲುವನ್ನು ಧಿಕ್ಕರಿಸಿ ತಮ್ಮ ಬೇಡಿಕೆಯನ್ನು ದೃಢವಾಗಿ ಪ್ರತಿಪಾದಿಸುತ್ತಿದ್ದಾರೆ.

ಜಿ-23ಯಲ್ಲಿ ಯಾರ್ಯಾರಿದ್ದಾರೆ?

1. ಮಾಜಿ ಮುಖ್ಯಮಂತ್ರಿಗಳು
ಭೂಪಿಂದರ್ ಸಿಂಗ್ ಹೂಡಾ: ಅವರು ಹರಿಯಾಣ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರು 2005 ರಿಂದ 2014 ರವರೆಗೆ ಎರಡು ಬಾರಿ ಹರಿಯಾಣದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ರಾಜಿಂದರ್ ಕೌರ್ ಭಟ್ಟಾಲ್: 1996 ರಲ್ಲಿ ಪಂಜಾಬ್‌ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಜನವರಿ 2004 ರಲ್ಲಿ ಅವರು ಪಂಜಾಬ್‌ನ ಉಪ ಮುಖ್ಯಮಂತ್ರಿಯಾಗಿದ್ದರು.
ಪೃಥ್ವಿರಾಜ್ ಚವಾಣ್: 2010 ರಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದವರು.
ಗುಲಾಂ ನಬಿ ಆಜಾದ್: ಅವರು ನವೆಂಬರ್ 2005 ರಿಂದ ಜುಲೈ 2008 ರವರೆಗೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದರು.

2. ವಕೀಲರು
ಕಪಿಲ್ ಸಿಬಲ್: ಅವರು ಮೂರು ಸಂದರ್ಭಗಳಲ್ಲಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ವಿವಿಧ ಸಚಿವಾಲಯಗಳನ್ನೂ ನಿಭಾಯಿಸಿದ್ದಾರೆ.
ಮನೀಶ್ ತಿವಾರಿ: ಅವರು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರಾಗಿದ್ದರು.
ವಿವೇಕ್ ತಂಖಾ: ಅವರು ಮಧ್ಯಪ್ರದೇಶದ ಕಿರಿಯ ಅಡ್ವೊಕೇಟ್ ಜನರಲ್‌ಗಳಲ್ಲಿ ಒಬ್ಬರಾಗಿದ್ದರು. ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ನಡುವಿನ ವಿವಾದಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

3. ಇತರರು
ಮಾಜಿ ಪಿಸಿಸಿ ಮುಖ್ಯಸ್ಥರಾದ ರಾಜ್ ಬಬ್ಬರ್ (ಉತ್ತರ ಪ್ರದೇಶ), ಅರವಿಂದರ್ ಸಿಂಗ್ ಲವ್ಲಿ (ದೆಹಲಿ) ಮತ್ತು ಕೌಲ್ ಸಿಂಗ್ ಠಾಕೂರ್ (ಹಿಮಾಚಲ), ಮಾಜಿ ಹರಿಯಾಣ ಸ್ಪೀಕರ್ ಕುಲದೀಪ್ ಶರ್ಮಾ, ಮಾಜಿ ದೆಹಲಿ ಸ್ಪೀಕರ್ ಯೋಗಾನಂದ ಶಾಸ್ತ್ರಿ ಮತ್ತು ಮೋತಿಹಾರಿ ಕ್ಷೇತ್ರದ ಮಾಜಿ ಸಂಸದ ಅಖಿಲೇಶ್ ಪ್ರಸಾದ್ ಸಿಂಗ್. ಶಂಕರ ಸಿಂಗ್ ವಘೇಲಾ, ಪ್ರಣೀತ್ ಕೌರ್, ಮೊಹಮ್ಮದ್ ಅಲಿ ಖಾನ್ ಮತ್ತು ಮಣಿಶಂಕರ್ ಅಯ್ಯರ್ ಹೊಸದಾಗಿ ಗುಂಪಿಗೆ ಸೇರಿದ್ದಾರೆ.

ಕಾಂಗ್ರೆಸ್‌ ಏನು ಮಾಡುತ್ತಿದೆ?
ಕಾಂಗ್ರೆಸ್‌ ಪಕ್ಷವನ್ನು ಗಾಂಧಿ ಕುಟುಂಬದ ಹಿಡಿತದಿಂದ ಹೊರತರಬೇಕು ಎನ್ನುವುದು ಜಿ-23 ನಾಯಕರ ನಿಲುವು. ಆದರೂ ಕಾಂಗ್ರೆಸ್‌ ಪಕ್ಷ ಇವರನ್ನು ಬಿಟ್ಟು ಕೊಡುವ ಮನಸ್ಥಿತಿಯಲ್ಲಿಲ್ಲ. ಇವತ್ತಲ್ಲ ನಾಳೆ ಹತ್ತಿರ ಬರುತ್ತಾರೆ ಎನ್ನುವುದು ಕಾಂಗ್ರೆಸ್‌ ಪ್ರಧಾನರ ಅಭಿಪ್ರಾಯವಾಗಿರಬಹುದು. ಈ ನಡುವೆ, ಉದಯಪುರದಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಯೋಜಿಸಲಾದ ನವಸಂಕಲ್ಪ ಘೋಷಣೆ ಜಾರಿಗೆ ತರಲು ರಚಿಸಲಾದ ಟಾಸ್ಕ್‌ ಫೋರ್ಸ್‌ ಮತ್ತು ಭಾರತ್‌ ಜೋಡೊ ಯಾತ್ರೆಯಲ್ಲಿ ಜಿ-23 ನಾಯಕರನ್ನೂ ಸೇರಿಸಿಕೊಳ್ಳಲಾಗಿದೆ.

ರಾಹುಲ್ ಗಾಂಧಿ ಮತ್ತು ಜಿ23 ನ ಇಬ್ಬರು ಪ್ರಮುಖ ಸದಸ್ಯರಾದ ಗುಲಾಂ ನಬಿ ಆಜಾದ್ ಮತ್ತು ಆನಂದ್ ಶರ್ಮಾ – ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿದ್ದಾರೆ.

ಟಾಸ್ಕ್ ಫೋರ್ಸ್-2024 ರ ಸದಸ್ಯರೆಂದರೆ- ಪಿ ಚಿದಂಬರಂ, ಮುಕುಲ್ ವಾಸ್ನಿಕ್, ಜೈರಾಮ್ ರಮೇಶ್, ಕೆ ಸಿ ವೇಣುಗೋಪಾಲ್, ಅಜಯ್ ಮಾಕೆನ್, ಪ್ರಿಯಾಂಕಾ ಗಾಂಧಿ ವಾದ್ರಾ, ರಣದೀಪ್ ಸಿಂಗ್ ಸುರ್ಜೆವಾಲಾ ಮತ್ತು ಸುನಿಲ್ ಕಾನುಗೋಲು.

‘ಭಾರತ್ ಜೋಡೋ ಯಾತ್ರೆ’ಯ ಸಮನ್ವಯಕ್ಕಾಗಿ ಕೇಂದ್ರ ಯೋಜನಾ ಸಮಿತಿಯಲ್ಲಿ ದಿಗ್ವಿಜಯ ಸಿಂಗ್, ಸಚಿನ್ ಪೈಲಟ್, ಶಶಿ ತರೂರ್, ರವನೀತ್ ಸಿಂಗ್ ಬಿಟ್ಟೂ, ಕೆ ಜೆ ಜಾರ್ಜ್, ಜ್ಯೋತಿ ಮಣಿ, ಪ್ರದ್ಯುತ್ ಬೊರ್ಡೊಲೊಯ್, ಜಿತು ಪಟ್ವಾರಿ ಮತ್ತು ಸಲೀಮ್ ಅಹ್ಮದ್ ಇದ್ದಾರೆ.

Exit mobile version