Site icon Vistara News

Kargil Vijay Diwas: ಕೆಚ್ಚೆದೆಯ ಸಮರ ಸಾಹಸಿಗಳ ಸ್ಮರಿಸೋಣ…

kargil

ಮಯೂರಲಕ್ಷ್ಮೀ

ಆರ್ಥಿಕವಾಗಿ ಮತ್ತು ರಾಜಕೀಯವಾಗಿ ವಿಶ್ವದಲ್ಲಿ ತನ್ನ ಛಾಪು ಮೂಡಿಸಲಾಗದ ಪಾಕಿಸ್ತಾನ, ಕಾಶ್ಮೀರದ ಮೇಲೆ ನಡೆಸಿದ ನಿರಂತರ ಆಕ್ರಮಣಗಳ ಪರಿಣಾಮವೇ ಕಾರ್ಗಿಲ್ ಯುದ್ಧ. ಶ್ರೀನಗರದಿಂದ 205 ಕಿಲೋ ಮೀಟರ್ ದೂರದಲ್ಲಿರುವ “ಕಾರ್ಗಿಲ್” ಜಿಲ್ಲೆ, ಸಿಂಧು ನದಿಯ ಬತಾಲಿಕ್ ವಲಯಗಳ ಭಾರತ-ಪಾಕಿಸ್ತಾನ ಉಭಯ ರಾಷ್ಟ್ರಗಳ ಗಡಿ ನಿಯಂತ್ರಣ ರೇಖೆಯ ಉತ್ತರದ ಕಡೆಗೆ ರಾಷ್ಟ್ರೀಯ ಹೆದ್ದಾರಿ-1ರ ಕಡೆಗೆ ಪಾಕ್ ಸೈನಿಕರು ನುಸುಳಿದ್ದನ್ನು ಕಂಡು ಅಲ್ಲಿನ ದನಗಾಹಿಗಳು ಭಾರತೀಯ ಸೇನಾ ನೆಲೆಯ ಗಮನಕ್ಕೆ ತಂದರು.

ಮೇ 3, 1999ರಿಂದ ಆರಂಭವಾಗಿ ಜುಲೈ ತಿಂಗಳ 26ರವರೆಗೆ ನಡೆದದ್ದು ಸಶಸ್ತ್ರ ಕಾರ್ಗಿಲ್ ಯುದ್ಧ. ಮೇ ಎರಡನೇ ವಾರದಲ್ಲಿ ಪಾಕ್ ಸೈನಿಕರು ಡ್ರಾಸ್, ಮುಷೋಕ್ ಇನ್ನಿತರ ಪ್ರಾಂತ್ಯಗಳಲ್ಲಿ ಭಾರತೀಯ ಜಾಗಗಳಲ್ಲಿ ಸೇರಿಕೊಂಡರು. ಕ್ಯಾಪ್ಟನ್ ಸೌರವ್ ಕಾಲಿಯಾ ನೇತೃತ್ವದಲ್ಲಿ ರಕ್ಷಣಾತ್ಮಕ ಕದನ ಅರಂಭವಾಯಿತು. ಮೇ 26ರಂದು ಫ್ಲೈಟ್ ಲೆಫ್ಟಿನೆಂಟ್ ನಚಿಕೇತ ಅವರ ಮಿಗ್-27 ವಾಯುವಿಮಾನ ಬೆಂಕಿಗಾಹುತಿಯಾಗಿ ಅವರು ಪಾಕ್ ಕೈವಶವಾದರು. ಏಳು ದಿನಗಳು ಪಾಕ್‍ನ ಸೆರೆಯಲ್ಲಿದ್ದು ನಂತರ ಜೂನ್ 3, 1999ರಂದು ಮತ್ತೆ ಭಾರತಕ್ಕೆ ಅವರನ್ನು ಹಸ್ತಾಂತರಿಸಲಾಯಿತು. ತೀವ್ರವಾಗಿ ಗಾಯಗೊಂಡರೂ ದಿಟ್ಟತನದಿಂದ ಹೋರಾಡಿ ಬದುಕುಳಿದ ಸಾಹಸಿ ನಚಿಕೇತ್‍ರವರು.

ಸಿಂಹದಂತೆ ಗರ್ಜಿಸಿ ದಿಟ್ಟತನದಿಂದ ಹೋರಾಡಿದ ಸ್ಕ್ವಾಡ್ರನ್ ಲೀಡರ್ ಅಜಯ್ ಅಹುಜಾ ತನ್ನ ವಾಯುವಿಮಾನದಿಂದ “ಲ್ಯಾಂಡಿಂಗ್”ನಲ್ಲಿದ್ದಾಗಲೇ ಪಾಕಿಸ್ತಾನ ಸೈನಿಕರು ಅವರ ಮೇಲೆ ಗುಂಡಿನ ಮಳೆಗರೆದರು. ಎಡಗಿವಿಯ ಬಳಿ ಗುಂಡು ಒಳಹೊಕ್ಕಿತ್ತು. ಪಾಕಿಸ್ಥಾನಿ ಸೈನಿಕರಿಂದ ನಾನಾ ರೀತಿ ಚಿತ್ರ ಹಿಂಸೆಗೆ ಗುರಿಯಾಗಿ ಛಿದ್ರವಾಗಿದ್ದ ಅವರ ಶರೀರ ಭಾರತಕ್ಕೆ ದೊರೆಯಿತು. ಅಜಯ್ ಅಹುಜಾ ಅವರ ಸಾವು ಅತ್ಯಂತ ಅಮಾನುಷ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಭಾರತ ಪ್ರತಿಭಟಿಸಿತು.

ತೀವ್ರಗೊಂಡ ಯುದ್ಧದ ಪರಿಸ್ಥಿತಿ. ಜೂನ್ 13ರಂದು ನಮ್ಮ ಸೈನಿಕರಿಂದ ಮುಖ್ಯವಾದ “ಟೋಲೋಲಿಂಗ್ ಪರ್ವತ” ಮತ್ತೆ ಭಾರತಕ್ಕೆ ಮರಳಿತು. 22 ದಿನಗಳು ಪಾಕ್ ಸೇನೆಯ ವಶದಲ್ಲಿದ್ದ ಸೌರವ್ ಕಾಲಿಯಾ ಮತ್ತವರ ಸಂಗಡಿಗರನ್ನು ಚಿತ್ರಹಿಂಸೆಯಿಂದ ನಿರ್ದಾಕ್ಷಿಣ್ಯವಾಗಿ ಕೊಂದದ್ದಲ್ಲದೇ ಅವರ ಶರೀರ ದೊರೆತಾಗ ಅಂಗಹೀನವಾಗಿದ್ದ ಸ್ಥಿತಿ.

ಕ್ಯಾಪ್ಟನ್ ವಿಕ್ರಂ ಬಾತ್ರಾ, ಮೇಜರ್ ಪದ್ಮಪಾಣಿ ಆಚಾರ್ಯ, ಲೆಫ್ಟಿನೆಂಟ್ ಭಟ್ಟಾಚಾರ್ಯ, ಕೇಸಿಂಗ್ ನಿಂಗ್ರಾಂ, ಇನ್ನೂ 527 ವೀರರ ಬಲಿದಾನವಾಯಿತು. ಬದುಕುಳಿದವರು ಫ್ಲೈಟ್ ಲೆಫ್ಟಿನೆಂಟ್ ನಚಿಕೇತ್, ಮೇಜರ್ ಸೋನಂ ವಾಂಗ್‍ಚುಕ್, ಇನ್ನೂ ಮುಂತಾದ 1300ಕ್ಕೂ ಹೆಚ್ಚಿನ ಭಾರತದ ಯೋಧರು. ಇವರೆಲ್ಲರ ಬಲಿದಾನ ಮತ್ತು ತ್ಯಾಗಗಳ ಫಲವೇ, ತನ್ನ ದೇಶವನ್ನು ಶತ್ರುಗಳ ಕರಾಳ ಹಸ್ತದಿಂದ ಮುಕ್ತಗೊಳಿಸುವ ಛಲವೇ ಅಂತಿಮವಾಗಿ ವಿಜಯದ ಸಂಕೇತವಾಯ್ತು.

200,000ಕ್ಕೂ ಹೆಚ್ಚು ಸೈನಿಕರನ್ನೊಳಗೊಂಡ ಸೇನೆಯ ತುಕಡಿಗಳು ಹಗಲು ರಾತ್ರಿಯೆನ್ನದೇ, ಕೊರೆವ ಚಳಿಯಲ್ಲಿ ಹಿಮದಲ್ಲಿ “ಆಪರೇಶನ್ ವಿಜಯ್” ಮತ್ತು ವಾಯಸೇನೆಯ “ಆಪರೇಶನ್ ಸಫೇದ್ ಸಾಗರ್” ಕಾರ್ಯಾಚರಣೆ ನಡೆಸಿದವು. ಕಾರ್ಗಿಲ್-ಡ್ರಾಸ್ ಪ್ರಾಂತ್ಯಗಳಲ್ಲಿ ನಿರಂತರವಾಗಿ ಸಾಗಿದ 2 ತಿಂಗಳ ಸಂಘರ್ಷದ ನಂತರ ಅನೇಕ ಶಿಖರಗಳನ್ನು ಭಾರತದ ಪಡೆಗಳು ಮರುವಶಕ್ಕೆ ತೆಗೆದುಕೊಂಡವು.

ಭಾರತದ ಶಕ್ತಿಯ ಅರಿವಿದ್ದ ಪಾಕ್ ಸೋಲು ಖಚಿತವೆಂದು ಅರಿವಾದಾಗ ತನ್ನ ವಶದಲ್ಲಿದ್ದ ಭಾರತದ ಸೈನಿಕರನ್ನು ಅಮಾನುಷವಾಗಿ ನಡೆಸಿಕೊಂಡಿತು. ಭಾರತೀಯ ಯೋಧರನ್ನು ಚಿತ್ರಹಿಂಸೆಗಳಿಂದ ಕೊಂದ ರೀತಿಗೆ ವಿಶ್ವದೆಲ್ಲೆಡೆ ವಿರೋಧ ವ್ಯಕ್ತವಾದಾಗ ಪಾಕಿಸ್ತಾನಕ್ಕೆ ಹಿನ್ನಡೆಯಾಯಿತು. ಕಾರ್ಗಿಲ್ ಯುದ್ಧದ ಆರಂಭದಲ್ಲಿ ತನ್ನ ಸೇನೆಯು ಗಡಿಯಲ್ಲಿರುವುದನ್ನು ಒಪ್ಪಿಕೊಳ್ಳದೆ ಮುಜಾಹಿದೀನ್‍ನಂತಹ ಕಾಶ್ಮೀರ ಪ್ರತ್ಯೇಕವಾದಿಗಳ ಮೇಲೆ ದೋಷಾರೋಪಣೆ ಮಾಡಿತ್ತು. ನಂತರ ಭಾರತದಿಂದ ಸೋಲು ಅನುಭವಿಸಿ ತನ್ನ ಕುಟಿಲ ನೀತಿಯನ್ನು ಒಪ್ಪಿಕೊಳ್ಳಬೇಕಾಯಿತು.

ಪಾಕ್ ಅಮೇರಿಕಾವನ್ನು ಮಧ್ಯ ಪ್ರವೇಶಿಸಲು ಕೇಳಿದಾಗ ಅಮೆರಿಕಾ ನಿರಾಕರಿಸಿದ್ದಲ್ಲದೆ ಪಾಕ್ ತನ್ನ ಸೇನೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಆದೇಶ ನೀಡಿತು. ಅಂದಿನ ಜಿ-8 ರಾಷ್ಟ್ರಗಳು ಪಾಕಿಸ್ತಾನದ ಈ ಕೃತ್ಯವನ್ನು ತೀವ್ರವಾಗಿ ಪ್ರತಿಭಟಿಸಿ ಭಾರತವನ್ನು ಸಮರ್ಥಿಸಿದವು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳೊಂದಿಗೆ ಗಡಿಗಳನ್ನು ಇನ್ನಷ್ಟು ಬಲಿಷ್ಠಗೊಳಿಸಲು ಆದೇಶ ನೀಡಿದರು.

ಭಾರತಮಾತೆಯ ಮಡಿಲಲ್ಲಿ ದೇಶರಕ್ಷಣೆಯ ಕಂಕಣ ಕಟ್ಟಿದ್ದ ನಮ್ಮ ಸೈನಿಕರು ವೀರಸ್ವರ್ಗವನ್ನೇ ಪಡೆದರು. ಜಮ್ಮು ಕಾಶ್ಮೀರದಲ್ಲಿ ಕಾರ್ಗಿಲ್, ಡ್ರಾಸ್, ಬತಾಲಿಕ್ ಸತತವಾಗಿ ಎರಡು ತಿಂಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ 400ಕ್ಕೂ ಹೆಚ್ಚು ಸೈನಿಕರನ್ನು ಈ ದೇಶ ಕಳೆದುಕೊಂಡಿತು. ದೇಶಾದ್ಯಂತ ಜುಲೈ 26ರಂದು ಕಾರ್ಗಿಲ್ ವಿಜಯ ದಿನವನ್ನು ನಮ್ಮ ರಕ್ಷಣಾ ಇಲಾಖೆ ಮತ್ತು ದೇಶಭಕ್ತ ಭಾರತೀಯರೆಲ್ಲರೂ ಹೆಮ್ಮೆಯಿಂದ ಆಚರಿಸುತ್ತಾರೆ.

ನೆನೆಯಬೇಕಾದ ಪ್ರಮುಖ ಸಾಹಸಿಗಳು:

ಲೆಫ್ಟಿನೆಂಟ್ ಮನೋಜ ಕುಮಾರ್ ಪಾಂಡೇ ಗೂರ್ಖಾ ರೈಫಲ್ಸ್- ಪರಮ ವೀರ ಚಕ್ರ- ಮರಣೋತ್ತರ
ಕ್ಯಾಪ್ಟನ್ ವಿಕ್ರಂ ಭಾತ್ರಾ- ಪರಮ ವೀರ ಚಕ್ರ – ಮರಣೋತ್ತರ
ಕ್ಯಾಪ್ಟನ್ ಅನುಜ್ ನಾಯರ್- ಜಾಟ್ ರೆಜಿಮೆಂಟ್- ಮಹಾ ವೀರ ಚಕ್ರ ಮರಣೋತ್ತರ
ಮೇಜರ್ ರಾಜೇಶ್ ಅಧಿಕಾರಿ, 18 ಗ್ರೇನೇಡಿಯರ್ಸ್- ಮಹಾ ವೀರ ಚಕ್ರ ಮರಣೋತ್ತರ
ಸ್ಕ್ವಾಡ್ರನ್ ಲೀಡರ್ ಅಜಯ್ ಅಹುಜಾ ಏರ್‍ಫೋರ್ಸ್ – ವೀರ್ ಚಕ್ರ ಮರಣೋತ್ತರ
ಗ್ರೆನೇಡಿಯರ್ ಯೋಗೇಂದರ್ ಸಿಂಗ್ ಯಾದವ್, 18 ಗ್ರೆನೇಡಿಯರ್ಸ್– ಪರಮವೀರ ಚಕ್ರ
ರೈಫಲ್‍ಮ್ಯಾನ್ ಸಂಜಯ ಕುಮಾರ್- ಪರಮ ವೀರ ಚಕ್ರ
ಫ್ಲೈಟ್ ಲೆಫ್ಟಿನೆಂಟ್ ನಚಿಕೇತ್- ವಾಯುಸೇನಾ ಪದಕ

ಇದನ್ನೂ ಓದಿ: Kargil Vijay Diwas: ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಸೊಕ್ಕು ಮುರಿದ ಭಾರತ!

Exit mobile version