Site icon Vistara News

Kargil Vijay Diwas 2024: ಕಾರ್ಗಿಲ್ ಯುದ್ಧದಲ್ಲಿ ನಿರ್ಣಾಯಕವಾಗಿದ್ದ ಟೈಗರ್ ಹಿಲ್; 19 ವರ್ಷದ ಯೋಧನ ರೋಚಕ ಸಾಹಸ!

Kargil Vijay Diwas 2024

ಕಾರ್ಗಿಲ್ ಯುದ್ಧದಲ್ಲಿ (kargil war) ಹಲವು ನಿರ್ಣಾಯಕ ಪ್ರದೇಶಗಳಲ್ಲಿ, ನೆಲೆಗಳಲ್ಲಿ ಭಾರತೀಯ ಸೇನೆ (Indian army) ಪಾಕಿಸ್ತಾನದ (pakistan army) ವಿರುದ್ಧ ಗೆಲುವು ಸಾಧಿಸಿತ್ತು. ಅಂತಹ ಒಂದು ಮಹತ್ವದ ಪ್ರದೇಶ ಟೈಗರ್ ಹಿಲ್ (tiger hill war) . ಇದು ಭಾರತದ ವಿಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಪಾಕಿಸ್ತಾನದ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಭಾರತದ ವಿಜಯದ ನೆನಪಿಗಾಗಿ ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ (Kargil Vijay Diwas 2024) ಆಚರಿಸಲಾಗುತ್ತದೆ.

ಟೈಗರ್ ಹಿಲ್ ಯಾಕೆ ನಿರ್ಣಾಯಕ?

ಟೈಗರ್ ಹಿಲ್ ಅಥವಾ ಪಾಯಿಂಟ್ 5062 ಕಾರ್ಗಿಲ್ ಯುದ್ಧದ ಇತಿಹಾಸದಲ್ಲಿ ಅತ್ಯಂತ ನಿರ್ಣಾಯಕ ಸ್ಥಳವಾಗಿದೆ. ಟೈಗರ್ ಹಿಲ್ ಲಡಾಖ್‌ನ ದ್ರಾಸ್-ಕಾರ್ಗಿಲ್ ಪ್ರದೇಶದಲ್ಲಿನ ಒಂದು ಪರ್ವತವಾಗಿದೆ. ಇದು ಈ ಪ್ರದೇಶದ ಅತಿ ಎತ್ತರದ ಶಿಖರಗಳಲ್ಲಿ ಒಂದಾಗಿದೆ. 1999ರ ಭಾರತ- ಪಾಕಿಸ್ತಾನದ ನಡುವೆ ನಡೆದ ಕಾರ್ಗಿಲ್ ಯುದ್ಧದ ಅತ್ಯಂತ ವಿಶಿಷ್ಟವಾದ ಯುದ್ಧ ವಲಯವಾಗಿತ್ತು.

Kargil Vijay Diwas 2024


ಟೈಗರ್ ಹಿಲ್‌ನ ಮಹತ್ವವೇನು?

ಟೈಗರ್ ಹಿಲ್ ಇಡೀ ಪ್ರದೇಶದಲ್ಲಿ ಅತಿ ಎತ್ತರದ ಬೆಟ್ಟವಾಗಿದೆ. ಇದು ರಾಷ್ಟ್ರೀಯ ಹೆದ್ದಾರಿ 1ಡಿ ಆಗಿದ್ದು, ಶ್ರೀನಗರದಿಂದ ಕಾರ್ಗಿಲ್ ಅನ್ನು ಸಂಪರ್ಕಿಸುತ್ತದೆ. ಕಾರ್ಗಿಲ್ ವಲಯದ ಪ್ರಮುಖ ಸರಬರಾಜು ಮಾರ್ಗವಾಗಿ ಗುರುತಿಸಿಕೊಂಡಿದೆ. ಟೈಗರ್ ಹಿಲ್‌ನ ತುದಿಯಲ್ಲಿರುವ ಯಾವುದೇ ಶತ್ರು ಭಾರತೀಯ ಸೇನೆಯ ಚಲನವಲನ ಮತ್ತು ಶಸ್ತ್ರಾಸ್ತ್ರ ಪೂರೈಕೆಯ ಮೇಲೆ ನೇರ ದೃಷ್ಟಿಯನ್ನು ಇಡಲು ಸಾಧ್ಯವಾಗುತ್ತದೆ.

ಯೋಗೇಂದ್ರ ಯಾದವ್

ಟೈಗರ್ ಹಿಲ್ ವಶಕ್ಕಾಗಿ ನಡೆದ ಹೋರಾಟ ಹೇಗಿತ್ತು?

ಪಾಕಿಸ್ತಾನಿ ಸೇನೆಯು ಜಮ್ಮು ಮತ್ತು ಕಾಶ್ಮೀರದ ಭಾರತದ ಪ್ರದೇಶದೊಳಗೆ ಅಕ್ರಮವಾಗಿ ನುಸುಳಿತ್ತು. ಆಯಕಟ್ಟಿನ ಪ್ರದೇಶವಾದ ಟೈಗರ್ ಹಿಲ್ ಅನ್ನು ವಶಪಡಿಸಿಕೊಂಡಿತ್ತು. ಎತ್ತರದ ಸ್ಥಳದಲ್ಲಿ ಪಾಕ್‌ ಸೈನಿಕರು ಬಂಕರ್‌ ಸ್ಥಾಪಿಸಿಕೊಂಡು ಬೀಡು ಬಿಟ್ಟಿದ್ದರು. ಅಲ್ಲಿಂದ ಅವರನ್ನು ಓಡಿಸುವುದು ಭಾರತೀಯ ಸೇನೆಗೆ ಭಾರಿ ಸವಾಲಾಗಿತ್ತು. ಭಾರತೀಯ ಸೇನೆಯ ಸಿಖ್ ರೆಜಿಮೆಂಟ್‌ಗೆ ಈ ಪ್ರದೇಶವನ್ನು ಮರಳಿ ವಶ ಪಡಿಸಿಕೊಳ್ಳುವ ಟಾಸ್ಕ್‌ ನೀಡಲಾಯಿತು. ದೊಡ್ಡ ಹೋರಾಟ ನಡೆಸಿದ ಬಳಿಕವೂ ಮೊದಲ ಹಂತದಲ್ಲಿ ಸಿಖ್‌ ರೆಜಿಮೆಂಟ್‌ ವಿಫಲವಾಯಿತು. ಆದರೆ ಪಟ್ಟು ಬಿಡದ ಭಾರತೀಯ ಸೇನೆ ಭೂಪ್ರದೇಶವನ್ನು ಮರಳಿ ಪಡೆಯಲು ಸತತ ಪ್ರಯತ್ನಗಳನ್ನು ನಡೆಸಿತು.

ಕಾರ್ಗಿಲ್- ದ್ರಾಸ್ ಪ್ರಾಂತ್ಯದಲ್ಲಿ ಟೈಗರ್ ಹಿಲ್ ಪ್ರಮುಖವಾಗಿತ್ತು. ಇದನ್ನು ಏರಿ ಕುಳಿತಿದ್ದ ಪಾಕಿಗಳನ್ನು ಹಿಮ್ಮೆಟ್ಟಿಸದೆ ವಿಜಯ ಪೂರ್ಣವಾಗಲು ಸಾಧ್ಯವಿರಲಿಲ್ಲ. ಇದು ಭಾರತದ ಕಡೆಯಿಂದ ಏರಲು ತುಂಬಾ ಕಠಿಣವಾದ ಮೈ ಹೊಂದಿದೆ. ಎತ್ತರದಲ್ಲಿ ಪಾಕ್ ಸೈನಿಕರು ಕುಳಿತಿದ್ದು, ಕೆಳಗಿನಿಂದ ಬರುತ್ತಿದ್ದ ಭಾರತೀಯ ಸೈನಿಕರನ್ನು ಸುಲಭವಾಗಿ ಸಾಯಿಸುತ್ತಿದ್ದರು. ಇಲ್ಲಿಂದ ಅವರಿಗೆ ಭಾರತದ ಹೆದ್ದಾರಿ ಎನ್‌ಎಚ್1ಎ ಕಾಣಿಸುತ್ತಿತ್ತು. ಅಲ್ಲಿಂದಲೇ ಹೆದ್ದಾರಿಯ ಮೇಲೆ ಬಾಂಬ್ ಸುರಿಮಳೆಯನ್ನೂ ಸುರಿಸಿ, ಭಾರತೀಯ ಸೇನೆಯ ವಾಹನಗಳು ಓಡಾಡಲಾಗದಂತೆ ಮಾಡಿಬಿಟ್ಟಿದ್ದರು. ಇದನ್ನು ವಶಪಡಿಸಿಕೊಳ್ಳುವುದು ಮುಖ್ಯವಾಗಿತ್ತು. ಜುಲೈ 1ರ ಹೊತ್ತಿಗೆ ಟೈಗರ್ ಹಿಲ್‌ನ ಅಕ್ಕಪಕ್ಕದ ಬೆಟ್ಟಗಳನ್ನು 8 ಸಿಖ್ ರೆಜಿಮೆಂಟ್ ವಶಪಡಿಸಿಕೊಂಡಿತ್ತು. ಟೈಗರ್ ಹಿಲ್ ಅನ್ನು ಕೆಳಗಿನಿಂದ ಏರಲು 18 ಗ್ರೆನೆಡಿಯರ‍್ಸ್ ಪಡೆ ಸಜ್ಜಾಯಿತು. ಡಿ ಕಂಪನಿ ಮತ್ತು ಘಾತಕ್ ಪ್ಲಟೂನ್‌ಗಳ ಕ್ಯಾಪ್ಟನ್ ಸಚಿನ್ ನಿಂಬಾಳ್ಕರ್ ಮತ್ತು ಲೆ.ಬಲವಾನ್ ಸಿಂಗ್ ಅವರು ವೈರಿಗಳಿಗೆ ಆಶ್ಚರ್ಯವಾಗುವಂತೆ, ಕಡಿದಾದ ಶಿಖರದ ಕಡೆಯಿಂದ ಏರಿ, ಗುಂಡಿನ ದಾಳಿ ಆರಂಭಿಸಿದರು.

ಇನ್ನೊಂದು ಕಡೆಯಿಂದ 8 ಸಿಖ್ ರೆಜಿಮೆಂಟ್ ಗುಂಡಿನ ದಾಳಿ ನಡೆಸಿತು. ಬೆಟ್ಟದ ಕಡಿದಾದ ಮೈಯಿಂದ ಹವಿಲ್ದಾರ್ ಮದನ್‌ಲಾಲ್ ಎಂಬ ಧೀರಯೋಧ ತನ್ನ ಪರ್ವತಾರೋಹಿ ಕೌಶಲ್ಯವನ್ನೆಲ್ಲ ಬಳಸಿ ಕಣ್ಣುಕುಕ್ಕುವ ಕಗ್ಗತ್ತಲಿನಲ್ಲಿ ರಾತ್ರಿಯಿಡೀ ಬೆಟ್ಟವೇರಿದ. ಮುಂಜಾನೆ ಶತ್ರುಗಳ ಮೇಲೆ ಇದಕ್ಕಿದ್ದಂತೆ ಎರಗಿದ. ದಿಕ್ಕು ತೋಚದಂತಾದ ವೈರಿಗಳು ಭಯಭೀತರಾಗಿ ಕಾಲಿಗೆ ಬುದ್ಧಿ ಹೇಳಿದರು; ಇಲ್ಲವೇ ಭಾರತೀಯ ಸೈನಿಕರ ಕೈಯಲ್ಲಿ ಹತರಾದರು. ಈ ಯುದ್ಧದಲ್ಲಿ ಗಾಯಗೊಂಡ ಮದನ್‌ಲಾಲ್ ಹುತಾತ್ಮನಾದ. ಯೋಧ ಯೋಗೇಂದ್ರ ಯಾದವ್ ಏಕಾಂಗಿಯಾಗಿ ಹೋರಾಡುತ್ತಾ ಹತ್ತಾರು ಪಾಕ್‌ ಯೋಧರನ್ನು ಕೊಂದರು. 18 ಗ್ರೆನೆಡಿಯರ್ಸ್‌ ನಿರಂತರವಾಗಿ ಶೆಲ್ ದಾಳಿಗಳನ್ನು ನಡೆಸುತ್ತ ವೈರಿಗಳ ದಿಕ್ಕೆಡಿಸಿದರು. ಟೈಗರ್ ಹಿಲ್ ವಿಜಯ ನಿರ್ಣಾಯಕವಾಗಿತ್ತು. ಈ ಎತ್ತರದ ಬೆಟ್ಟವನ್ನು ಗೆದ್ದ ಬಳಿಕ ಉಳಿದ ಬೆಟ್ಟಗಳನ್ನು ಗೆಲ್ಲಲು ಸುಲಭವಾಯಿತು.

Kargil Vijay Diwas 2024


ಅಂತಿಮವಾಗಿ 1999ರ ಜುಲೈ 3ರಂದು ಸಂಜೆ 5.15ಕ್ಕೆ ಟೈಗರ್ ಹಿಲ್ ಅನ್ನು ಪುನಃ ವಶಪಡಿಸಿಕೊಳ್ಳುವ ಅಂತಿಮ ಪ್ರಯತ್ನ ಪ್ರಾರಂಭವಾಯಿತು. ಈ ಯುದ್ಧ ಹಲವಾರು ದಿನಗಳವರೆಗೆ ನಡೆಯಿತು. ಸಿಖ್ ರೆಜಿಮೆಂಟ್, ನಾಗಾ ರೆಜಿಮೆಂಟ್ ಗ್ರೆನೇಡಿಯರ್ಸ್ ಮತ್ತು ಘಾತಕ್ ಪ್ಲಟೂನ್‌ನೊಂದಿಗೆ ಒಟ್ಟುಗೂಡಿ ಇಡೀ ಬೆಟ್ಟವನ್ನು ಸುತ್ತುವರಿಯಲಾಯಿತು. ಬೆಟ್ಟದ 1000 ಅಡಿ ಎತ್ತರವನ್ನು ಏರಿ ಬೆಟ್ಟದ ತುದಿಯಲ್ಲಿದ್ದ ಶತ್ರುಗಳ ಮೇಲೆ ಭಾರೀ ಫಿರಂಗಿ ದಾಳಿ ನಡೆಸಲಾಯಿತು. ಹಲವಾರು ದಿನಗಳ ಹೋರಾಟದ ಬಳಿಕ ಭಾರತೀಯ ಸೇನೆಯು ಟೈಗರ್ ಹಿಲ್ ಅನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿತು.

ಇದನ್ನೂ ಓದಿ : Kargil Vijay Diwas 2024: ಗುಂಡುಗಳು ದೇಹ ತೂರಿದ್ದರೂ ಹಿಂದೆ ಸರಿಯದೆ ಶತ್ರುಗಳನ್ನು ಹಿಮ್ಮೆಟ್ಟಿಸಿದರು!

ಕಾರ್ಗಿಲ್ ಯುದ್ಧದ ಸಮಯದಲ್ಲಿ ಟೈಗರ್ ಹಿಲ್ ಅನ್ನು ಪುನಃ ವಶಪಡಿಸಿಕೊಳ್ಳಲು ಪ್ರಮುಖ ಕಾರಣರಾದ ಗ್ರೇನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಅವರಿಗೆ ಪರಮವೀರ ಚಕ್ರವನ್ನು ನೀಡಿ ಗೌರವಿಸಲಾಯಿತು. 19ನೇ ವಯಸ್ಸಿನಲ್ಲಿ ಈ ಗೌರವವನ್ನು ಪಡೆದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ ಯೋಗೇಂದ್ರ ಸಿಂಗ್. ಮಹತ್ವದ ಸಂಗತಿ ಎಂದರೆ ಯೋಗೇಂದ್ರ ಯಾದವ್‌ಗೆ ಈ ಹೋರಾಟದಲ್ಲಿ 18 ಗುಂಡುಗಳು ಬಿದ್ದಿದ್ದವು! ಅವರು ಬದುಕುಳಿದಿದ್ದೇ ಪವಾಡ!

Exit mobile version